ಯಶ್ ಮನೆಗೆ ಚಿಕ್ಕಣ್ಣ ಭೇಟಿ: ರಾಕಿಂಗ್ ಜೋಡಿ ಜೊತೆ ತಿಂಡಿ ಸವಿದು 'ಉಪಾಧ್ಯಕ್ಷ' ಸಕ್ಸಸ್ ಬಗ್ಗೆ ಚರ್ಚೆ
ಚಿಕ್ಕಣ್ಣ ಹೀರೊ ಆಗಿ ನಟಿಸಿರುವ 'ಉಪಾಧ್ಯಕ್ಷ' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಯಶಸ್ವಿಯಾಗಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಫಸ್ಟ್ ವೀಕೆಂಡ್ ಹಲವೆಡೆ ಸಿನಿಮಾ ಹೌಸ್‌ಫುಲ್ ಆಗಿತ್ತು. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್ ತಾರೆಯರೆಲ್ಲಾ ಬೆಂಬಲ ಸೂಚಿಸಿದ್ದರು.
ದರ್ಶನ್, ಸುದೀಪ್, ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು 'ಉಪಾಧ್ಯಕ್ಷ' ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಶಿವಣ್ಣ ಹಾಗೂ ಧ್ರುವ ಸರ್ಜಾ ಖುದ್ದು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ನಟ ಯಶ್ ಕೂಡ 'ಉಪಾಧ್ಯಕ್ಷ' ತಂಡವನ್ನು ಮನೆಗೆ ಆಹ್ವಾನಿಸಿ ಒಟ್ಟಿಗೆ ತಿಂಡಿ ತಿಂದು ಸಿನಿಮಾ ಸಕ್ಸಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಯಶ್ ಸಹ 'ಉಪಾಧ್ಯಕ್ಷ' ಸಿನಿಮಾ ಕಥೆ ಚಿತ್ರಕಥೆ ಕೇಳಿ ಮೆಚ್ಚಿಕೊಂಡಿದ್ದರು. ಒಳ್ಳೆಯದಾಗಲಿ ಸಿನಿಮಾ ಮಾಡು ಎಂದು ಧೈರ್ಯ ತುಂಬಿದ್ದಾರೆ ಸಂದರ್ಶನವೊಂದರಲ್ಲಿ ಚಿಕ್ಕಣ್ಣ ಹೇಳಿಕೊಂಡಿದ್ದರು. ಇದೀಗ ಚಿಕ್ಕಣ್ಣ ಹಾಗೂ ನಾಯಕಿ ಮಲೈಕಾ ಗಾಲ್ಫ್ ಕ್ಲಬ್ ಬಳಿ ಇರುವ ಯಶ್ ಅವರ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಫ್ಲಾಟ್‌ಗೆ ಭೇಟಿ ನೀಡಿದ್ದಾರೆ. ಒಟ್ಟಿಗೆ ಕೂಡ ರಾಕಿಂಗ್ ಜೋಡಿ ಜೊತೆ ತಿಂಡಿ ಸವಿದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗುತ್ತಿದೆ.
ಬಹಳ ದಿನಗಳಿಂದ ಕನ್ನಡದಲ್ಲಿ ಯಾವುದೇ ಕಾಮಿಡಿ ಎಂಟರ್‌ಟೈನರ್ ಸಿನಿಮಾಗಳು ಬಂದಿರಲಿಲ್ಲ. 'ಉಪಾಧ್ಯಕ್ಷ' ಸಿನಿಮಾ ಆ ಕೊರಗನ್ನು ನೀಗಿಸಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಚಿತ್ರತಂಡ ನಟ ಚಿಕ್ಕಣ್ಣಗೆ ನ್ಯಾಚುರಲ್ ಸ್ಟಾರ್ ಎನ್ನುವ ಬಿರುದು ನೀಡಿದೆ. 10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಚಿತ್ರದ ಮುಂದುವರೆದ ಭಾಗದಂತೆ 'ಉಪಾಧ್ಯಕ್ಷ' ಸಿನಿಮಾ ಮೂಡಿ ಬಂದಿದೆ. ಚಿಕ್ಕಣ್ಣ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಮೋಡಿ ಮಾಡಿದ್ದಾರೆ.
ಅನಿಲ್ ಕುಮಾರ್ ನಿರ್ದೇಶನದ 'ಉಪಾಧ್ಯಕ್ಷ' ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಚಿತ್ರದಲ್ಲಿ ಚಕ್ಕಣ್ಣ ಜೋಡಿಯಾಗಿ ಮಲೈಕಾ ಮಿಂಚಿದ್ದಾರೆ. ಆರ್ಮುಗ ರವಿಶಂಕರ್, ಸಾಧುಕೋಕಿಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕೆ. ಎಲ್ ರಾಜಶೇಖರ್ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಆಗಿದೆ. ಅಲ್ಲಿಲ್ಲಿ ಚಿಕ್ಕಣ್ಣನ ಕಾಮಿಡಿ ಪಂಚ್‌ಗಳು ಸಿನಿರಸಿಕರ ಮನಗೆದ್ದಿದೆ.
ಬೆಂಗಳೂರು ಮಾತ್ರವಲ್ಲದೇ ಬೇರೆ ಜಿಲ್ಲೆಗಳಲ್ಲಿ ಕೂಡ 'ಉಪಾಧ್ಯಕ್ಷ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಗಣರಾಜ್ಯೋತ್ಸವ ರಜೆ ಹಾಗೂ ಭಾನುವಾರದ ರಜೆ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಆಗಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಎಲ್ಲಾ ನಟರ ಅಭಿಮಾನಿಗಳು ಚಿಕ್ಕಣ್ಣ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.
ಭಾನುವಾರ ಮೈಸೂರು, ಮಂಡ್ಯ, ರಾಮನಗರದ ಭಾಗಗಳಲ್ಲಿ 'ಉಪಾಧ್ಯಕ್ಷ' ಚಿತ್ರತಂಡ ವಿಜಯಯಾತ್ರೆ ಕೈಗೊಂಡಿತ್ತು. ಹೋದ ಕಡೆಯೆಲ್ಲಾ ಚಿತ್ರತಂಡಕ್ಕೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಈ ಬಾರಿ ಗೆಜ್ಜೆಪುರದ ಚಿ.ತು ಸಂಘಟ 'ಉಪಾಧ್ಯಕ್ಷ' ಹಾಗೂ ಆತನ ಪಟಾಲಂ ಹಾವಳಿ ಪ್ರೇಕ್ಷಕರಿಗೆ ಮಜಾ ಕೊಡುತ್ತಿದೆ.

ಸಂಜೆ(ಜನವರಿ 29) 'ಉಪಾಧ್ಯಕ್ಷ' ಸೆಲೆಬ್ರೆಟಿ ಶೋ ಆಯೋಜಿಸಲಾಗಿದೆ. ಚಿತ್ರರಂಗದ ಹಲವು ನಟ, ನಟಿಯರು ಚಿತ್ರವನ್ನು ವೀಕ್ಷಿಸಲಿದ್ದಾರೆ. ಒಟ್ಟಾರೆ ಸ್ಯಾಂಡಲ್‌ವುಡ್‌ನಲ್ಲಿ ಈಗ 'ಉಪಾಧ್ಯಕ್ಷ' ದರ್ಬಾರ್ ಜೋರಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ. ನಟ ಯಶ್ ಮಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಯಶ್ ಸಹ ಸಿನಿಮಾ ವೀಕ್ಷಿಸುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











