ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಕಾವ್ಯ ಆಧರಿಸಿ ಸಿನಿಮಾ ಆರಂಭವಾಗಿದೆ. ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿಲ್ಲ. ಆದರೆ ತೆರೆಮರೆಯಲ್ಲಿ ಬಹಳ ದಿನಗಳಿಂದ ಸಿನಿಮಾ ಕೆಲಸಗಳು ನಡೆಯುತ್ತಾ ಬಂದಿತ್ತು. ಇತ್ತೀಚೆಗೆ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ಕೂಡ ಶುರುವಾಗಿರುವ ಬಗ್ಗೆ ವರದಿಯಾಗಿದೆ.
'ರಾಮಾಯಣ' ಚಿತ್ರದಲ್ಲಿ ರಣ್‌ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಾರೆ ಎನ್ನುವುದು ಬಹುತೇಕ ಖಚಿತವಾಗಿದೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಲೆಕ್ಕಾಚಾರವೂ ಇದೆ. ಆದರೆ ಯಾವುದೇ ವಿಚಾರವೂ ಇನ್ನು ಅಧಿಕೃತವಾಗಿಲ್ಲ. ಈಗಾಗಲೇ ರಣ್‌ಬೀರ್ ಕಪೂರ್ ಪಾತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಕಳೆದ ವರ್ಷವೇ 'ರಾಮಾಯಣ' ಸಿನಿಮಾ ಬಗ್ಗೆ ಚರ್ಚೆ ಶುರುವಾಗಿತ್ತು. ಬಳಿಕ ಯಶ್ ಚಿತ್ರದಲ್ಲಿ ರಾವಣನಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಈ ಬಗ್ಗೆ ಯಶ್ ಪ್ರತಿಕ್ರಿಯಿಸಲಿಲ್ಲ. ಕೊನೆಯದಾಗಿ ಸ್ನೇಹಿತ ಕಿಟ್ಟಿ ಜಿಮ್ ಉದ್ಘಾಟನೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅಂದು ಕೂಡ ನಾನು ಹೇಳುವವರೆಗೂ ಯಾವ ಸುದ್ದಿಯನ್ನು ನಂಬಬೇಡಿ ಎಂದಿದ್ದರು. ಆದರೆ ಸಾಕಷ್ಟು ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಆದರೆ ಯಾವುದನ್ನು ನಾನು ಫೈನಲ್ ಮಾಡಿಲ್ಲ ಎಂದು ವಿವರಿಸಿದ್ದರು.
ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ 'ರಾಮಾಯಣ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಚಿತ್ರಕ್ಕೆ ತಾವು ಸಹನಿರ್ಮಾಪಕರಾಗಿ ಕೈ ಜೋಡಿಸಿದ್ದು ಯಾಕೆ? ಎನ್ನುವುದನ್ನು ತಿಳಿಸಿದ್ದಾರೆ. ಹಾಲಿವುಡ್ 'ವೆರೈಟಿ ಮ್ಯಾಗಜೀನ್'ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಮಿತ್ ಮಲ್ಹೋತ್ರಾ ಹಾಗೂ ಯಶ್ ಇಬ್ಬರೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈಗಾಗಲೇ ನಮಗೆ ಗೊತ್ತಿರುವ ಕಥೆಯನ್ನೇ ಹೊಸದಾಗಿ ಮತ್ತೆ ಹೇಳಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
"ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಚಿತ್ರಗಳನ್ನು ನಿರ್ಮಿಸುವುದು ನನ್ನ ದೀರ್ಘಾವಧಿಯ ಆಶಯವಾಗಿದೆ. ಅದರ ಅನ್ವೇಷಣೆಯಲ್ಲಿ, ನಾನು ಒಂದು ಅತ್ಯುತ್ತಮ VFX ಸ್ಟುಡಿಯೊದೊಂದಿಗೆ ಮೈತ್ರಿ ಮಾಡಿಕೊಳ್ಳಲು ಲಾಸ್ ಏಂಜಲೀಸ್‌ನಲ್ಲಿದ್ದೆ. ಅಚ್ಚರಿ ಎಂದರೆ ಆ VFX ಸ್ಟುಡಿಯೊ ಹಿಂದಿನ ಮಾಸ್ಟರ್‌ಮೈಂಡ್ ಒಬ್ಬ ಸಹ ಭಾರತೀಯ. ನಾನು ಹಾಗೂ ನಮಿತ್ ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, 'ರಾಮಾಯಣ' ವಿಷಯ ಕೂಡ ಬಂದಿತ್ತು. ನಮಿತ್ ಅದಾಗಲೇ ಆ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದರು. ಕೂಡಲೇ ನನಗೆ ಅದರತ್ತ ಗಮನ ಹರಿಯಿತು"

"ರಾಮಾಯಣ,' ಒಂದು ವಿಷಯವಾಗಿ, ನನ್ನೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ ಮತ್ತು ಅದಕ್ಕಾಗಿ ನನ್ನ ಮನಸ್ಸು ತುಡಿಯುತ್ತಿತ್ತು.'ರಾಮಾಯಣ' ಚಿತ್ರ ಸಹ-ನಿರ್ಮಾಣಕ್ಕೆ ಜೊತೆಯಾಗುವ ಮೂಲಕ ನಾವು ನಮ್ಮ ಸಾಮೂಹಿಕ ದೃಷ್ಟಿಕೋನವನ್ನು ಒಟ್ಟಿಗೆ ತರುತ್ತಿದ್ದೇವೆ. ಭಾರತೀಯ ಸಿನಿಮಾ ಮೂಲಕ ಪ್ರಪಂಚದಾದ್ಯಂತದ ಪ್ರೇಕ್ಷಕರಲ್ಲಿ ಉತ್ಸಾಹ ಮತ್ತು ಅಭಿರುಚಿಗೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ" ಎಂದಿದ್ದಾರೆ.
ಮಾತು ಮುಂದುವರೆಸಿರುವ ನಟ ಯಶ್, "ರಾಮಾಯಣ ನಮ್ಮ ಜೀವನದ ಬಟ್ಟೆಯಲ್ಲಿ ಹೆಣೆದುಕೊಂಡಿದೆ. ನಮಗೆ ಅದು ಚೆನ್ನಾಗಿ ತಿಳಿದಿದೆ ಎಂದು ನಾವು ನಂಬುತ್ತೇವೆ, ಆದರೂ ಪ್ರತಿ ಬಾರಿಯೂ ಓದಿದಾಗ, ನೋಡಿದಾಗ ತಾಜಾ ಜ್ಞಾನವನ್ನು ನೀಡುತ್ತದೆ. ಹೊಸ ಜ್ಞಾನವನ್ನು ಬೆಳಗಿಸುತ್ತದೆ ಮತ್ತು ಅನನ್ಯ ದೃಷ್ಟಿಕೋನಗಳನ್ನು ನೀಡುತ್ತದೆ. ಈ ಕಾಲಾತೀತ ಮಹಾಕಾವ್ಯವನ್ನು ಬೆಳ್ಳಿ ಪರದೆಯ ಮೇಲೆ ಅದ್ಭುತವಾಗಿ ತರುವುದು, ಅದನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದಿದ್ದಾರೆ.
"ಎಲ್ಲಕ್ಕಿಂತ ಮುಖ್ಯವಾಗಿ ರಾಮಾಯಣ ಕಥೆ. ಎಮೋಷನ್ಸ್ ಹಾಗೂ ನಮಗೆ ನಮಗೆ ಬಹಳ ಇಷ್ಟವಾದ ಮೌಲ್ಯಗಳ ಪ್ರಾಮಾಣಿಕ ಚಿತ್ರಣವಾಗಿರುತ್ತದೆ. 'ರಾಮಾಯಣ'ವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುಲು ಇದು ಒಂದು ಪ್ರಯಾಣ. ಇದು ಸೃಜನಶೀಲ ಅನ್ವೇಷಣೆ, ದಿಟ್ಟ ದೃಷ್ಟಿಕೋನಗಳು ಮತ್ತು ಪ್ರಾಮಾಣಿಕ ಕಥೆ ಹೇಳುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಯಶ್ ಸಂದರ್ಶನದಲ್ಲಿ ವಿವರಿಸಿದ್ದಾರೆ.


Click it and Unblock the Notifications











