ಬೆಂಗಳೂರಿಗೆ ಬಂದ ಯಶ್, ಐಟಿ ರೈಡ್ ಬಗ್ಗೆ ಹೇಳಿದ್ದೇನು?
Recommended Video

ಸ್ಯಾಂಡಲ್ ವುಡ್ ನ ಖ್ಯಾತ ನಟ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್ ಸೇರಿದಂತೆ ನಿರ್ಮಾಪಕರ ಮನೆ, ಕಚೇರಿ ಮೇಲೆ ಗುರುವಾರದಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಈ ಘಟನೆ ಬಗ್ಗೆ ತಿಳಿದ ಕೂಡಲೇ ಮುಂಬೈನಲ್ಲಿದ್ದ ಯಶ್ ಅವರು ಬೆಂಗಳೂರಿಗೆ ಬಂದಿದ್ದಾರೆ.
ಮುಂಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ''ನಾವು ಪ್ರಜೆಗಳಾಗಿ ಕಾನೂನಿಗೆ ತಲೆ ಬಾಗಬೇಕು, ನನಗೆ ದಾಳಿ ಬಗ್ಗೆ ವಿಷಯ ತಿಳಿದ ಕೂಡಲೇ ಇಲ್ಲಿಗೆ ಆಗಮಿಸಿದ್ದೇನೆ. ಮನೆಯವರ ಜತೆ ಸಂಪರ್ಕ ಸಾಧ್ಯವಾಗಿಲ್ಲ'' ಎಂದು ತಿಳಿಸಿದರು.
''ಇದು ಕೆಜಿಎಫ್ ಚಿತ್ರದ ಯಶಸ್ಸಿನ ಕಾರಣಕ್ಕೆ ಆಗಿದೆ ಎಂಬುದರ ಬಗ್ಗೆ ಏನು ಹೇಳಲಾರೆ, ಸುಮ್ಮನೆ ನಾವು ಊಹೆ ಮಾಡಿಕೊಂಡು ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ. ನಾನು ಮನೆಗೆ ಹೋಗುತ್ತಿದ್ದೇನೆ, ನಂತರ ಈ ಬಗ್ಗೆ ತಿಳಿಯಲಿದೆ'' ಎಂದರು.

ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರ ಗಾಯತ್ರಿ ನಗರದ ಮನೆ, ಯಶ್ ಅವರ ಕತ್ರಿಗುಪ್ಪೆ, ಹೊಸಕೆರೆಹಳ್ಳಿ ನಿವಾಸ, ಕತ್ರಿಗುಪ್ಪೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ರಾಧಿಕಾ ಅವರ ತಂದೆ ಕೃಷ್ಣಪ್ರಸಾದ್ ಅವರನ್ನು ವಿಚಾರಣೆಗಾಗಿ ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಕೃಷ್ಣಪ್ರಸಾದ್ ಅವರ ಬ್ಯಾಂಕ್ ಖಾತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಮತ್ತೊಂದೆಡೆ ಕೆಜಿಎಫ್ ನಿರ್ಮಾಪಕರಾದ ವಿಜಯ್ ಕಿರಗಂದೂರು, ಜಯಣ್ಣ, ದಿ ವಿಲನ್ ಸಿನಿಮಾ ನಿರ್ಮಾಪಕ ಸಿಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಜಿ ಎಸ್ ಟಿ ಹೊಸ ನಿಯಾಮಾವಳಿಗಳ ಪ್ರಕಾರ 20 ಲಕ್ಷಕ್ಕೂ ಹೆಚ್ಚು ಅದಾಯ ಪಡೆದುಕೊಳ್ಳುವ ಕಲಾವಿದರು ಶೇಕಡಾ 28 ರಷ್ಟು ತೆರಿಗೆ ಪಾವತಿ ಮಾಡಬೇಕು. ಆದರೆ ಸಂಭಾವನೆಯನ್ನು ನಿಯಮಿತವಾಗಿ ಪಡೆದು ಸಿನಿಮಾದ ಒಟ್ಟು ಆದಾಯದಲ್ಲಿ ಇಂತಿಷ್ಟು ಅಂತಾ ಪಡೆದುಕೊಳ್ಳುವ ನಟರಿಂದ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಐಟಿ ಅಧಿಕಾರಿಗಳು ಕೋರ್ಟಿನಿಂದ ಆದೇಶ ಪಡೆದು ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


Click it and Unblock the Notifications











