ದುಡ್ಡು ಕೊಟ್ಟು ಬರ್ತಾರೆ ನಾವೇನಾದ್ರೂ ಮಾಡಲೇಬೇಕು; ಸೇಮ್ ಡೈಲಾಗ್, ಅಂದು ಅಪ್ಪು, ಇಂದು ಯಶ್!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್.. ಕನ್ನಡ ಚಿತ್ರರಂಗ ಕಂಡ ಬಿಗ್ಗೆಸ್ಟ್ ಸ್ಟಾರ್ ನಟರು. ತಮ್ಮ ಚಿತ್ರಗಳ ಮೂಲಕ ಹಲವಾರು ದಾಖಲೆಗಳನ್ನು ಈ ನಟರು ನಿರ್ಮಿಸಿದ್ದು, ಚಂದನವನದಲ್ಲಿ ಹೆಚ್ಚೆಚ್ಚು ಹಿಟ್ ಚಿತ್ರಗಳನ್ನು ಸತತವಾಗಿ ನೀಡಿದ ಸ್ಟಾರ್‌ಗಳೆನ್ನಿಸಿಕೊಂಡಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ಯಾಕೆ ಯಶಸ್ಸಿನ ಉತ್ತುಂಗಕ್ಕೇರಿದ್ದರು ಎಂದರೆ ಅದಕ್ಕೆ ಕಾರಣ ಚಿತ್ರವೊಂದನ್ನು ಒಪ್ಪಿಕೊಂಡ ಮೇಲೆ ಅದು ಅದ್ಭುತವಾಗಿ ತೆರೆಗೆ ಬರಲು ತಮ್ಮಿಂದ ಯಾವ ರೀತಿಯ ಬೆಂಬಲ, ಸಹಕಾರ ಹಾಗೂ ಪರಿಶ್ರಮ ಬೇಕೋ ಅದನ್ನು ಸಂಪೂರ್ಣವಾಗಿ ನೀಡುತ್ತಿದ್ದದ್ದು.

ಹೌದು, ಸ್ಟಂಟ್ ಆಗಲಿ, ಡಾನ್ಸ್ ಆಗಲಿ ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ಡ್ಯೂಪ್ ಕೇಳುವವರಲ್ಲ. ಅಷ್ಟರ ಮಟ್ಟಕ್ಕೆ ದಂಡಿಸಿ ಕೆಲಸ ಮಾಡಿ ಸಿನಿ ರಸಿಕರಿಗೆ ಮನರಂಜನೆ ನೀಡುವ ಈ ಇಬ್ಬರು ನಟರೂ ಪರಸ್ಪರ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಇಬ್ಬರೂ ಸಹ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ್ದರು ಹಾಗೂ ಒಬ್ಬರನ್ನು ಉದ್ದೇಶಿಸಿ ಇನ್ನೊಬ್ಬರು ಮಾತನಾಡಿದ್ದರು.
ಹೀಗೆ ಸದಾ ಉತ್ಸಾಹದಿಂದ ಇರುವ ಈ ಇಬ್ಬರು ನಟರು ಸಿನಿ ರಸಿಕರ ಕುರಿತಾಗಿ ನೀಡಿರುವ ಒಂದೇ ರೀತಿಯ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಚಿತ್ರರಸಿಕರು ತಮ್ಮನ್ನು ನಂಬಿ ಚಿತ್ರಮಂದಿರಗಳಿಗೆ ಬರುತ್ತಾರೆ, ಅವರಿಗೆ ಕಷ್ಟಪಟ್ಟು ಮನರಂಜನೆ ನೀಡಬೇಕು ಎಂದು ಇಬ್ಬರೂ ಸಹ ಹೇಳಿದ್ದಾರೆ.
ಈ ಹಿಂದೆ ಯುವರತ್ನ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದರು. ಕಷ್ಟಪಟ್ಟು ಸ್ಟಂಟ್ ಮಾಡ್ರೀರ ಎಂಬ ವಿಷಯ ಬಂದಾಗ ಮಾತನಾಡಿದ್ದ ಪುನೀತ್ ರಾಜ್‌ಕುಮಾರ್ "ಜನರು ಮೊದಲ ದಿನ ಮೊದಲನೇ ಪ್ರದರ್ಶನಕ್ಕೆ ತಿಂಡಿನೂ ಮಾಡದೇ ನೀರನ್ನೂ ಸಹ ಕುಡಿಯದೇ ಚಿತ್ರಮಂದಿರಕ್ಕೆ ದುಡ್ಡು ಕೊಟ್ಟು ಟಿಕೆಟ್ ಕೊಟ್ಟು ಬಂದಿರ್ತಾರೆ. ಅದಕ್ಕೆ ತಕ್ಕನಾಗಿಯಾದರೂ ನಾವು ಏನಾದರೂ ಮಾಡಬೇಕು" ಎಂದಿದ್ದರು.
ಇದೀಗ ಯಶ್ ಸಹ ನಿನ್ನೆ ನಂಜನಗೂಡಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಯಶ್ ಸಹ ಪುನೀತ್ ರಾಜ್‌ಕುಮಾರ್ ರೀತಿಯೇ ಹೇಳಿಕೆ ನೀಡಿದ್ದಾರೆ. "ಜನ ನಮಗೆ ಏನು ಶಕ್ತಿ ಕೊಟ್ಟು ಬೆಳೆಸಿದಾರೆ, ಏನು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ, ನಾನು ನಂಬೋದು ಒಂದೇ. ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡ್ತಾ ಇದೆ. ಆ ಜವಾಬ್ದಾರಿ ನನ್ನ ಮೇಲಿದೆ. ದೇವರ ಸನ್ನಿಧಾನ ಸುಮ್ಮನೆ ಹೇಳೋದು ಬೇಡ. ಬಹಳ ದಿನಗಳಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ. ಅವರೆಲ್ಲರೂ ಖುಷಿ ಪಡೋ ರೀತಿ ಕೆಲಸ ಆಗುತ್ತೆ. ನಾನ್ ಹೇಳಿದ್ನಲ್ಲ, ನನಗೆ ಜವಾಬ್ದಾರಿ ಇದೆ. ಜನ ಫ್ರೀ ನೋಡೋ ಹಾಗೆ ಇದ್ದಿದ್ರೆ ನಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಅವರೇ ಬೆಳೆಸಿರುವುದು, ಅವರು ಖುಷಿಯಿಂದ ಇರುವ ರೀತಿಯ ಕೆಲಸವನ್ನು ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ, ನಾನು ಮಾಡ್ತಾ ಇದ್ದೀನಿ" ಎಂದು ಯಶ್ ಹೇಳಿಕೆ ನೀಡಿದರು
ಈ ಎರಡು ಹೇಳಿಕೆಗಳನ್ನು ಹೋಲಿಸಿ ಇದೀಗ ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಿದ್ದು, ಇಬ್ಬರೂ ನಟರನ್ನು ಹೊಗಳುತ್ತಿದ್ದಾರೆ.


Click it and Unblock the Notifications











