'ಕೊತ್ತಲವಾಡಿ' ಚಿತ್ರದಲ್ಲಿದೆ ಯಶ್ ಬಳಸುತ್ತಿದ್ದ ಬೈಕ್; ಏನದರ ವಿಶೇಷತೆ?
ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ಬಂದು ಸದ್ದು ಮಾಡ್ತಿದೆ. ಚಿತ್ರತಂಡ ಕೂಡ ಸಿನಿಮಾ ಪ್ರಮೋಷನ್ ಶುರುವಾಗಿದೆ. ಪಕ್ಕಾ ಹಳ್ಳಿ ಸೊಗಡಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು.
ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೊತ್ತಲವಾಡಿ' ಚಿತ್ರ ನಿರ್ಮಾಣವಾಗಿದೆ. ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ಚಿತ್ರದ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ. ಶ್ರೀರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಆದರೆ ಚಿತ್ರದ ಪ್ರಚಾರದಿಂದ ಯಶ್ ಹಾಗೂ ರಾಧಿಕಾ ಪಂಡಿತ್ ದೂರವೇ ಉಳಿದಿದ್ದಾರೆ.

ಮಾನ್‌ಸ್ಟರ್ ಮೈಂಡ್ಸ್ ಬ್ಯಾನರ್ ಅಡಿಯಲ್ಲಿ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಒಂದು ಚಿತ್ರ ನಿರ್ಮಾಣ ಸಂಸ್ಥೆ ಇದ್ದರೂ ಪ್ರತ್ಯೇಕವಾಗಿ ಅವರ ತಾಯಿ ಪುಷ್ಪ ಅರುಣ್‌ಕುಮಾರ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳನ್ನು ಬೆಳೆಸಲು ಮುಂದಾಗಿದ್ದಾರೆ. ಯಶ್ ಅವರನ್ನು ಪ್ರಚಾರಕ್ಕೆ ಕರೆಯುವುದಿಲ್ಲ. ಇಷ್ಟ ಇದ್ದರೆ ಬರ್ತಾರೆ. ಜನ ಸಿನಿಮಾ ನೋಡುವುದು ಮುಖ್ಯ ಎಂದು ಪುಷ್ಪಾ ಹೇಳುತ್ತಾ ಬರ್ತಿದ್ದಾರೆ.
ಯಶ್ ನೇರವಾಗಿ 'ಕೊತ್ತಲವಾಡಿ' ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಆದರೆ ಯಶ್ ಬಳಸುತ್ತಿದ್ದ ಹಳೇ ಬೈಕ್ ಅನ್ನು ಚಿತ್ರದಲ್ಲಿ ಬಳಸಿಕೊಂಡಿದೆ ಚಿತ್ರತಂಡ. ಈ ವಿಚಾರವನ್ನು 'ಕನ್ನಡ ಪಿಕ್ಚರ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚಿತ್ರತಂಡ ಹೇಳಿದೆ. ಆ ವೀಡಿಯೋ ಈಗ ವೈರಲ್ ಆಗ್ತಿದೆ. ಆ ಬೈಕ್ ಬಗ್ಗೆ ಸ್ವತಃ ಯಶ್ ತಾಯಿ ಪುಷ್ಪಾ ಅವರು ಮಾತನಾಡಿದ್ದಾರೆ.
"ನೆನಪಿಗಾಗಿ ಇರಲಿ ಎನ್ನುವ ಕಾರಣಕ್ಕೆ ಯಶ್ ಹಳೇ ಬೈಕ್ ಅನ್ನು ಚಿತ್ರದಲ್ಲಿ ಬಳಸಿದ್ದೇವೆ. ಬೇರೆ ಯಾವುದಾದರೂ ಹಳೇ ಬೈಕ್ ಬಳಸಬಹುದಿತ್ತು. ನಮಗೂ ಮೆಮೊರಿ ಇರುತ್ತೆ. ಯಶ್ ಮೊದಲಿಗೆ 19 ಸಾವಿರ ರೂಪಾಯಿ ದುಡಿದು ತಗೊಂಡಿದ್ದ ಬೈಕ್ ಅದು. ಒಮ್ಮೆ ಹಾಸನದ ತೋಟಕ್ಕೆ ಬಂದಾಗ ಏನ್ ಡ್ಯಾಡಿ ನನ್ನ ಬೈಕ್ ಹಿಂಗೆ ನಿಲ್ಸಿದ್ದೀರಾ ಅಂದ. ಸರಿ ಎಂದು ಅದನ್ನು ನಮ್ಮ ಹುಡುಗರು ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸಿಕೊಂಡು ಬಂದಿದ್ದರು. ಚಿತ್ರತಂಡದವರು ಕೇಳುವ ಸಮಯಕ್ಕೆ ಬೈಕ್ ರಿಪೇರಿ ಆಗಿತ್ತು. ಅದನ್ನೇ ಬಳಸಿಕೊಂಡರು" ಎಂದು ಪುಷ್ಪಾ ಹೇಳಿದ್ದಾರೆ.

ನಟ ಪೃಥ್ವಿ ಅಂಬರ್ ಮಾತನಾಡಿ "ಆ ಬೈಕ್‌ನಲ್ಲಿ ಒಂದು ಆಕ್ಷನ್ ಸೀಕ್ವೆನ್ಸ್ ಮಾಡಿದ್ದೀವಿ. ಅದು ಬಹಳ ಇಷ್ಟ ನನಗೆ. ಚಿತ್ರೀಕರಣ ಎಲ್ಲಾ ಮುಗಿದ ಮೇಲೆ ಕೊನೆಗೆ ಆ ಬೈಕ್ ಜೊತೆ ನಾನು ಸೆಲ್ಫಿ ತಗೊಂಡೆ ನೆನಪಿಗಾಗಿ" ಎಂದಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ ಚಿತ್ರಕ್ಕಿದೆ. ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ, ಅವಿನಾಶ್, ಚೇತನ್ ಗಂಧರ್ವ, ಮಾನ್ಸಿ ಸುಧೀರ್ ತಾರಾಗಣದಲ್ಲಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಬಿಡುಗಡೆಗೂ ಮುನ್ನ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಚಿತ್ರಕ್ಕೆ ತಯಾರಿ ನಡೀತಿದೆ. ನಟ ಶರಣ್ ಆ ಚಿತ್ರದಲ್ಲಿ ಹೀರೊ ಆಗಿ ನಟಿಸಲಿದ್ದಾರೆ. ಶೀಘ್ರದಲ್ಲೇ 'ಕೊತ್ತಲವಾಡಿ' ಸಿನಿಮಾ ಟ್ರೈಲರ್ ಸಹ ಬಿಡುಗಡೆ ಆಗಲಿದೆ. ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











