'ಟಾಕ್ಸಿಕ್' ಬಿಗ್ ಅಪ್‌ಡೇಟ್; ಕೈ ಕೈ ಮಿಲಾಯಿಸಿದ ರಾಕಿಂಗ್ ಸ್ಟಾರ್ ಯಶ್
ರಾಮಾಯಣ ಸಿನಿಮಾ ಚಿತ್ರೀಕರಣ ಮುಗಿಸಿ ಯೂಎಸ್‌ಗೆ ಪ್ರವಾಸಕ್ಕೆ ಹೋಗಿದ್ದ ನಟ ಯಶ್ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಸದ್ದಿಲ್ಲದೇ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಮತ್ತೆ ಗ್ಯಾಂಗ್‌ಸ್ಟರ್ ಆಗಿ 'ಟಾಕ್ಸಿಕ್'ಗಾಗಿ ಕಾದಾಡುತ್ತಿದ್ದಾರೆ. ಈ ಬಾರಿ ಮತ್ತೆ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್' ಕೊನೆ ಶೆಡ್ಯೂಲ್ ಶೂಟಿಂಗ್ ಶುರುವಾಗಿದೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂಬೈನ ಗೋರೆಗಾಂವ್‌ನಲ್ಲಿರು ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸುತ್ತಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುತ್ತಿದೆ ಎಂದು ಸುದ್ದಿಯಾಗಿದೆ.

ಈ ಹಿಂದೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಬಂದು 'ಟಾಕ್ಸಿಕ್' ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದು ಗೊತ್ತೇಯಿದೆ. ಇದೀಗ ಮತ್ತೊಂದು ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೀತಿದೆ ಎಂದು ಮಿಡ್‌ಡೇ ಪತ್ರಿಕೆ ವರದಿ ಮಾಡಿದೆ. ಮೂಲಗಳ ಪ್ರಕಾರ "ಟಾಕ್ಸಿಕ್ ಚಿತ್ರದ ಹೊಸ ಶೆಡ್ಯೂಲ್ ಶೂಟಿಂಗ್ ಕಳೆದ ಸೋಮವಾರದಿಂದ ಶುರುವಾಗಿದೆ. ಒಳಾಂಗಣದಲ್ಲೇ ಹೆಚ್ಚು ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ. ಡ್ಯೂಪ್ ಇಲ್ಲದೇ ಕಲಾವಿದರು ಖುದ್ದು ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಕೈ ಕೈ ಮಿಲಾಯಿಸುವ ಹೋರಾಟದ ಸನ್ನಿವೇಶಗಳಿವು" ಎಂದು ವರದಿ ಮಾಡಿದೆ.
ಸುರಕ್ಷತೆ ದೃಷ್ಟಿಯಿಂದ 15 ಜನ ನುರಿತ ತಜ್ಞರ ಸಹಾಯ ಪಡೆದುಕೊಂಡು 'ಟಾಕ್ಸಿಕ್' ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಶೂಟ್ ಮಾಡುತ್ತಿದ್ದಾರೆ. ಬಹಳ ನೈಜ ಹಾಗೂ ಅಷ್ಟೇ ರಗಡ್ ಆಗಿ ಈ ಆಕ್ಷನ್ ಸೀಕ್ವೆನ್ಸ್ ಇರಲಿದೆ ಎಂದು ಹೇಳಲಾಗ್ತಿದೆ. ಒಟ್ಟಾರೆ ಮೇಕಿಂಗ್ ಹಂತದಲ್ಲೇ 'ಟಾಕ್ಸಿಕ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ರಾಕಿಂಗ್ ಸ್ಟಾರ್ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಘಟನಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಏಕಕಾಲಕ್ಕೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು ದೇಶ ವಿದೇಶದ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ನಡೀತಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಯಶ್ ನಟನೆಯ 'ಕೆಜಿಎಫ್-2' ಸಿನಿಮಾ ಬಂದೋಗಿ 3 ವರ್ಷ ಕಳೆದಿದೆ. ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ನೋಡಲು ಕಾತರದಿಂದ ಕಾಯುವಂತಾಗಿದೆ. ಲೇಟ್ ಆದರೂ ದೊಡ್ಡಮಟ್ಟದಲ್ಲೇ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡ್ತಿದ್ದಾರೆ. ಮುಂದಿನ ವರ್ಷ ರಾಕಿಂಗ್ ಫ್ಯಾನ್ಸ್‌ಗೆ ಡಬಲ್ ಧಮಾಕಾ ಕಾದಿದೆ. ಯಶ್ ರಾವಣನಾಗಿ ನಟಿಸಿರುವ 'ರಾಮಾಯಣ' ಸಿನಿಮಾ ಕೂಡ ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆ ಆಗಲಿದೆ.

'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಅಕ್ಷಯ್ ಒಬೆರಾಯ್ ಚಿತ್ರದ ತಾರಾಗಣದಲ್ಲಿದ್ದಾರೆ. ಎಲ್ಲಾ ಪಾತ್ರಗಳಿಗೂ ಬಹಳ ಮಹತ್ವ ಇದೆ ಎಂದು ಸ್ವತಃ ಯಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬೆಂಗಳೂರು ಹಾಗೂ ಮುಂಬೈನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣ ನಡೆದಿದೆ. ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ.
'ಟಾಕ್ಸಿಕ್' ಚಿತ್ರಕ್ಕೆ ತಮಿಳು ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎನ್ನಲಾಗ್ತಿದೆ. ಅದಕ್ಕಾಗಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.


Click it and Unblock the Notifications











