'ಟಾಕ್ಸಿಕ್' ಅಲ್ಲಿ ಅಶ್ಲೀಲತೆ ಎಲ್ರೀ ಇದೆ, ಎಲ್ಲರಿಗೂ ಎಲ್ಲಾ ಕೊಡ್ಬೇಕು, ಟ್ರೆಂಡ್‌ಗೆ ಮಾಡಿರೋ ಸಿನಿಮಾ; ಯಶ್ ತಾಯಿ
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಟೀಸರ್ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಅತಿಯಾದ ಹಸಿಬಿಸಿ ದೃಶ್ಯಗಳು ಚಿತ್ರದಲ್ಲಿವೆ ಎಂದು ಕೆಲವರು ಆರೋಪಿಸಿದ್ದರು. ಯಶ್ ಅವರಿಂದ ಇದನ್ನೆಲ್ಲಾ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಮಕ್ಕಳು ಈ ಸಿನಿಮಾ ನೋಡೊಕೆ ಆಗುತ್ತಾ? ಎಂದು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಸ್ವತಃ ಯಶ್ ತಾಯಿ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣದ ಸಿನಿಮಾ 'ಟಾಕ್ಸಿಕ್'. ಪದೇ ಪದೆ ಬಿಡುಗಡೆ ದಿನಾಂಕ ಬದಲಾಗುತ್ತಿದೆ. ಈ ವರ್ಷ ಸಿನಿಮಾ ತೆರೆಗೆ ಬರುವುದೇ ಅನುಮಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಚಿತ್ರದ ವಿವಾದಾತ್ಮಕ ದೃಶ್ಯಗಳ ಬಗ್ಗೆ ಯಶ್ ತಾಯಿ ಮಾತನಾಡಿದ್ದಾರೆ. 'ಟಾಕ್ಸಿಕ್' ಅಲ್ಲಿ ಅಶ್ಲೀಲತೆ ಎಲ್ರೀ ಇದೆ ಪ್ರಶ್ನಿಸಿದ್ದಾರೆ.

ಚಿತ್ರರಂಗದ ಸಮಸ್ಯೆಗಳ ಬಗ್ಗೆ ಪುಷ್ಪಾ ಅರುಣ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾಗಳು ಬರ್ತಿವೆ. ಪ್ರೇಕ್ಷಕರಿಗೆ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡ್ತಾರೆ. ಅಭಿರುಚಿ ಬದಲಾದಂತೆ ಕಥೆ, ಸಿನಿಮಾ ಎಲ್ಲವೂ ಬದಲಾಗುತ್ತದೆ ಎಂದು ಪುಷ್ಪಾ ಅರುಣ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ಮಚ್ಚು, ಲಾಂಗು ಇರಲ್ಲ. 'ಕೊತ್ತಲವಾಡಿ' ಚಿತ್ರದಲ್ಲಿ ಕೌಟುಂಬಿಕ ಕಥೆ ಇತ್ತು. ನೀವೆಲ್ಲಾ ನೋಡಿದ್ರಾ? ಒಳ್ಳೆ ಥಿಯೇಟರ್ ಕೂಡ ನಮಗೆ ಸಿಗಲಿಲ್ಲ ಎಂದಿದ್ದಾರೆ.
ಬಳಿಕ 'ಟಾಕ್ಸಿಕ್' ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ. "ಟಾಕ್ಸಿಕ್ ಸಿನಿಮಾ ಇನ್ನು ಥಿಯೇಟರ್‌ಗೆ ಬಂದಿಲ್ಲ. ಟೀಸರ್ ಬಿಟ್ಟ ಮಾತ್ರಕ್ಕೆ ಸಿನಿಮಾ ಆಗಲ್ಲ. ಗಮನ ಸೆಳೆಯಲು ಬಿಟ್ಟಿದ್ದಾರೆ. ನೀವು ಪ್ಯಾಂಟ್ ಶರ್ಟ್ ಹಾಕ್ಕೊಂಡಿದ್ದೀರಾ, ಬೇರೆಯವರು ಬೇರೆ ರೀತಿಯ ಬಟ್ಟೆ ಹಾಕ್ತಾರೆ. ಎಲ್ಲರಿಗೂ ಎಲ್ಲಾ ತರಹದ ಸಿನಿಮಾ ಕೊಡ್ಬೇಕಲ್ಲ. ನೀವು ತಿನ್ನವುದನ್ನು ನಾನು ತಿನ್ನಲ್ಲ. ಇವತ್ತಿನ ಟ್ರೆಂಡ್‌ಗೋಸ್ಕರ ಮಾಡಿರೋದು. ಯಶ್ ಅವರ ಹಿಂದಿನ ಯಾವ ಸಿನಿಮಾದಲ್ಲಿ ಅಶ್ಲೀಲತೆ ಇತ್ತು" ಎಂದು ಮರುಪ್ರಶ್ನೆ ಹಾಕಿದ್ದಾರೆ.
ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದೀರಾ? ನೀವು ಚಿತ್ರಮಂದಿರಕ್ಕೆ ಹೋಗಿ ಎದ್ದು ಬರುವಂತೆ ಯಶ್ ಸಿನಿಮಾ ಮಾಡಿದ್ದಾರಾ? ಟೀಸರ್ ಮಾತ್ರವೇ ಸಿನಿಮಾ ಅಲ್ಲ. ಅದು ಇನ್ವಿಟೇಷನ್ ಮಾತ್ರ, ಊಟ ಅಲ್ಲ.. ತಾಳಿ ಕಟ್ಟಿದ್ಮೇಲೆ ಮದುವೆ.. ನಿಮ್ಮ ಸಿನಿಮಾನಾ ಫಾರಿನ್ ಅವ್ರು ನೋಡ್ತಾರಾ? ಫಾರಿನ್ ಅವ್ರು ನೋಡ್ಬೇಕು ಅಂದಾಗ ಎಲ್ಲಾ ಅಂದ್ರೆ ಎಲ್ಲಾ ತರಹದ ಸಿನಿಮಾ ಮಾಡ್ಬೇಕು.. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಹೋಗಲ್ಲ, ಎಲ್ಲಾ ಕಡೆಯಿಂದ ಥಿಯೇಟರ್ ತಂದ್ಕೊಳ್ಳಿ ಅಂತ ಅವ್ರು ಹೇಳಿದ್ದು" ಎಂದು ವಿವರಿಸಿದ್ದಾರೆ.
ದೊಡ್ಡ ಸಿನಿಮಾಗಳ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಕೂಡ ಪುಷ್ಪಾ ಅರುಣ್‌ಕುಮಾರ್ ಮಾತನಾಡಿದ್ದಾರೆ. ಕನ್ನಡದಲ್ಲಿ ದೊಡ್ಡ ಸಿನಿಮಾ ಬರ್ತಿದೆ ಎಂದು ಹೆಮ್ಮೆ ಪಡಬೇಕಾ? ಲೇಟ್ ಆಗ್ತಿದೆ ಎಂದು ಬೇಸರ ಪಟ್ಟುಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ, ಹುಮಾ ಖುರೇಶಿ, ರುಕ್ಮಿಣಿ ವಸಂತ್ ಹಾಗೂ ಕಿಯಾರಾ ಅದ್ವಾನಿ ಸೇರಿ ದೊಡ್ಡ ತಾರಾಗಣವಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೂಡ ಗೋವಾದಲ್ಲಿ ಕೆಲ ವರ್ಷಗಳ ಕಾಲ ಪೋರ್ಚುಗೀಸರು ನೆಲೆಸಿದ್ದರು. ಆ ಕಾಲಘಟ್ಟದಲ್ಲಿ ಅಲ್ಲಿ ನಡೆದ ಕಾಲ್ಪನಿಕ ಗ್ಯಾಂಗ್‌ಸ್ಟರ್ ಕಥೆ ಚಿತ್ರದಲ್ಲಿದೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ತಂದೆ- ಮಗನಾಗಿ ಯಶ್ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರಬೇಕು ಎನ್ನುವುದು ಯಶ್ ಕನಸು. ಹಾಗಾಗಿ ರಿಲೀಸ್ ಕೊಂಚ ತಡವಾಗ್ತಿದೆ.


Click it and Unblock the Notifications