ಅವತ್ತು ಆ ನಟ ನನ್ನೊಟ್ಟಿಗೆ ಒರಟಾಗಿ ನಡೆದುಕೊಂಡಿದ್ದ.. ಬಳಿಕ ಅವನ ಸಿನ್ಮಾ ನೋಡೊದು ಬಿಟ್ಟೆ; ಯಶ್
ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲರೂ ಮತ್ತೊಮ್ಮೆ ತಿರುಗಿ ನೋಡಬೇಕು ಎಂದು ಕನಸು ಕಂಡವರು ಯಶ್. ಸತತ ಪರಿಶ್ರಮದಿಂದ 'KGF' ಸರಣಿ ಮೂಲಕ ಅದನ್ನು ಸಾಧಿಸಿ ತೋರಿಸಿದರು. ಈಗ ಹಾಲಿವುಡ್ ಮಂದಿ ಕೂಡ ಕನ್ನಡ ಸಿನಿಮಾ ನೋಡಬೇಕು ಎನ್ನುವ ಕನಸು ಬೆನ್ನೇರಿ ಹೊರಟ್ಟಿದ್ದಾರೆ. 'ಟಾಕ್ಸಿಕ್' ಸಿನಮಾ ಮೂಲಕ ಅದನ್ನು ಸಾಧಿಸಿ ತೋರಿಸುವ ಪ್ರಯತ್ನದಲ್ಲಿದ್ದಾರೆ.
ಎಲ್ಲೇ ಹೋದ್ರು ಯಶ್ ಕನ್ನಡ ನಾಡು, ಕನ್ನಡ ಭಾಷೆ ಮರೆಯುವುದಿಲ್ಲ. ಇತ್ತೀಚೆಗೆ ಹಾಲಿವುಡ್ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಭಾಗಿ ಆಗಿದ್ದರು. ಈ ವೇಳೆ ಸಾಕಷ್ಟು ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. Collider Interviews ಚಾನಲ್ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಭಾಷೆ, ಕರ್ನಾಟಕದಲ್ಲಿ ಸಿನಿಮಾ ಕ್ರೇಜ್ ಹಾಗೂ ನಟನೊಬ್ಬ ತಮ್ಮ ಜೊತೆ ಒರಟಾಗಿ ನಡೆದುಕೊಂಡ ಬಗ್ಗೆ ಕೂಡ ಯಶ್ ಹೇಳಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

ನೀವು ಯಾರ ಬಳಿ ಆದ್ರೂ ಆಟೋಗ್ರಾಫ್ ತಗೊಂಡಿದ್ದೀರಾ? ಎನ್ನುವ ಪ್ರಶ್ನೆಗೆ ಯಶ್ ಉತ್ತರಿಸಿದ್ದಾರೆ. "ಖಂಡಿತ ಆಟೋಗ್ರಾಫ್ ತಗೊಂಡಿದ್ದೀನಿ. ನಾನು ಭಾರತದ ದೇಶದ ಕರ್ನಾಟಕದವನು. ನಾನು ಕನ್ನಡ ಭಾಷೆ ಮಾತನಾಡ್ತೀವಿ.. ಕನ್ನಡದಲ್ಲಿ ಸಾಕಷ್ಟು ದಿಗ್ಗಜ ಕಲಾವಿದರಿದ್ದಾರೆ. ನಾನು ಯಾರಾದರೂ ಕಲಾವಿದರನ್ನು ನೋಡಿದ್ರೆ ಹೋಗಿ ಆಟೋಗ್ರಾಫ್ ತಗೋತ್ತಿದ್ದೆ" ಎಂದು ಯಶ್ ಹೇಳಿದ್ದಾರೆ.
ನೀವು ಆಟೋಗ್ರಾಫ್ ಪಡೆಯುವಾಗ ಸ್ಟಾರ್ಸ್ ನಿಮ್ಮ ಜೊತೆ ವರ್ತಿಸಿದ ರೀತಿ ಮುಂದೆ ನೀವು ಅಭಿಮಾನಿಗಳನ್ನು ಭೇಟಿ ಆಗುವಾಗ ನೀವು ಅವರೊಟ್ಟಿಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಪ್ರಭಾವಿಸಿದ್ಯಾ? ಎನ್ನುವ ಪ್ರಶ್ನೆ ಎದುರಾಗಿದೆ. ಕೂಡಲೇ ಯಶ್ ಒಂದು ಘಟನೆ ನೆನಪಿಸಿಕೊಂಡಿದ್ದಾರೆ. "ಒಮ್ಮೆ ನಾನು ಒಬ್ಬ ನಟನ ಆಟೋಗ್ರಾಫ್ ಕೇಳಿದ್ದೆ. ಆ ವ್ಯಕ್ತಿ ಯಾವ ಮೂಡ್‌ನಲ್ಲಿ ಇದ್ರು ಗೊತ್ತಿಲ್ಲ.. ನನ್ನ ಜೊತೆ ಒರಟಾಗಿ ನಡೆದುಕೊಂಡ್ರು.. ಆ ಬಳಿಕ ನಾನು ಆ ನಟನ ಸಿನಿಮಾ, ಆತನ ಮುಖ ನೋಡೋದು ಬಿಟ್ಟೆ.. ಇದರಿಂದ ಏನು ಗೊತ್ತಾಯ್ತು ಅಂದ್ರೆ, ನಾವು ಯಾವುದೇ ಮೂಡ್‌ನಲ್ಲಿ ಇದ್ರು, ಅಭಿಮಾನಿಗಳು ಬಂದಾಗ ಅವರೊಟ್ಟಿಗೆ ಮೃಧುವಾಗಿ ನಡೆದುಕೊಳ್ಳಬೇಕು.. ಅವ್ರು ನಮ್ಮನ್ನು ಮತ್ತೆ ಯಾವಾಗ ಭೇಟಿ ಆಗ್ತಾರೆ ಗೊತ್ತಿಲ್ಲ, ಆದ್ರೆ ನಾವು ಅವರೊಟ್ಟಿಗೆ ಹೇಗೆ ನಡೆದುಕೊಂಡ್ವಿ ಎನ್ನುವುದನ್ನು ನೆನಪಿಟ್ಟುಕೊಳ್ಳುತ್ತಾರೆ. ಹಾಗಾಗಿ ನಾನು ಬಹಳ ಸರಳವಾಗಿ ಎಲ್ಲರೊಟ್ಟಿಗೆ ಸ್ಪಂದಿಸ್ತೀನಿ. ನನ್ನ ವೈಯಕ್ತಿಕ ಅನುಭವದಿಂದ ನಾನು ಇದನ್ನು ಕಲಿತೆ" ಎಂದಿದ್ದಾರೆ.
ನನಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ನೋಡೋಕೆ ಇಷ್ಟ.. ಭಾರತದಲ್ಲಿ ಅದರಲ್ಲೂ ಕರ್ನಾಟಕದ ಮೆಜೆಸ್ಟಿಕ್ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಂಭ್ರಮವೇ ಬೇರೆ ಎಂದು ಯಶ್ ಹೇಳಿದ್ದಾರೆ. "ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಎಂಬ ಏರಿಯಾ ಇದೆ. ಅಲ್ಲಿ ಸಿನಿಮಾಗಳನ್ನು ನೋಡುವ ಮಜಾ ಬೇರೆ.. ಜನ ಥಿಯೇಟರ್‌ನ ಸ್ಟೇಡಿಯಂ ಆಗಿ ಬದಲಿಸಿಬಿಡ್ತಾರೆ.. ನಾಣ್ಯಗಳನ್ನು ತೂರುತ್ತಾರೆ.. ಡ್ಯಾನ್ಸ್ ಮಾಡ್ತಾರೆ.. ಸ್ಕ್ರೀನ್ ಮುಂದೆ ಹೋಗಿ ಕುಣಿದು ಕುಪ್ಪಳಿಸುತ್ತಾರೆ. ಆ ವಾತಾವರಣವೇ ಬೇರೆ.. ಆ ರೀತಿ ಪ್ರೇಕ್ಷಕರ ಮಧ್ಯೆ ಸಿನಿಮಾ ವೀಕ್ಷಿಸುವುದು ನನಗೆ ಇಷ್ಟ" ಎಂದಿದ್ದಾರೆ.
ಬೇಸರದ ಸಂಗತಿ ಎಂದರೆ ಈ ಸಂದರ್ಶನದಲ್ಲಿ ಕೂಡ ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಆಗುತ್ತದೆ ಎಂದು ಯಶ್ ಭರವಸೆಯಿಂದ ಮಾತನಾಡಿದ್ದಾರೆ. ಆದರೆ ಸಿನಿಮಾ ತಡವಾಗುತ್ತಿದೆ. ಇನ್ನು ಎಷ್ಟು ದಿನ ಕಾಯಬೇಕು ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಭಾರತದ ಜೊತೆಗೆ ಹಾಲಿವುಡ್ ಅಂಗಳದಲ್ಲಿ ಕೂಡ ದೊಡ್ಡದಾಗಿ ಸಿನಿಮಾ ಬಿಡುಗಡೆ ಮಾಡಲು ಯಶ್ ಮನಸ್ಸು ಮಾಡಿದ್ದಾರೆ. ಆ ನಿರ್ಧಾರದಿಂದ ಹಿಂದೆ ಸರಿಯಯವ ಮಾತೇ ಇಲ್ಲ ಎನ್ನುವಂತಾಗಿದೆ. ಹಾಗಾಗಿ ಪ್ರೇಕ್ಷಕರು ಇನ್ನು ಸ್ವಲ್ಪ ದಿನ ತಾಳ್ಮೆಯಿಂದ ಕಾಯಲೇಬೇಕಿದೆ.


Click it and Unblock the Notifications