ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?
'ನಾವು ಸ್ಯಾಂಡಲ್ ವುಡ್ ಮಂದಿಯೆಲ್ಲಾ ಒಂದು'...ಹೀಗಂತ ಬರೀ ಡೈಲಾಗ್ ಹೊಡೆಯದೇ ಎಲ್ಲರನ್ನೂ ಒಂದು ಮಾಡೋಕೆ ಹೊರಟಿರುವ ನಟ ರಾಕಿಂಗ್ ಸ್ಟಾರ್ ಯಶ್.
ಸೆಲೆಬ್ರಿಟಿ ನಟರೊಂದಿಗೆ ಅನ್ಯೋನ್ಯವಾಗಿರುವ ಯಶ್ ಯುವ ಪ್ರತಿಭೆಗಳನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಮಂಜು ಮಾಂಡವ್ಯ ಅವರಿಗೆಲ್ಲಾ ಸ್ಯಾಂಡಲ್ ವುಡ್ ನಲ್ಲಿ ಭದ್ರ ನೆಲೆ ಕಟ್ಟಿಕೊಡುತ್ತಿರುವ ಯಶ್ ಅನೇಕರಿಗೆ ಸಹಾಯ ಕೂಡ ಮಾಡಿದ್ದಾರೆ.
ಇದಕ್ಕೆ ಹೊಚ್ಚ ಹೊಸ ಉದಾಹರಣೆ ನಾವು ಹೇಳ್ತೀವಿ ಕೇಳಿ. 'ರಂಗಿತರಂಗ' ಸಿನಿಮಾ ಗೊತ್ತಲ್ವಾ? ನಾಳೆ (ಜುಲೈ 3) 'ರಂಗಿತರಂಗ' ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ಯಶ್.! ಅದ್ಹೇಗೆ ಅನ್ನೋ ಸಂಪೂರ್ಣ ಕಥೆ ಇಲ್ಲಿದೆ. ಮುಂದೆ ಓದಿ.....

ಹೊಸಬರೆಲ್ಲಾ ಸೇರಿ ಮಾಡಿರುವ ಸಿನಿಮಾ 'ರಂಗಿತರಂಗ'
ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ 'ರಂಗಿತರಂಗ'. ಯುವ ಪ್ರತಿಭೆ ಅನೂಪ್ ಭಂಡಾರಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ನಿರ್ದೇಶಿಸಿರುವ ಸಿನಿಮಾ ಇದು. ರೋಮ್ಯಾಂಟಿಕ್ ಮಿಸ್ಟರಿ ಥ್ರಿಲ್ಲರ್ ಆಗಿರುವ 'ರಂಗಿತರಂಗ' ಚಿತ್ರದ ಟ್ರೈಲರ್ ಎಲ್ಲೆಡೆ ಸೌಂಡ್ ಮಾಡ್ತಿದೆ. [ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]

ಟ್ರೈಲರ್ ನೋಡಿ ಥ್ರಿಲ್ ಆಗಿದ್ದ ಯಶ್
'ರಂಗಿತರಂಗ' ಟ್ರೈಲರ್ ನೋಡಿ ಯಶ್ ಸಖತ್ ಥ್ರಿಲ್ ಆಗಿದ್ದರು. ''ಸಿನಿಮಾದ ಛಾಯಾಗ್ರಹಣ ಹೈ ಲೆವೆಲ್ ಗಿದೆ. ಒಂದೊಂದು ಫ್ರೇಮ್ ಕೂಡ ಪೇಂಟಿಂಗ್ ತರಹ ಇದೆ. ಕ್ವಾಲಿಟಿ ತುಂಬಾ ಇಷ್ಟ ಆಯ್ತು. ಹೊಸಬರ ಸಿನಿಮಾಗಳನ್ನ ಪ್ರೋತ್ಸಾಹಿಸಬೇಕು. ಇಂತಹ ಹೆಚ್ಚು ಸಿನಿಮಾಗಳು ಬರಲಿ'' ಅಂತ ಯಶ್ ಶುಭ ಹಾರೈಸಿದ್ದರು. [ರಂಗಿತರಂಗ ಸೌಂಡಿಗೆ ಥ್ರಿಲ್ ಆದ ಮುರಳಿ, ಯಶ್]

ಸಹಾಯಕ್ಕೆ ನಿಂತ ಯಶ್
ಬರೀ ಶುಭ ಹಾರೈಸಿದ್ದು ಮಾತ್ರವಲ್ಲ. 'ರಂಗಿತರಂಗ' ಚಿತ್ರತಂಡಕ್ಕೆ ಯಶ್ ಸಹಾಯ ಕೂಡ ಮಾಡಿದ್ದಾರೆ. ಆಗಲೇ ಹೇಳಿದಂತೆ, 'ರಂಗಿತರಂಗ' ಎಲ್ಲಾ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಹೊಸಬರ ಚಿತ್ರಗಳನ್ನ ಗಾಂಧಿನಗರದಲ್ಲಿ ಕೇಳೋರೂ ಇರಲ್ಲ. ಹೀಗಾಗಿ ಚಿತ್ರತಂಡ, ಚಿತ್ರವನ್ನ ರಿಲೀಸ್ ಮಾಡುವುದಕ್ಕೆ ಹೆಣಗಾಡುತ್ತಿತ್ತು. ಆಗ ಸಹಾಯ ಹಸ್ತ ಚಾಚಿದವರೇ ಯಶ್. [ಈ ಹಾಡು ಕೇಳಿ..ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...]

'ರಂಗಿತರಂಗ' ರಿಲೀಸ್ ಮಾಡಿಸಿದ ಯಶ್
ಹೊಸಬರ ಹೊಸ ಪ್ರಯತ್ನ ನೀರು ಪಾಲಾಗಬಾರದು ಅನ್ನುವ ಕಾರಣಕ್ಕೆ, 'ರಂಗಿತರಂಗ' ಚಿತ್ರದ ವಿತರಣೆ ಪಡೆಯುವಂತೆ ತಮಗೆ ಅತ್ಯಾಪ್ತರಾಗಿರುವ ನಿರ್ಮಾಪಕ ಕಮ್ ವಿತರಕರಾಗಿರುವ ಜಯಣ-ಭೋಗೇಂದ್ರ ರಿಗೆ ಯಶ್ ಹೇಳಿದರಂತೆ. ಯಶ್ ಮಾತಿಗೆ ಒಪ್ಪಿ, 'ರಂಗಿತರಂಗ' ವಿತರಣೆಯನ್ನ ಜಯಣ್ಣ-ಭೋಗೇಂದ್ರ ಪಡೆದು, ನಾಳೆ (ಜುಲೈ 3) ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.

ಜಯಣ್ಣ-ಭೋಗೇಂದ್ರ ಸಿನಿಮಾ ನೋಡಲೇ ಇಲ್ಲ.!
ವಿತರಣೆ ಪಡೆಯೋಕೆ ಮುಂದೆ ಬಂದ ಜಯಣ್ಣ-ಭೋಗೇಂದ್ರ 'ರಂಗಿತರಂಗ' ಸಿನಿಮಾವನ್ನ ವೀಕ್ಷಿಸಲೇ ಇಲ್ಲ. ''ಯಶ್ ಗೆ ಸಿನಿಮಾ ಇಷ್ಟವಾಗಿದೆ. ನಮಗೆ ಅಷ್ಟು ಸಾಕು. ಯಶ್ ಆಯ್ಕೆ ಬಗ್ಗೆ ನಮಗೆ ನಂಬಿಕೆ ಇದೆ'' ಅಂತ ಜಯಣ್ಣ-ಭೋಗೇಂದ್ರ ಯಶ್ ಮಾತಿಗೆ ಬೆಲೆ ಕೊಟ್ಟು 'ರಂಗಿತರಂಗ' ವಿತರಣೆ ಮಾಡುವುದಕ್ಕೆ ಮುಂದಾದರು.

'ರಂಗಿತರಂಗ' ಚಿತ್ರ ವೀಕ್ಷಿಸಿರುವ ಯಶ್
ಟ್ರೈಲರ್ ನೋಡಿ ಸಂತಸ ವ್ಯಕ್ತಪಡಿಸಿರುವ ಯಶ್, 'ರಂಗಿತರಂಗ' ಚಿತ್ರ ನೋಡಿದ ಮೇಲೆ ಜಯಣ್ಣ-ಭೋಗೇಂದ್ರ ಅವರಿಗೆ ವಿತರಣೆ ಮಾಡುವುದಕ್ಕೆ ಹೇಳಿದರಂತೆ.

ಯಶ್ ಗೆ ಥ್ಯಾಂಕ್ಸ್ ಹೇಳ್ತಾರೆ ಅನೂಪ್
''ಹೊಸಬರಿಗೆ ಮರ್ಯಾದೆ ಕೊಡದ ಗಾಂಧಿನಗರದಲ್ಲಿ ನಮಗೆ ಬೆನ್ನೆಲುಬಾಗಿ ನಿಂತ ಯಶ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ. 'ರಂಗಿತರಂಗ' ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ ಅದಕ್ಕೆ ಯಶ್ ಕಾರಣ'' ಅಂತ ಹೇಳ್ತಾರೆ ನಿರ್ದೇಶಕ ಅನೂಪ್ ಭಂಡಾರಿ.


Click it and Unblock the Notifications











