ರಾಕಿಂಗ್ ಸ್ಟಾರ್ ಯಶ್‌ಗೂ 08ರ ಸಂಖ್ಯೆಗೂ ಇದೆ ವಿಶೇಷವಾದ ನಂಟು..!
'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ.
ಆದರೆ, ಯಶ್ ಮಾತ್ರ ಮಾತನಾಡುತ್ತಿಲ್ಲ. ಅವರ ಅಭಿಮಾನಿಗಳು ಎಷ್ಟೇ ಗೋಗರೆದರೂ 'ಟಾಕ್ಸಿಕ್' ಚಿತ್ರದ ಬಗ್ಗೆ ಮೌನ ಮುರಿಯುತ್ತಿಲ್ಲ. ಇನ್ನೂ .. ನಿಮಗೆ ಗೊತ್ತು ಹಿಂದೆ ಇನ್ನೇನು ಅಭಿಮಾನಿಗಳು 'ತಾಜ್ ವೆಸ್ಟೆಂಡ್' ಮುಂದೆ ಹೋಗಿ ಧರಣಿ ಕೂರಬೇಕು ಅನ್ನುವಷ್ಟರಲ್ಲಿ, ಯಶ್ 'ಟಾಕ್ಸಿಕ್' ಚಿತ್ರವನ್ನೂ ಘೋಷಿಸಿದ್ದರು. ಈ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದರು.

ನಿಜಾ. ಈ ಚಿತ್ರಕ್ಕೆ ನೀವೆಲ್ಲ ಹೆಚ್ಚು ಕಡಿಮೆ ಒಂದೂವರೆ ವರ್ಷ ಕಾಯಬೇಕು ಎಂದು ಯಶ್ ಹೇಳಿದ ನಂತರ ಇವರ ಅನೇಕ ಅಭಿಮಾನಿಗಳಿಗೆ ಬೇಸರವಾಗಿತ್ತು. ಆದರೂ ಅದ್ಹೇಗೋ ಒಟ್ನಲ್ಲಿ ತಮ್ಮ ಮುಂದಿನ ಚಿತ್ರ ಯಾವುದು ಎನ್ನುವುದನ್ನಾದರೂ ಹೇಳಿದರಲ್ಲ ಅಷ್ಟೇ ಸಾಕು ಎಂದು ಆ ನಂತರ ಅಭಿಮಾನಿಗಳು ತಮಗೆ ತಾವೇ ಸಮಾಧಾನವನ್ನೂ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡಿದ್ದರು.
ಆದರೆ ಈ 'ಡಿಸೆಂಬರ್' ಬಂದರೆ 'ಟಾಕ್ಸಿಕ್' ಚಿತ್ರದ ಕುರಿತು ಯಶ್ ಮಾತನಾಡಿ ಒಂದು ವರ್ಷವಾಗಲಿದೆ. ಇಲ್ಲಿಯವರೆಗೆ ಒಂದು ದಿನದ ಚಿತ್ರೀಕರಣ ಕೂಡ ನಡೆದಿಲ್ಲ. ಹೀಗಾಗಿಯೇ ಯಶ್ ಅಭಿಮಾನಿಗಳು ಚಿಂತೆಯಲ್ಲಿ ಮುಳುಗಿದ್ದಾರೆ. ಹಿಂದೆ ಯಶ್ ನಮಗೆಲ್ಲ ಭರವಸೆ ನೀಡಿದಂತೆ ಚಿತ್ರವನ್ನು '2025ರ ಏಪ್ರಿಲ್ 10'ರಂದು ಬಿಡುಗಡೆ ಮಾಡ್ತಾರಾ, ಇಲ್ಲವಾ ಎಂದು ತಮ್ಮ ತಮ್ಮಲ್ಲಿ ಚರ್ಚೆಯನ್ನೂ ಮಾಡುತ್ತಿದ್ದಾರೆ. ಹೀಗಿರುವಾಗ 'ಟಾಕ್ಸಿಕ್' ಚಿತ್ರದ ಚಿತ್ರೀಕರಣವನ್ನೂ ಯಶ್ ಕೊನೆಗೂ ಶುರು ಮಾಡಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ಹೌದು, ಯಶ್ ತಮ್ಮ ಮಹತ್ವಕಾಂಕ್ಷೆಯ 'ಟಾಕ್ಸಿಕ್' ಚಿತ್ರದ ಚಿತ್ರೀಕರಣವನ್ನು ಈ ಆಗಸ್ಟ್ 08ರಂದು ಅಂದರೆ ನಾಳೆ ಶುರು ಮಾಡಲಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಉತ್ತರದಿಂದ ದಕ್ಷಿಣದವರೆಗೆ ಸದ್ಯಕ್ಕೆ ಕೇಳಿ ಬರುತ್ತಿದೆ. 08ನೇ ತಾರೀಖಿನಂದೇ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲು ಕಾರಣವೇನು ಎಂಬ ಚರ್ಚೆ ಕೂಡ ನಡೆಯುತ್ತಿದೆ. '08ರ ಸಂಖ್ಯೆಗೂ ಯಶ್ ಅವರಿಗೂ ಒಂದು ನಂಟು' ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ನಿಮಗೆ ಗೊತ್ತಿರಲಿ, ಅಭಿಮಾನಿಗಳ ಆಗ್ರಹದ ಮೇರೆಗೆ ಯಶ್ ತಮ್ಮ 'ಟಾಕ್ಸಿಕ್' ಚಿತ್ರದ ಕುರಿತು ಕಳೆದ ವರ್ಷ ಡಿಸೆಂಬರ್ 08ರಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಇನ್ನೂ.. ಯಶ್ ಅವರ ಜನ್ಮ ದಿನಾಂಕ ಜನವರಿ 08. ಹೀಗಾಗಿಯೇ ಯಶ್ 08ನೇ ತಾರೀಖಿನಂದು ಚಿತ್ರದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದಾರೆ ಎನ್ನುವ ವಾದವನ್ನು ಅನೇಕರು ಮಾಡುತ್ತಿದ್ದಾರೆ. 08ರ ಸಂಖ್ಯೆಯಲ್ಲಿಯೇ ಯಶ್ ಗೆಲುವಿನ ಗುಟ್ಟು ಅಡಗಿದೆ ಎಂಬ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಒಟ್ನಲ್ಲಿ ಕಾಯಿಸಿ, ಸತಾಯಿಸಿ ಕೊನೆಗೂ ಯಶ್ ತಮ್ಮ ಹೊಸ ಕನಸು 'ಟಾಕ್ಸಿಕ್' ಚಿತ್ರದ ಚಿತ್ರೀಕರಣವನ್ನ ನಾಳೆಯಿಂದ ಶುರು ಮಾಡಲಿದ್ದಾರೆ ಅನ್ನುವುದು ಸದ್ಯಕ್ಕೆ ಸಮಾಧಾನದ ಸಂಗತಿ. ನಾಳೆ ಆರಂಭವಾಗಲಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗುವುದು ಯಾವಾಗ..? ಚಿತ್ರದಲ್ಲಿ ಯಾರೆಲ್ಲ ಇದ್ದಾರೆ..? ಅನ್ನುವುದು ಸದ್ಯದ ಕುತೂಹಲ.


Click it and Unblock the Notifications











