ಉತ್ಕಟಭರಿತ ರೋರಲ್ ಕೋಸ್ಟರ್ ರೈಡ್ 'ಟಾಕ್ಸಿಕ್'; ನಯನತಾರಾ ಪಾತ್ರದ ಬಗ್ಗೆ ಕೂಡ ಯಶ್ ಮಾತು
ಪದೇ ಪದೆ 'ಟಾಕ್ಸಿಕ್' ರಿಲೀಸ್ ತಡವಾಗಿ ಸಿನಿರಸಿಕರಿಗೆ ನಿರಾಸೆ ಆಗ್ತಿದೆ. ಲೇಟ್ ಆದ್ರು ನಮ್ ಬಾಸ್ ಲೇಟೆಸ್ಟ್ ಆಗಿ ಬರ್ತಾರೆ ಎಂದು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಜೂನ್ 4ಕ್ಕೆ ಬರಬೇಕಿದ್ದ ಸಿನಿಮಾ ಬಿಡುಗಡೆಯನ್ನು ಮತ್ತಷ್ಟು ತಳ್ಳಿ ಹಾಕಲಾಗಿದೆ. ಈ ಬಾರಿ ಗೊಂದಲ ಬೇಡ ಎಂದು ಡೇಟ್ ಕೂಡ ಫಿಕ್ಸ್ ಮಾಡಿಲ್ಲ.
ಈಗಾಗಲೇ 'ಟಾಕ್ಸಿಕ್' ಚಿತ್ರದ ಕಥೆ, ಪಾತ್ರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಸಿನಿಮಾಕಾನ್ ಸಮಾವೇಶಕ್ಕೆ ಹೋಗಿದ್ದ ಯಶ್ ಹಾಲಿವುಡ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಕಥೆಯ ಬಗ್ಗೆ ಕೂಡ ಸುಳಿವು ಬಿಟ್ಟುಕೊಟ್ಟಿದ್ದಾರೆ. Review Nation ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮತ್ತೊಮ್ಮೆ 'ಟಾಕ್ಸಿಕ್' ಬಗ್ಗೆ ಯಶ್ ಮಾತನಾಡಿರುವುದು ವೈರಲ್ ಆಗ್ತಿದೆ.

'ಟಾಕ್ಸಿಕ್' ಸಿನಿಮಾ ಉತ್ಕಟಭರಿತ ರೋರಲ್ ಕೋಸ್ಟರ್ ರೈಡ್ ರೀತಿ ಇರುತ್ತದೆ ಎಂದು ಯಶ್ ತಿಳಿಸಿದ್ದಾರೆ. "ಸೂಕ್ಮತೆಯನ್ನು ಬಿಡದೇ ಬಹಳ ದಿಟ್ಟತನದ ದೃಷ್ಟಿಕೋನದಿಂದ ಕಟ್ಟಿಕೊಟ್ಟಿರುವ ಸಿನಿಮಾ ಇದು. ಮಾನವ ಭಾವನೆಗಳ ಕರಾಳತೆ, ನಾವು ಕೆಲವೊಮ್ಮೆ ಅರ್ಥಮಾಡಿಕೊಳ್ಳಲು ಅಥವಾ ಕೇಳಲು ಸಾಧ್ಯವಾಗದ ಪ್ರಶ್ನೆಗಳನ್ನು ಸ್ಪರ್ಶಿಸುವ ಪ್ರಯತ್ನವಾಗಿದೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ.. ನಾವು ಆಯ್ಕೆ ಮಾಡಿಕೊಂಡಿರುವ ಕಾಲಘಟ್ಟ ಬಹಳ ವಿಶೇಷವಾಗಿದೆ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದರೂ, 1961 ರವರೆಗೆ ಗೋವಾ ಪೋರ್ಚುಗೀಸರ ನಿಯಂತ್ರಣದಲ್ಲಿತ್ತು. ಆ ಅವಧಿಯಲ್ಲಿ, ಪೋರ್ಚುಗೀಸರು ಮತ್ತು ಭಾರತೀಯರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಲ್ಲಿ ವ್ಯಾಪಾರ, ವ್ಯವಹಾರ ಜೋರಾಗಿತ್ತು. ಆ ಅವಧಿಯಲ್ಲಿ, ಅಧಿಕಾರಕ್ಕಾಗಿ ಹೋರಾಟ, ದುರಾಸೆ ಮತ್ತು ದರೋಡೆಕೋರರು, ಟಾಮಿ ಗನ್‌ಗಳು ಹೀಗೆ ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ" ಎಂದಿದ್ದಾರೆ.
ಬರೀ ಗ್ಯಾಂಗ್‌ಸ್ಟರ್ಸ್ ಆರ್ಭಟ, ಆಕ್ಷನ್ ಅಷ್ಟೇ ಇಲ್ಲ. ಬಹಳ ಸಂಕೀರ್ಣವಾದ ಮಾನವ ಭಾವನೆಗಳನ್ನು ಕಟ್ಟಿಕೊಡಲಾಗಿದೆ ಎಂದು ಯಶ್ ವಿವರಿಸಿದ್ದಾರೆ. "ಆಳವಾದ ಪ್ರೇಮಕಥೆ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯ, ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆ ಕೂಡ ಹೊಂದಿದೆ. ಆದ್ದರಿಂದ ಇದು ತುಂಬಾ ಆಸಕ್ತಿದಾಯಕ ಪ್ಯಾಕೇಜ್. ಸಮಾಜದಲ್ಲಿ ನಾವು ಹೊಂದಿರುವ ಸಂಪ್ರದಾಯಗಳನ್ನು ನಿಜವಾಗಿಯೂ ಪ್ರಶ್ನಿಸುತ್ತದೆ. ಕೆಲವೊಮ್ಮೆ ಸಂಬಂಧಗಳ ವಿಷಯಕ್ಕೆ ಬಂದಾಗ ನಾವು ನಮ್ಮದೇ ಆದ ಊಹೆಗಳಿಗೆ ಬದ್ಧರಾಗಿರುತ್ತೇವೆ. ಹಾಗಾಗಿ ಅದರಲ್ಲಿ ಕೆಲವು ಸೂಕ್ಷ್ಮ ಅಂಶಗಳಿವೆ. ನಿರ್ದೇಶಕರು ಒಬ್ಬ ಮಹಿಳೆ. ಮಹಿಳಾ ದೃಷ್ಟಿಕೋನದ ಗ್ಯಾಂಗ್‌ಸ್ಟರ್ ಚಿತ್ರ ಬರುತ್ತಿರುವುದು ತುಂಬಾ ರೋಮಾಂಚನಕಾರಿಯಾಗಿದೆ" ಎಂದು ಯಶ್ ಹೇಳಿದ್ದಾರೆ.
ಯಶ್ ತಮ್ಮ ಪಾತ್ರದ ಬಗ್ಗೆ ಮಾತನಾಡಿ "ನನ್ನ ಪಾತ್ರವು ಬಹಳಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಯುವಕ, ಅವನಿಗೆ ತುಂಬಾ ಕರಾಳ ಹಿನ್ನೆಲೆಯಿದೆ. ಆದ್ದರಿಂದ ಪಾತ್ರವು ಕೆಲವು ಮಾನಸಿಕ ಆಘಾತ ಅಥವಾ ಕೆಲವು ಅಗತ್ಯಗಳನ್ನು ನಿಭಾಯಿಸುತ್ತ ಅವನನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತದೆ. ಇದನ್ನು ವ್ಯಾಖ್ಯಾನಿಸುವುದು ನನಗೆ ಕಷ್ಟ, ಇದರಲ್ಲಿ ನೀವು ಅಸಾಧಾರಣ ವ್ಯಕ್ತಿ, ಒರಟು ಗ್ಯಾಂಗ್‌ಸ್ಟರ್ ಅನ್ನು ನೋಡುತ್ತೀರಿ. ಅವನು ನಿರ್ದಯ, ಪಶ್ಚಾತ್ತಾಪವಿಲ್ಲದವನು. ಅವನು ತನ್ನ ಜೀವನವನ್ನು ತನಗೆ ಬೇಕಾದ ರೀತಿಯಲ್ಲಿ ಬದುಕಲು ಬಯಸುತ್ತಾನೆ. ಅವನು ಈ ಜಗತ್ತಿನಲ್ಲಿ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಅವನು ಏನನ್ನಾದರೂ ಮಾಡಲು ಬಯಸಿದರೆ, ಅವನು ಉಳಿದೆಲ್ಲವನ್ನೂ ಲೆಕ್ಕಿಸದೆ ಅದನ್ನು ಮಾಡುತ್ತಾನೆ. ಇದು ಈ ಪಾತ್ರದ ಅತ್ಯುತ್ತಮ ಭಾಗ ಎಂದು ನಾನು ಭಾವಿಸುತ್ತೇನೆ" ಎಂದು ರಾಯ ಪಾತ್ರದ ಬಗ್ಗೆ ಯಶ್ ಮಾಹಿತಿ ನೀಡಿದ್ದಾರೆ.
ಚಿತ್ರದಲ್ಲಿ ಗಂಗಾ ಎಂಬ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಆಕೆ ಯಶ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಚಿತ್ರದಲ್ಲಿ ಸಹೋದರ ಹಾಗೂ ಸಹೋದರಿ ನಡುವಿನ ಬಾಂಧವ್ಯ ಇದೆ ಎಂದು ಯಶ್ ಹೇಳಿದ್ದು ಕೇಳಿದ ಮೇಲೆ ಅದು ಖಚಿತವಾಗಿದೆ. ರಾಯನ ಅಕ್ಕ ಗಂಗಾ ಆಗಿ ತಮಿಳು ನಟಿ ಬಣ್ಣಹಚ್ಚಿದ್ದಾರೆ.


Click it and Unblock the Notifications