"ಹತ್ತಿದ ಏಣಿ ಒದ್ದು ಬಿಟ್ಟರು ಯಶ್, ಅವ್ರಿಗೆ 2 ಮುಖ ಇದೆ"; ಮೈಸೂರ್ ನಾಗರಾಜ್ ಆಕ್ರೋಶ
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ಇದೀಗ ಬಣ್ಣ ಹಚ್ಚುತ್ತಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ, ನಿರ್ಮಾಪಕರಾಗಿಯೂ ಎರಡೂ ಸಿನಿಮಾಗಳ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಯಾವುದೇ ಸಿನಿಮಾ ಇಲ್ಲದೇ ಬಂದ ಬಸ್ ಡ್ರೈವರ್ ಮಗ ಯಶ್ ಇವತ್ತು ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ.
ಯಶ್ ಜೊತೆ ಸಿನಿಮಾ ಮಾಡಲು ಈಗ ಭಾರತೀಯ ಚಿತ್ರರಂಗದ ಸ್ಟಾರ್ ಫಿಲ್ಮ್ ಮೇಕರ್ಸ್ ಕಾಯ್ತಿದ್ದಾರೆ. ಕೆಲಸದ ಮೇಲಿನ ಶ್ರದ್ಧೆ, ಕಠಿಣ ಪರಿಶ್ರಮ, ಅದೃಷ್ಟ ಹಾಗೂ ತಮ್ಮ ಬುದ್ಧಿವಂತಿಕೆಯಿಂದ ಯಶ್ ಇವತ್ತು ಆ ಸ್ಥಾನಕ್ಕೆ ಏರಿದ್ದಾರೆ. ಭಾರತೀಯ ಚಿತ್ರರಂಗವೇ ಮತ್ತೆ ಕನ್ನಡ ಚಿತ್ರರಂಗದತ್ತ ತಿರುಗು ನೋಡುವಂತಹ ಸಿನಿಮಾಗಳನ್ನು ಮಾಡಿದ್ದಾರೆ. ಮುಂದೆ ಹಾಲಿವುಡ್ ಮಂದಿ ಕೂಡ ಇತ್ತ ನೋಡುವಂತೆ ಸಿನಿಮಾಗಳನ್ನು ಕಟ್ಟಿಕೊಡುವ ಕನಸು ಕಂಡಿದ್ದಾರೆ. ಅದನ್ನು ನನಸು ಮಾಡಿಕೊಳ್ಳುವತ್ತ ಮುನ್ನಡೆಯುತ್ತಿದ್ದಾರೆ. ಮುಂದೆ ನನ್ನ ಮಗ ಯಶ್ ನಟನೆಯ ಸಿನಿಮಾ ನಿರ್ಮಾಣ ಮಾಡಲು 2000 ಕೋಟಿ ರೂ. ಬಂಡವಾಳ ಬೇಕು ಎಂದು ತಾಯಿ ಪುಷ್ಪಾ ಹೆಮ್ಮೆಯಿಂದ ಹೇಳುತ್ತಾರೆ.

ಸಿನಿಮಾ ಹಿನ್ನಲೆ ಇಲ್ಲದೇ ಬಂದು ಯಶ್ ಹೀರೊ ಆಗಿ ಗೆಲ್ಲಲು ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ಆದರೆ ಯಶ್ ಈಗ ಹತ್ತಿದ ಏಣಿ ಒದ್ದಿದ್ದಾನೆ ಎಂದು ಮೈಸೂರ್ ನಾಗರಾಜ್ ಎಂಬುವವರು ಅಸಮಾಧಾನ್ ವ್ಯಕ್ತಪಡಿಸಿದ್ದಾರೆ. ಕೆಲ ಸಿನಿಮಾ ಹಾಗೂ ಧಾರಾವಾಹಿಗಳಿಗೆ ನಾಗರಾಜ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಮುನ್ನ ಯಶ್ 'ನಂದಗೋಕುಲ' ಧಾರಾವಾಹಿಯಲ್ಲಿ ನಟಿಸಿದ್ದರು. ಅದೇ ವೇಳೆ ನವೀನ್ ಗೌಡ ಅರ್ಥಾತ್ ಯಶ್ ಹಾಗೂ ನಾಗರಾಜ್ ಪರಿಚಯವಾಗಿತ್ತಂತೆ. ನವೀನ್ ಗೌಡ 'ಜಂಭದ ಹುಡುಗಿ' ಚಿತ್ರದಲ್ಲಿ ನಾಯಕನಾಗಿ ನಟಿಸೋಕೆ ನಾನೇ ಕಾರಣ ಎಂದು 'ವಿಜಯ ವಾಹಿನಿ' ಯೂಟ್ಯೂಬ್ ಸಂದರ್ಶನದಲ್ಲಿ ನಾಗರಾಜ್ ಹೇಳಿದ್ದಾರೆ. ಯಶ್ ಅಂದಿನ ದಿನಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.
"ಯಶ್.. ಒಂದ್ಕಾಲದಲ್ಲಿ ನವೀನ್‌ಕುಮಾರ್ ಗೌಡ. 'ನಂದಗೋಕುಲ' ಧಾರಾವಾಹಿ ಸಮಯದಲ್ಲಿ ಯಶ್ ಪರಿಚಯವಾದರು. ಆ ಧಾರಾವಾಹಿಯಲ್ಲಿ ನಾನು ಅಸೋಸಿಯೇಟ್ ಡೈರೆಕ್ಟ್ ಆಗಿದ್ದೆ. ನಾನು ಸಿನಿಮಾಗಳಲ್ಲಿ ಕೆಲಸ ಮಾಡಿರುವ ವಿಚಾರ ಯಶ್ ಅವರಿಗೆ ಗೊತ್ತಾಯಿತು. ಹಾಗಾಗಿ ಸಿನಿಮಾಗಳಲ್ಲಿ ಅವಕಾಶ ಕೊಡಿಸುವಂತೆ ನನ್ನ ಬಳಿ ಮನವಿ ಮಾಡಿ ಫೋಟೊ, ಫೋನ್ ನಂಬರ್ ಕೊಟ್ಟರು. ಆಗ ಯಶ್ ಬಹಳ ಇನ್ನೋಸೆಂಟ್ ಹುಡುಗ. ನಾನು ಆತನಿಗಾಗಿ 2 ವರ್ಷ ನಿರ್ಮಾಪಕರನ್ನು ಹುಡುಕಿದ್ದೆ" ಎಂದು ಮೈಸೂರು ನಾಗರಾಜ್ ನೆನಪಿಸಿಕೊಂಡಿದ್ದಾರೆ.

'ಜಂಭದ ಹುಡುಗಿ' ಯಶ್ ನಟಿಸಿದ ಮೊದಲ ಸಿನಿಮಾ. ಆ ಬಳಿಕ 'ಮೊಗ್ಗಿನ ಮನಸು' ಚಿತ್ರದಲ್ಲಿ ಅವಕಾಶ ಸಿಕ್ಕಿ ಬ್ರೇಕ್ ಪಡೆದಿದ್ದರು. ಈ ಬಗ್ಗೆ ಮಾತನಾಡಿರುವ ನಾಗರಾಜ್ "ನಾನು ಯಶ್ ಅವರನ್ನು ಹೀರೊ ಆಗಿ ಪರಿಚಯಿಸಲು ನಿರ್ಮಾಪಕರನ್ನು ಹುಡುಕುತ್ತಿದ್ದೆ. ಆಗ ಪ್ರಿಯಾ ಹಾಸನ್ ಸಿನಿಮಾ ಮಾಡಬೇಕು ಎಂದು ಓಡಾಡುತ್ತಿದ್ದರು. ಅವರಿಗೆ ಹೇಳಿ ನೀವೇ ಸಿನಿಮಾ ನಿರ್ಮಾಣ ಮಾಡಿ, ನಮ್ಮ ಹುಡುಗ ಒಬ್ಬ ಇದ್ದಾನೆ, ನವೀನ್ ಗೌಡ ಅಂತ, ಅವನಿಗೆ ಅವಕಾಶ ಕೊಡಿ ಎಂದೆ. ನಾನು ಹೇಳಿದ ಸಿನಿಮಾ ಕಥೆ ಆಗಲಿಲ್ಲ. ಮಹಿಳಾ ಪ್ರಧಾನ ಕಥೆ ಬೇಕು ಅಂತ ಅವ್ರು ಹೇಳಿದ್ರು. ಬಳಿಕ 'ಜಂಭದ ಹುಡುಗಿ' ಕಥೆ ಸಿಕ್ಕಿ ಸಿನಿಮಾ ಮಾತುಕತೆ ಆಯಿತು. ಆ ಚಿತ್ರದಲ್ಲಿ ನವೀನ್ ಗೌಡ ಕೂಡ ನಟಿಸುವಂತಾಯಿತು" ಎಂದು ತಿಳಿಸಿದ್ದಾರೆ.
"ನಾನು ಸಿನ್ಮಾ ನಿರ್ದೇಶನ ಮಾಡಲ್ಲ. ಆದರೆ ನವೀನ್ ಗೌಡಗೆ ಮಾತ್ರ ಅವಕಾಶ ಕೊಡಿ ಎಂದು ಒಪ್ಪಿಸಿದೆ. ನನಗೆ ನಿರ್ದೇಶಕನಾಗುವ ಅವಕಾಶ ಸಿಗದೇ ಇದ್ದರೂ ನವೀನ್ ಗೌಡಗೆ ಅವಕಾಶ ಕೊಡಿಸಿದ್ದೆ. ಯಶ್‌ನ ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು. ಬಳಿಕ ನಾನು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟೆ. ಬಳಿಕ ಯಶ್ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಾ ಗೆದ್ದರು. 'ಕೆಜಿಎಫ್'-2 ರಿಲೀಸ್ ಬಳಿಕ ಒಮ್ಮೆ ಭೇಟಿ ಆಗಲು ಹೋಗಿದ್ದೆ. ಬಹಳ ಚೆನ್ನಾಗಿ ಮಾತನಾಡಿಸಿದ್ದರು. ಬಳಿಕ ಮತ್ತೊಂದು ದಿನ ಅವರ ಭೇಟಿಗೆ ಹೋದಾಗ ಅವರ ಪ್ರತಿಕ್ರಿಯೆ ಬೇರೆಯಾಗಿತ್ತು. ಸಿನ್ಮಾ ಮಾಡೋಣ ಸರ್, ಅಂದೆ. ಅದಕ್ಕೆ ನನ್ನ ರೇಂಜ್ ಏನು ಗೊತ್ತಾ ಸರ್? ಎಂದು ಕೇಳಿದ್ರು ಯಶ್. ಆಗ ಏನೋ ಒಂದು ಮಾತು ಹೇಳಿದ್ರು, ಅದನ್ನು ಹೇಳೋಕೆ ಸಾಧ್ಯವಿಲ್ಲ" ಎಂದು ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದ್ದಕ್ಕಿದಂತೆ ತಾವು ಈ ಹಳೇ ವಿಚಾರಗಳ ಬಗ್ಗೆ ಮಾತನಾಡಲು ಕಾರಣ ಏನು ಎನ್ನುವುದನ್ನು ಮೈಸೂರ್ ನಾಗರಾಜ್ ಹೇಳಿದ್ದಾರೆ. "ಯಶ್ ತಾಯಿ ದಿಢೀರ್ ಎಂಟ್ರಿಯಾಗಿ ಏನೇನೊ ಹೇಳ್ತಿದ್ದಾರೆ. ನನ್ನ ಮಗನಿಗೆ ಯಾರು ಏನು ಮಾಡಿಲ್ಲ, ಬ್ಯಾಕ್‌ಗ್ರೌಂಡ್ ಇಲ್ಲದೇ ಬಂದ, ಅದು ಇದು ಅಂತೆಲ್ಲಾ ಏನೇನೋ ಹೇಳ್ತಿದ್ದಾರೆ. ಅವರ ಮಾತು ಕೇಳಿ ಜನ ಹಾಕುವ ಕಾಮೆಂಟ್ಸ್ ಓದಿ ಬೇಸರದಿಂದ ನಾನು ಈಗ ಮಾತನಾಡುತ್ತಿದ್ದೇನೆ. ನನಗೆ ಯಾವುದೇ ಕ್ರೆಡಿಟ್ ಬೇಡ, ಆದರೆ ಅವ್ರ ಅಮ್ಮ ನನ್ನ ಮಗನಿಗೆ ಯಾರು ಸಹಾಯ ಮಾಡ್ಲಿಲ್ಲ, ಅವ್ನೇ ಬೆಳೆದುಬಿಟ್ಟ ಎನ್ನುತ್ತಿದ್ದಾರೆ. ಯಶ್ ಹತ್ತಿದ ಏಣಿ ಒದ್ದಿದ್ದಾನೆ. ನನಗೆ ಯಶ್ ಒಂದು ಮಾತು ಹೇಳ್ದ. ನಾನು ಹಂತ ಹಂತವಾಗಿ ಬೆಳೆದು ಬರಬೇಕಂತೆ, ಅವನೊಟ್ಟಿಗೆ ಸಿನಿಮಾ ಮಾಡಲು" ಎಂದು ಬೇಸರ ಹೊರಹಾಕಿದ್ದಾರೆ.


Click it and Unblock the Notifications











