"ಕಾರ್ತಿಕ್ ನಮ್ಮ ಚಿತ್ರಕ್ಕೆ ಥಿಯೇಟರ್ ಕೊಡದೇ ಸಮಸ್ಯೆ ಮಾಡಿದ್ದ"; ಪುಷ್ಪಾ ಆಕ್ರೋಶ
ತಮ್ಮ ನೇರಾನೇರ ಮಾತುಗಳಿಂದ ಯಶ್ ತಾಯಿ ಪುಷ್ಪಾ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಅವರು ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ 'ಕೊತ್ತಲವಾಡಿ' ಸಿನಿಮಾ ಗೆಲ್ಲಲಿಲ್ಲ. ಆದರೆ ಒಳ್ಳೆ ಸಿನಿಮಾ ಮಾಡುವ ಉತ್ಸಾಹ ಕಮ್ಮಿ ಆಗಿಲ್ಲ. ಮತ್ತೆ ಸಿನಿಮಾ ಮಾಡಿ ಗೆದ್ದು ತೋರಿಸ್ತೀನಿ ಎನ್ನುತ್ತಿದ್ದಾರೆ.
ಆಗಸ್ಟ್ 1ರಂದು 'ಕೊತ್ತಲವಾಡಿ' ಸಿನಿಮಾ ತೆರೆಗೆ ಬಂದಿತ್ತು. ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ನಟನೆಯ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಬೇರೆ ಸಿನಿಮಾಗಳ ಆರ್ಭಟದ ನಡುವೆ ಈ ಸಿನಿಮಾ ಬಂದಿದ್ದು ಕೂಡ ಸೋಲಿಗೆ ಕಾರಣ ಎನ್ನಲಾಗ್ತಿದೆ. 'ಎಕ್ಕ', 'ಸು ಫ್ರಮ್ ಸೋ', 'ಮಹಾವತಾರ್ ನರಸಿಂಹ' ಹಾಗೂ ಪರಭಾಷೆಯ ದೊಡ್ಡ ಚಿತ್ರಗಳ ನಡುವೆ 'ಕೊತ್ತಲವಾಡಿ' ಬಂದು ಹಿನ್ನಡೆ ಅನುಭವಿಸುವಂತಾಗಿತ್ತು. ನಾನು ಒಳ್ಳೆ ಸಿನಿಮಾ ಮಾಡಿದ್ದೀನಿ, ನಮ್ಮ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಕೂಡ ಆಯಿತು ಎಂದು ನಿರ್ಮಾಪಕಿ ಪುಷ್ಪಾ ಬೇಸರ ವ್ಯಕ್ತಪಡಿಸಿದ್ದಾರೆ.

ಕಡ್ಡಿ ತುಂಡಾಗುವಂತೆ ನಿರ್ಮಾಪಕಿ ಪುಷ್ಪಾ ಮಾತನಾಡುತ್ತಾರೆ. ಯಾರಿಗೂ ಹೆದರದೆ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನ ಅವರದ್ದು. ಎಲ್ಲಾ ಸಂದರ್ಶನಗಳಲ್ಲಿ ಇದೇ ರೀತಿ ಮಾತನಾಡಿದ್ದಾರೆ. ಅವರ ಮಾತಿನ ಶೈಲಿ ಬಗ್ಗೆ ಟ್ರೋಲ್ ಮಾಡುವವರು ಇದ್ದಾರೆ. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ನಾನು ಒಂದು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡು ಹೋಗುವುದಕ್ಕೆ ಬಂದಿಲ್ಲ, ಸೋತರೂ ಗೆದ್ದರೂ ಒಳ್ಳೆ ಸಿನಿಮಾಗಳನ್ನು ಮಾಡಬೇಕು ಎನ್ನುವುದು ನನ್ನ ಆಸೆ. ಅದನ್ನು ನಾನು ಮಾಡಿ ತೋರಿಸುತ್ತೇನೆ. ಚಿತ್ರರಂಗದಲ್ಲಿರುವ ಸಮಸ್ಯೆಗಳ ಬಗ್ಗೆಯೂ ನಾನು ದನಿ ಎತ್ತುತ್ತೇನೆ ಎನ್ನುತ್ತಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಸೋಲು ಗೆಲುವಿನ ಬಗ್ಗೆ ಅಶ್ವವೇಗ ನ್ಯೂಸ್ ಸಂದರ್ಶನದಲ್ಲಿ ನಿರ್ಮಾಪಕಿ ಪುಷ್ಪಾ ಮಾತನಾಡಿದ್ದಾರೆ. "ನನಗೆ ನನ್ನ ಸಿನಿಮಾ ರೀಚ್ ಆಗಿದ್ದು ಬಹಳ ಖುಷಿಯಾಯಿತು. ಥಿಯೇಟರ್ ಸಮಸ್ಯೆ ನಡುವೆ ಸಾಕಷ್ಟು ಸಮಸ್ಯೆ ಎದುರಾಯಿತು. ಅದನ್ನೆಲ್ಲಾ ಮೀರಿ ನಮ್ಮ ಸಿನಿಮಾ ಒಳ್ಳೆ ರೀತಿಯಲ್ಲಿ ಪ್ರದರ್ಶನ ಆಯ್ತು. ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಕ್ತಿಲ್ಲ, ಎನ್ನುವುದಕ್ಕಿಂತ ಕೊಡ್ತಿಲ್ಲ ಎನ್ನಬಹುದು. ನನಗೆ ಈ ಸಮಸ್ಯೆ ಎದುರಾಯಿತು. 2 ತಿಂಗಳ ಹಿಂದೆ ಬುಕ್ ಮಾಡಿದ್ದೆವು. ಅವ್ರು ಹೇಳಿದಂತೆ ಸಿನಿಮಾ ಬಿಡುಗಡೆ ಮಾಡಿದ್ದೆವು. ಆದರೂ ತೊಂದರೆ ಆಯಿತು" ಎಂದಿದ್ದಾರೆ.
"ಕಾರ್ತಿಕ್ ಇದ್ದಾನಲ್ಲ, ಅವ್ರ ಬ್ಯಾನರ್‌ಗೆ ಕೊಟ್ಟಿದ್ದಕ್ಕೆ ನನಗೆ ಬಹಳ ಬೇಸರವಾಯಿತು. ಥಿಯೇಟರ್ ಸಮಸ್ಯೆಯಿಂದ ನಮ್ಮ ಚಿತ್ರಕ್ಕೆ ಹಿನ್ನಡೆಯಾಯಿತು. ಪ್ರೇಕ್ಷಕರು ನಮ್ಮ ಸಿನಿಮಾ ಎಲ್ಲಿದೆ ಎಂದು ಬಂದು ನೋಡಲು ಗೊಂದಲ ಮಾಡಿಬಿಟ್ರು. ಕೆಲವೆಡೆ ಥಿಯೇಟರ್ ಕೊಡಲಿಲ್ಲ ನಮಗೆ. ಇದೆಲ್ಲಾ ಮಾಡಿದ್ದು ಕಾರ್ತಿಕ್. ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದರೆ ನಮಗಂತೂ ಬಹಳ ಸಮಸ್ಯೆ ಆಯಿತು. ಉದ್ದೇಶ ಪೂರ್ವಕವಾಗಿ ನಮ್ಮ ಸಿನಿಮಾ ತೆಗೆದ್ರು. ನಮಗೆ ಹೀಗೆ ಮಾಡಿದ್ರೆ, ಸಾಮಾನ್ಯ ಜನರ ಕಥೆಯೇನು? ನಾನು ಇದರ ವಿರುದ್ಧ ನಿಲ್ಲುತ್ತೇನೆ" ಎಂದು ಪುಷ್ಪಾ ಅರುಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇರೆ ಸಿನಿಮಾಗಳಿಂದ 'ಕೊತ್ತಲವಾಡಿ' ಚಿತ್ರಕ್ಕೆ ಸಮಸ್ಯೆ ಆಯ್ತಾ? ಎನ್ನುವ ಪ್ರಶ್ನೆಗೆ "ಬೇರೆ ಸಿನಿಮಾಗಳಿಂದ ನಮ್ಮ ಚಿತ್ರಕ್ಕೆ ಹೊಡೆತ ಬಿದ್ದಿರುವುದು ನಿಜ. ಆದರೆ ಸಿನಿಮಾಗಳನ್ನು ಮಾತ್ರ ಆರೋಪಿಸಲ್ಲ. ಕೆಲವ್ರು ತೊಂದ್ರೆ ಕೊಟ್ರು. ಅವ್ರ ಬಗ್ಗೆ ನನ್ನ ಆರೋಪ. ನಾವಿಬ್ಬರು ಬಂದಿರುವುದು ಸಿನಿಮಾ ಮಾಡಲು. ಆದರೆ ಅವ್ರ ಸಿನಿಮಾ ಬಿಟ್ಟು ಮುಂದೆ ನನ್ನ ಸಿನಿಮಾ ಬಂದಾಗ ಥಿಯೇಟರ್ ಬಿಟ್ಟುಕೊಡದೇ ನಾನು ತೋರಿಸ್ತೀನಿ. ಥಿಯೇಟರ್‌ನಲ್ಲಿ ಅವ್ರ ಸಿನಿಮಾ ಇಟ್ಕೊಂಡು ನಮಗೆ ಥಿಯೇಟರ್ ಕೊಡದೇ ತೊಂದರೆ ಕೊಟ್ರು. ಯಾರು ಅಲ್ಲ, ಕಾರ್ತಿಕ್ ಅವನ ಹೆಸರು. ಅವನೇ ಉದ್ದೇಶಪೂರ್ವಕವಾಗಿ ತೊಂದರೆ ಮಾಡಿದ್ದು. ಯಾರೋ ಹಿಂದೆ ನಿಂತು ಮಾಡಿಸಿದ್ದಾರೆ. ಅದನ್ನು ಹೇಳ್ತೀನಿ. ನನ್ನ ಯಾರು ಕೆಣಕಬಾರದು. ಕೆಣಕಿದಂತೆ ಇನ್ನು ಗಟ್ಟಿಯಾಗಿ ನಿಲ್ತೀನಿ" ಎಂದಿದ್ದಾರೆ.


Click it and Unblock the Notifications











