ಹಾಲಿವುಡ್ ಸಂದರ್ಶನಗಳಲ್ಲಿ 'ರಾಮಾಯಣ' ಹಾಗೂ 'ಟಾಕ್ಸಿಕ್' ವಿಚಾರದಲ್ಲಿ ಆ ತಪ್ಪು ಮಾಡಬಾರದಿತ್ತು ಯಶ್
ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳ ಮುಂದೆ ಬಂದು ಬಹಳ ದಿನಗಳಾಗಿತ್ತು. 'KGF'-2 ಸಿನಿಮಾ ಬಿಡುಗಡೆ ಸಮಯದಲ್ಲಿ ಮಾಧ್ಯಮಗಳಿಗೆ ಒಂದಷ್ಟು ಸಂದರ್ಶನ ನೀಡಿದ್ದರು. ಬಳಿಕ ಹಾಲಿವುಡ್ ರಿಪೋರ್ಟರ್ ಸಂದರ್ಶನದಲ್ಲಿ ಮಾತನಾಡಿದ್ದರು. ಇನ್ನುಳಿದಂತೆ ಹೆಚ್ಚು ಮಾಧ್ಯಮಗಳ ಮುಂದೆ ಬರಲಿಲ್ಲ. 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಬಗ್ಗೆ ಚಿತ್ರತಂಡ ಬಹಳ ಗೌಪ್ಯತೆ ಕಾಪಾಡಿಕೊಂಡಿತ್ತು. ಕಲಾವಿದರ ಆಯ್ಕೆ, ಚಿತ್ರೀಕರಣ ಹೀಗೆ ಯಾವುದರ ಬಗ್ಗೆಯೂ ಹೆಚ್ಚು ಮಾಹಿತಿ ನೀಡಿರಲಿಲ್ಲ. ಟೀಸರ್ ಬಿಡುಗಡೆ ಸಮಯದಲ್ಲೇ ನಯನತಾರಾ, ಹುಮಾ ಖುರೇಶಿ, ರುಕ್ಮಿಣಿ ವಸಂತ್ ಲುಕ್ ಅನಾವರಣ ಆಗಿತ್ತು. ಅದಕ್ಕೂ ಮುನ್ನ ಸಂದರ್ಶನಗಳಲ್ಲಿ ಕೂಡ ಸಿನಿಮಾ ಬಗ್ಗೆ ಮಾತನಾಡಬಾರದು ಎಂದು ಚಿತ್ರತಂಡ ಕಲಾವಿದರು, ತಂತ್ರಜ್ಞರಿಗೆ ತಾಕೀತು ಮಾಡಿತ್ತು.

ನಯನತಾರಾ, ಹುಮಾ ಖುರೇಶಿ ಕೂಡ ಸಂದರ್ಶನಗಳಲ್ಲಿ 'ಟಾಕ್ಸಿಕ್' ಸಿನಿಮಾ ಬಗ್ಗೆ ಕೇಳಿದಾಗ ಸರಿಯಾಗಿ ಉತ್ತರಿಸದೇ ನುಣುಚಿಕೊಂಡಿದ್ದರು. 'ರಾಮಾಯಣ' ಚಿತ್ರದ ಬಗ್ಗೆ ನಿರ್ಮಾಪಕ ನಮಿಕ್ ಮಲ್ಹೋತ್ರಾ ಬಿಟ್ಟು ಯಾರು ಟೀಸರ್ ಬಿಡುಗಡೆ ಆಗುವವರೆಗೂ ಮಾತನಾಡಿರಲಿಲ್ಲ. ಇತ್ತೀಚೆಗೆ ಲಾಸ್ ವೇಗಸ್‌ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಭಾಗಿ ಆಗಿದ್ದರು. 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಹಾಲಿವುಡ್ ಮಾಧ್ಯಮಗಳ ಸಂದರ್ಶನಗಳಲ್ಲಿ ರಾಕಿಂಗ್ ಸ್ಟಾರ್ ಮಿಂಚಿದ್ದಾರೆ.
ಯಶ್ ಹೇಳಿದ್ದು ಎಲ್ಲಾ ಸರಿ. ಆದರೆ ಆ ಎರಡು ಸೀಕ್ರೆಟ್ ಬಿಟ್ಟುಕೊಡಬಾರದಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ನಾನು ರಣ್‌ಬೀರ್ ಕಪೂರ್ ಜೊತೆ ತೆರೆ ಹಂಚಿಕೊಂಡಿಲ್ಲ. ಇಬ್ಬರೂ ಒಟ್ಟಿಗೆ ಕ್ಯಾಮರಾ ಎದುರಿಸಿಲ್ಲ. 2ನೇ ಭಾಗದಲ್ಲಿ ನಮ್ಮಿಬ್ಬರ ದೃಶ್ಯಗಳು ಇರಲಿವೆ ಎಂದಿದ್ದಾರೆ. ಸಿನಿಮಾ ಬಿಡುಗಡೆ ಆಗುವವರೆಗೂ ಈ ಸೀಕ್ರೆಟ್ ರಿವೀಲ್ ಮಾಡಬಾರದಿತ್ತು ಎನ್ನುವುದು ಕೆಲವರ ಅಭಿಪ್ರಾಯ.

ಅದೇ ರೀತಿ 'ಟಾಕ್ಸಿಕ್' ಚಿತ್ರದ ಸ್ಟೋರಿಲೈನ್ ಬಗ್ಗೆ ಕೂಡ ಯಶ್ ಮಾತನಾಡಿದ್ದಾರೆ. ಇಷ್ಟು ದಿನ ಗ್ಯಾಂಗ್‌ಸ್ಟರ್ ಸಿನಿಮಾ ಎನ್ನುವುದು ಮಾತ್ರ ಪ್ರೇಕ್ಷಕರಿಗೆ ಗೊತ್ತಾಗಿತ್ತು. ಆದರೆ ತಂದೆ- ಮಗನ ಸೇಡಿನ ಕಥೆ ಎಂದು ಯಶ್ ಹೇಳಿದ್ದಾರೆ. ಕೊನೆ ಪಕ್ಷ ಟ್ರೈಲರ್ ಬಿಡುಗಡೆ ಆಗುವರೆಗೂ ಈ ಸೀಕ್ರೆಟ್ ಬಿಟ್ಟುಕೊಡಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
'ಟಾಕ್ಸಿಕ್' ಟೀಸರ್ ನೋಡಿ ಎರಡು ಅವತಾರಗಳಲ್ಲಿ ಯಶ್ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ರಾಯ ಹಾಗೂ ಟಿಕೆಟ್ ಎಂಬ ಪಾತ್ರಗಳಲ್ಲಿ ಯಶ್ ನಟಿಸಿದ್ದಾರೆ. ಇವರಿಬ್ಬರು ತಂದೆ ಮಗ ಎಂದು ಕೆಲವರು ಊಹಿಸಿದ್ದರು. ಆದರೆ ಬಹುತೇಕರು ಇಬ್ಬರೂ ಒಬ್ಬರೆ ಆಗಿರಬಹುದು. ದ್ವಿಪಾತ್ರ ಅಲ್ಲ, ಎರಡು ಶೇಡ್ ಇರುವ ಪಾತ್ರ ಆಗಿರಬಹುದು ಎನ್ನುವ ಗೊಂದಲ ಕೆಲವರಲ್ಲಿ ಇತ್ತು. ಮತ್ತಷ್ಟು ದಿನ ಇದು ಸೀಕ್ರೆಟ್ ಆಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಿದ್ದಾರೆ.
ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆದರೂ ಗೋವಾ 1961ರವರೆಗೆ ಪೋರ್ಚುಗೀಸರ ವಶದಲ್ಲಿತ್ತು. ಆ ಸಮಯದಲ್ಲಿ ನಡೆಯುವ ಒಂದು ಕಾಲ್ಪನಿಕ ಗ್ಯಾಂಗ್‌ಸ್ಟರ್ ಕಥೆ ಇದು ಎಂದು ಕೂಡ ಯಶ್ 'ಟಾಕ್ಸಿಕ್' ಸಿನಿಮಾ ಬಗ್ಗೆ ಹೇಳಿಬಿಟ್ಟಿದ್ದಾರೆ. ಇಷ್ಟು ದಿನ ಗುಟ್ಟು ಕಾಯ್ದುಕೊಂಡಿದ್ದವರು ಈಗ ಯಾಕೆ ಹೇಳಿಬಿಟ್ರು ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸ್ಟೋರಿ ಲೈನ್ ಹೇಳಿದ್ರು ನಾವು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡೋದು ಗ್ಯಾರಂಟಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications