ಎಲ್ಲರಿಗೂ ಎಲ್ಲಾ ಇಷ್ಟ ಆಗ್ಬೇಕು ಅಂತೇನಿಲ್ಲ; 'ರಾಮಾಯಣ' ಟೀಸರ್ ಬಗ್ಗೆ ಯಶ್ ತಾಯಿ ಮಾತು
ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಈಗ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ರಾವಣನಾಗಿ ಯಶ್ ನಟಿಸಿದ್ದಾರೆ. 4000 ಕೋಟಿ ರೂ. ಬಜೆಟ್‌ನಲ್ಲಿ ಸರಣಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಚಿತ್ರತಂಡ ಹೇಳ್ತಿದೆ. ಆದರೆ ಟೀಸರ್ ನೋಡಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆ ತಕ್ಕಂತೆ ಟೀಸರ್ ಬಂದಿಲ್ಲ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ತಪ್ಪುಗಳನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇದು ಶ್ರೀರಾಮನ ಪಾತ್ರ ಪರಿಚಯದ ಟೀಸರ್. ಹಾಗಾಗಿ ಬೇರೆ ಪಾತ್ರಗಳನ್ನು ತೋರಿಸಿಲ್ಲ. ರಾವಣನಾಗಿ ಯಶ್ ನಡೆದು ಹೋಗುವ ಸಣ್ಣ ಝಲಕ್ ಕೊನೆಯಲ್ಲಿದೆ. ಲಂಕಾಸುರನಾಗಿ ಯಶ್ ಲುಕ್ ರಿವೀಲ್ ಆಗಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನಾವೆಲ್ಲಾ ಅಣ್ಣಾವ್ರ ಅಭಿಮಾನಿಗಳು.. ಅವ್ರು ಸಾಕಷ್ಟು ಪೌರಾಣಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್ ಈಗ ಇಂತಹ ಪಾತ್ರ ಮಾಡಲು ಆರಂಭಿಸಿದ್ದಾನೆ. ಮುಂದೆ ನೋಡೊಣ.. ನಾನು ಬಹಳ ಉತ್ಸುಕನಾಗಿದ್ದೇನೆ ಎಂದು ಸುಮನ್ ಟಿವಿ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಪುಷ್ಪಾ ಅರುಣ್ ಕುಮಾರ್ ಮಾತನಾಡಿದ್ದಾರೆ. ರಣ್‌ಬೀರ್ ಕಪೂರ್ ತಂದೆ, ತಾಯಿ ನಟನೆಯ ಸಿನಿಮಾಗಳನ್ನು ನೋಡಿದ್ದೇನೆ. ಅವರ ಮಗ ಇವ್ರು. ಅವ್ರು ಚೆನ್ನಾಗಿ ನಟಿಸುತ್ತಾರೆ. ಸೀತೆ ಪಾತ್ರ ಮಾಡಿರುವ ಸಾಯಿಪಲ್ಲವಿ ಸಿನಿಮಾಗಳನ್ನು ಅಷ್ಟಾಗಿ ನೋಡಿಲ್ಲ. ಇದು ಬರೀ ಟೀಸರ್.. ಸಿನಿಮಾ ಬರಲಿ ನೋಡೋಣ ಎಂದಿದ್ದಾರೆ.
ಮಗ ಇಷ್ಟು ದೊಡ್ಡ ಪಾತ್ರ ಮಾಡುತ್ತಿರುವುದು ಬಹಳ ಖುಷಿಯಿದೆ. ಇನ್ನು ಬಹಳ ಸಮಯ, ವಯಸ್ಸು ಇದೆ. ಮತ್ತಷ್ಟು ಇಂತಹ ಪಾತ್ರಗಳನ್ನು ಯಶ್ ಮಾಡಲಿ ಎಂದು ಪುಷ್ಪಾ ಹೇಳಿದ್ದಾರೆ. ಸದ್ಯ ಟೀಸರ್‌ನಲ್ಲಿ ರಾವಣನಾಗಿ ಯಶ್ ಲುಕ್ ರಿವೀಲ್ ಆಗದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿ "ಟೀಸರ್ ಅಲ್ಲಿ ಏನು ತೋರಿಸಬೇಕೋ ಅಷ್ಟು ತೋರಿಸ್ತಾರೆ. ಕುತೂಹಲ ಉಳಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಅವ್ರ ಅಣ್ಣ(ಯಶ್)ನನ್ನು ನೋಡಬೇಕು ಎಂದು ಅಭಿಮಾನಿಗಳಿಗೆ ಅಷ್ಟು ಆತುರ. ಅಭಿಮಾನಿಗಳ ಆ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.
'ರಾಮಾಯಣ' ಸಿನಿಮಾ ಬರುವವರೆಗೂ ಕಾಯೋಣ.. ಚೆನ್ನಾಗಿಯೇ ಮಾಡಿರ್ತಾರೆ.. ಅಷ್ಟಿಲ್ಲದೇ ಇವ್ನು(ಯಶ್) ಮಾಡಲ್ಲ. ಯಶ್ ಚಿಕ್ಕವನಿದ್ದಾಗ ಅವ್ರ ತಾತ, ನಮ್ಮ ಮಾವನವರು ಸಾಕಷ್ಟು ಕಥೆಗಳನ್ನು ಹೇಳ್ತಿದ್ರು.. ಅವ್ನು ಚಿಕ್ಕವನಿದ್ದಾಗ 'ರಾಮಾಯಣ' ಧಾರಾವಾಹಿ ಬರ್ತಿತ್ತು. ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ಪಕ್ಕದ ಮನೆಗೆ ಹೋಗಿ ಆ ಧಾರಾವಾಹಿ ನೋಡ್ತಿದ್ದ. ಈಗ ಅವ್ನು ರಾವಣನ ಪಾತ್ರ ಮಾಡುತ್ತಿರುವುದು ಖುಷಿ ತಂದಿದೆ ಎಂದು ಪುಷ್ಪಾ ವಿವರಿಸಿದ್ದಾರೆ.
ನೆಚ್ಚಿನ ನಟನ ಸಿನಿಮಾ ಚೆನ್ನಾಗಿದೆ ಚೆನ್ನಾಗಿಲ್ಲ ಎಂದು ಹೇಳುವ ರೈಟ್ಸ್ ಅಭಿಮಾನಿಗಳಿಗೆ ಇರೋದು ಎಂದು ಪುಷ್ಪಾ ಹೇಳಿದ್ದಾರೆ. 'ಟಾಕ್ಸಿಕ್' ಟೀಸರ್ ಬಗ್ಗೆ ಇದೇ ರೀತಿ ಚರ್ಚೆ ಆಯ್ತು. ಅಭಿಮಾನಿಗಳು ಹೇಳಿದ್ದನ್ನು ಒಪ್ಪಿಕೊಳ್ಳಬೇಕು. ಎಲ್ಲರಿಗೂ ಎಲ್ಲಾ ಇಷ್ಟ ಆಗಬೇಕು ಅನ್ನೋಕೆ ಸಾಧ್ಯವಿಲ್ಲ. ಸಿನಿಮಾ ಬರಲಿ, ಆಮೇಲೆ ನೋಡೋಣ, ಯಶ್ ಆ ತರ ಏನೂ ಮಾಡಿರಲ್ಲ.. ಸರಿ ತಪ್ಪು ಹೇಳುವುದು ಪ್ರೇಕ್ಷಕರಿಗೆ ಇದೆ. 'ರಾಮಾಯಣ' ಟೀಸರ್‌ನಲ್ಲಿ ಯಶ್ ಲುಕ್ ರಿವೀಲ್ ಆಗಿಲ್ಲ ಎಂದು ಬೇಸರಗೊಂಡಿರಬಹುದು. ಬೇಡದ ಸಿನಿಮಾಗಳನ್ನು ಯಶ್ ಮಾಡಲ್ಲ ಎಂದು ನಂಬಿಕೆ ಇರಲಿ ಎಂದು ಪುಷ್ಪಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮಾಯಣ ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಹ ನಿರ್ಮಾಪಕರಾಗಿ ಯಶ್ ಕೂಡ ಕೈ ಜೋಡಿಸಿದ್ದಾರೆ.


Click it and Unblock the Notifications











