ಅಬ್ಬಬ್ಬಾ.. ಯಶ್ ಮುಂದಿನ ಸಿನಿಮಾ ಬಜೆಟ್ 2000 ಕೋಟಿ ರೂಪಾಯಿ!
'ಕೆಜಿಎಫ್' ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಈಗ ಏನಿದ್ರೂ ದೊಡ್ಡ ಸಿನಿಮಾಗಳು ಮಾತ್ರ. 'ಕೆಜಿಎಫ್-2' ಬಳಿಕ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಯಶ್ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳಿಗೆ ಸಹ ನಿರ್ಮಾಪಕರೂ ಆಗಿದ್ದಾರೆ.
ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟಾಕ್ಕಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈ ಜೋಡಿಸಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ 'ರಾಮಾಯಣ' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎರಡೂ ಕೂಡ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾಗಳು. ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ವಿದೇಶದ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದೆ.

'ರಾಮಾಯಣ' ಚಿತ್ರವನ್ನು ಐಮ್ಯಾಕ್ಸ್ ಫಾರ್ಮೆಟ್‌ನಲ್ಲಿ ತೆರೆಗೆ ತರ್ತಿದ್ದು ಚಿತ್ರದ ಬಜೆಟ್ 1500 ಕೋಟಿ ರೂ. ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದು ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದಾಗಿದೆ.
'ಕೆಜಿಎಫ್'-1 ಬೆನ್ನಲ್ಲೇ ಯಶ್ ದೊಡ್ಡದಾಗಿ ಯೋಚಿಸಲು ಶುರು ಮಾಡಿದರು. ಅದಾಗಲೇ ಶುರು ಮಾಡಿದ್ದ 'ಮೈ ನೇಮ್ ಈಸ್ ಕಿರಾತಕ' ಚಿತ್ರ ಕೈಬಿಟ್ಟರು. 'ಟಾಕ್ಸಿಕ್' ಸಿನಿಮಾ ಘೋಷಿಸಲು 2 ವರ್ಷ ತೆಗೆದುಕೊಂಡಿದ್ದರು. ಬಹಳ ತಡವಾಗಿ ಸಿನಿಮಾ ತೆರೆಗೆ ಬರ್ತಿದೆ. ಎಷ್ಟೇ ತಡವಾದರೂ ಅದ್ಭುತ ಸಿನಿಮಾ ಕೊಡುತ್ತೇವೆ ಎನ್ನುತ್ತಿದ್ದಾರೆ. ಇನ್ನೊಂದು ಶೆಡ್ಯೂಲ್ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಸಿನಿಮಾ ಬಜೆಟ್ ಕೂಡ 300 ಕೋಟಿ ರೂ. ಹೆಚ್ಚು ಎನ್ನಲಾಗ್ತಿದೆ.
'ರಾಮಾಯಣ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರ್ತಿದ್ದಾರೆ. ಒಂದು ಭಾಗದ ಚಿತ್ರೀಕರಣ ಮುಗಿದಿದೆ. ಮುಂದಿನ ವರ್ಷ ದೀಪಾವಳಿಗೆ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಈ ಎರಡೂ ಸಿನಿಮಾಗಳ ಬಳಿಕ ಯಶ್ ಮಾರ್ಕೆಟ್ ಮತ್ತಷ್ಟು ದೊಡ್ಡದಾಗಲಿದೆ. 'ಕೆಜಿಎಫ್'-1 ಬಳಿಕ ಚಿಕ್ಕ ಚಿತ್ರಗಳಿಗೆ ನೋ ಎಂದಿದ್ದ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಬಳಿಕ ಇನ್ಯಾವ ಸಿನಿಮಾ ಮಾಡ್ತಾರೋ ಗೊತ್ತಿಲ್ಲ. ಆದರೆ ಮುಂದೆ ಯಶ್ ಸಿನಿಮಾ ಮಾಡೋಕೆ 2000 ಕೋಟಿ ರೂ. ಬಜೆಟ್ ಬೇಕಾಗಬಹುದು ಎಂದು ಸ್ವತಃ ತಾಯಿ ಪುಷ್ಪಾ ಹೇಳಿದ್ದಾರೆ.

ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಅವರ ತಾಯಿ ಪುಷ್ಪಾ 'ಕೊತ್ತಲವಾಡಿ' ಎಂಬ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 1ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಮಾನ್‌ಸ್ಟರ್ ಮೈಂಡ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಯಶ್ ಹೊಂದಿದ್ದರೂ ತಮ್ಮದೇ ಸಂಸ್ಥೆಯನ್ನು ಪುಷ್ಪಾ ಹುಟ್ಟು ಹಾಕಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಬ್ಯಾನರ್ ಚಿತ್ರದಲ್ಲಿ ಯಶ್ ನಟಿಸುತ್ತಾರಾ? ಎನ್ನುವ ಪ್ರಶ್ನೆಗೆ ಟಿವಿ9 ಸಂದರ್ಶನದಲ್ಲಿ ಪುಷ್ಪಾ ಇಂಟ್ರೆಸ್ಟಿಂಗ್ ಉತ್ತರ ಕೊಟ್ಟಿದ್ದಾರೆ.
"ಯಾರಾದರೂ 2000 ಕೋಟಿ ರೂ. ಸಾಲ ಕೊಟ್ಟರೆ ಯಶ್ ಸಿನಿಮಾ ಮಾಡಬಹುದು. ಅವನ ಸಿನಿಮಾ ಮಾಡಲು ಅಷ್ಟು ಬಜೆಟ್ ಬೇಕು. ಹೂಡಿಕೆ ಮಾಡುವವರು ಇದ್ದರೆ ಖಂಡಿತ ಸಿನಿಮಾ ಮಾಡ್ತೀನಿ. ಹೇಗಾದರೂ ಮಾಡಿ ಅವನ ಡೇಟ್ಸ್ ತಗೋತ್ತೀನಿ" ಎಂದು ಪುಷ್ಪಾ ಅರುಣ್‌ಕುಮಾರ್ ಹೇಳಿರುವುದು ವೈರಲ್ ಆಗುತ್ತಿದೆ.
ಮೊದಲಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಏನಾದರೂ ಮಾಡಬೇಕು ಎನ್ನುವ ಆಸೆ ಇತ್ತು. ಕನ್ನಡ ಸಿನಿಮಾಗಳ ಬಗ್ಗೆ ಕೆಲವರು ಟೀಕೆ ಮಾಡುವುದು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ನಾವು ಯಾಕೆ ಸಿನಿಮಾ ಮಾಡಬಾರದು. ಹೊಸ ಪ್ರತಿಭೆಗಳನ್ನು ಬೆಳೆಸಬಾರದು. ಚಿತ್ರರಂಗಕ್ಕೆ ಕೊಡುಗೆ ನೀಡಬಾರದು ಎನ್ನುವ ಆಲೋಚನೆಯಿಂದ ಪಿಎ ಪ್ರೊಡಕ್ಷನ್ಸ್ ಸಂಸ್ಥೆ ಹುಟ್ಟುಹಾಕಿದ್ದಾಗಿ ಯಶ್ ತಾಯಿ ಹೇಳಿದ್ದಾರೆ.


Click it and Unblock the Notifications











