ಗೋವಾ ವಿಮಾನ ನಿಲ್ದಾಣದಲ್ಲಿ ಯಶ್: ಫ್ಯಾಮಿಲಿ ಮ್ಯಾನ್ ಎಂದ ನೆಟ್ಟಿಗರು
ನಟ ಯಶ್ ಪ್ರಸ್ತುತ 'ಕೆಜಿಎಫ್ 2' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸತತ ಎಂಟು ವರ್ಷ 'ಕೆಜಿಎಫ್' ಸಿನಿಮಾ ಸರಣಿಗಾಗಿ ಅವರು ಕಷ್ಟಪಟ್ಟಿದ್ದಾರೆ, ಆ ಶ್ರಮದ ಪ್ರತಿಫಲ ಬಾಕ್ಸ್ ಆಫೀಸ್‌ನಲ್ಲಿ ಕಾಣುತ್ತಿದೆ.
'ಕೆಜಿಎಫ್ 2' ಸಿನಿಮಾಕ್ಕಾಗಿಯೂ ನಟ ಯಶ್ ಬಹಳ ಕಷ್ಟಪಟ್ಟಿದ್ದರು, ಸತತ ಮೂರು ವರ್ಷಕ್ಕೂ ಹೆಚ್ಚು ಸಮಯವನ್ನು ಕೆಜಿಎಫ್‌ಗಾಗಿ ಯಶ್ ಮೀಸಲಿಟ್ಟಿದ್ದರು. ಈ ಅವಧಿಯಲ್ಲಿ ಕುಟುಂಬಕ್ಕೆ ಹೆಚ್ಚು ಸಮಯ ನೀಡಲಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಶೂಟಿಂಗ್ ಮಾಡುವಾಗಂತೂ ಮನೆಗೇ ಹೋಗಿರಲಿಲ್ಲ ಯಶ್.
ಆದರೆ ಈಗ ಎಲ್ಲವೂ ಮುಗಿದಿದೆ, 'ಕೆಜಿಎಫ್ 2' ಬಹಳ ದೊಡ್ಡ ಯಶಸ್ಸು ಗಳಿಸಿದೆ. ಹಾಗಾಗಿ ಈಗ ಕುಟುಂಬದ ಜೊತೆಗೆ ಜಾಲಿ ಸಮಯ ಕಳೆಯುತ್ತಿದ್ದಾರೆ ಯಶ್. 'ಕೆಜಿಎಫ್ 2' ಸಿನಿಮಾ ಯಶಸ್ಸಾಗಿದೆ ಎಂಬ ಸುದ್ದಿ ಬರುತ್ತಿದ್ದ ಹಾಗೆಯೇ ಯಶ್, ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ವೆಕೇಶನ್‌ಗೆ ತೆರಳಿದರು.

ಯಶ್, ರಾಧಿಕಾ ಹಾಗೂ ಮಕ್ಕಳು ಗೋವಾದ ಖಾಸಗಿ ಬೀಚ್‌ನಲ್ಲಿ ಆಟವಾಡಿ ಆಪ್ತವಾಗಿ ಸಮಯ ಕಳೆದಿದ್ದಾರೆ. ರಾಧಿಕಾಗೆ ಗೋವಾ ಎಂದರೆ ಬಹಳ ಇಷ್ಟ, ರಾಧಿಕಾರ ಸಂಬಂಧಿಗಳು ಗೋವಾದಲ್ಲಿ ಇದ್ದಾರೆ, ರಾಧಿಕಾರ ಅಜ್ಜಿ ಮನೆ ಗೋವಾದಲ್ಲಿಯೇ ಇದೆ.
ಯಶ್-ರಾಧಿಕಾ ಇಬ್ಬರಿಗೂ ಬೀಚ್‌ಗಳೆಂದರೆ ಬಹಳ ಇಷ್ಟ. ಇಬ್ಬರೂ ವಿವಾಹದ ಹೊಸತರಲ್ಲಿಯೂ ಬೀಚ್ ಇರುವ ಪ್ರದೇಶಕ್ಕೆ ಹನಿಮೂನ್‌ಗೆ ತೆರಳಿದ್ದರು. ಬಳಿಕ 2021 ರಲ್ಲಿ ಸುಂದರ ಬೀಚ್‌ಗಳಿಗೆ ಹೆಸರುವಾಸಿಯಾಗಿರುವ ಮಾಲ್ಡೀವ್ಸ್‌ಗೆ ಹೋಗಿದ್ದರು. ಈಗ ಮತ್ತೆ ಬೀಚ್‌ಗೆ ಹೋಗಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಇದೀಗ ಪ್ರವಾಸ ಮುಗಿಸಿವಾಪಸ್ಸಾಗುತ್ತಿದ್ದಾರೆ. ಗೋವಾದ ವಿಮಾನ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಯಶ್-ರಾಧಿಕಾ ಕಾಣಿಸಿಕೊಂಡಿದ್ದಾರೆ. ಕುಟುಂಬವು ರಜೆಯ ಮಜೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆದ ಕೂಡಲೆ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಯಶ್‌ರನ್ನು ನೋಡಿ ಅಭಿಮಾನಿಗಳು, 'ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್' ಎಂದು ಕೊಂಡಾಡಿದ್ದಾರೆ.

ಇದು ನಿಜವೂ ಹೌದು, ತಾವೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂಬುದನ್ನು ಹಲವು ಬಾರಿ ಪ್ರೂವ್ ಮಾಡಿದ್ದಾರೆ ಯಶ್, 'ಕೆಜಿಎಫ್ 2' ಸಿನಿಮಾದ ಪ್ರಚಾರದಿಂದ ಬಿಡುವು ಪಡೆದು ಕುಟುಂಬದ ಜೊತೆ ಯುಗಾದಿ ಆಚರಿಸಿದ್ದರು. ಡೈಯೆಟ್ ಎಲ್ಲ ಬದಿಗಿಟ್ಟು, ಬಾಳೆ ಎಲೆಯ ಮುಂದೆ ಕೂತು ಕುಟುಂಬದವರೆಲ್ಲ ಒಟ್ಟಿಗೆ ಸೇರಿ ಹೋಳಿಗೆ ಊಟ ಮಾಡಿದ್ದರು.
ಯಶ್ ಹಾಗೂ ರಾಧಿಕಾ ಪಂಡಿತ್ ಬಹಳ ವರ್ಷಗಳಿಂದಲೂ ಗೆಳೆಯರಾಗಿದ್ದರು. ಇಬ್ಬರು ಒಟ್ಟಗೆ ಧಾರಾವಾಹಿಯಲ್ಲಿ ನಟಿಸಿದ್ದರು. ಸಿನಿಮಾಕ್ಕೆ ಕಾಲಿಟ್ಟಿದ್ದು ಸಹ ಒಟ್ಟಿಗೆ. ಯಶ್ ಹಾಗೂ ರಾಧಿಕಾ 2016 ರ ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈ ಇಬ್ಬರೂ ಒಟ್ಟಿಗೆ ಈವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











