'ಎಐ' ಅಂದವರೆಲ್ಲಾ ಇಲ್ನೋಡ್ರೋ; 'ಟಾಕ್ಸಿಕ್' ಯಶ್ 'ಟಿಕೆಟ್' ಅವತಾರ ತಾಳಿದ್ದೇಗೆ?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಬೇರೆ ಬೇರೆ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ತಂದೆ, ಮಗನಾಗಿ ಯಶ್ ನಟಿಸುತ್ತಿದ್ದಾರಾ? ಎನ್ನುವ ಕುತೂಹಲ ಮೂಡಿದೆ. ಇತ್ತೀಚೆಗೆ ಬಂದ ಟೀಸರ್‌ನಲ್ಲಿ ಅಭಿಮಾನಿಗಳಿಗೆ ಯಶ್ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದರು.
ಕಳೆದ ಏಳೆಂಟು ವರ್ಷಗಳಿಂದ ಯಶ್ ಉದ್ದನೆಯ ಗಡ್ಡ ಹಾಗೂ ಉದ್ದನೆಯ ಕೂದಲು ಬಿಟ್ಟು ಖಡಕ್ ಲುಕ್ ಮೆಂಟೇನ್ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಕೂದಲಿಗೆ ಕತ್ತರಿ ಆಡಿಸಿದ್ರು, ಗಡ್ಡಕ್ಕೆ ಕತ್ತರಿ ಹಾಕುವ ಸಾಹಸ ಮಾಡಿರಲಿಲ್ಲ. 'KGF' ಸರಣಿಯ ರಾಕಿಭಾಯ್ ಖದರ್ ಮುಂದುವರೆಸಿದ್ದರು. ಅಭಿಮಾನಿಗಳು ಅದನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದರು. ಆದರೂ ಕೆಲವರು ಯಶ್ ಈ ಲುಕ್ ಬಿಟ್ರೆ ಬೇರೆ ಮಾಡಲ್ವಾ? ಕ್ಲೀನ್ ಶೆವ್‌ನಲ್ಲಿ ನಟಿಸಲ್ವಾ? ಭಯನಾ? ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದರು. 'ಟಾಕ್ಸಿಕ್' ಚಿತ್ರದ ಹಿಂದಿನ ಟೀಸರ್‌ಗಳಲ್ಲಿ ಕೂಡ ರಾಯ ಆಗಿ ಹೆಚ್ಚು ಕಮ್ಮಿ ಇದೇ ಲುಕ್ ರಾಕಿಂಗ್ ಸ್ಟಾರ್ ಕಂಟಿನ್ಯೂ ಮಾಡಿದ್ದರು.

ಅಂತೂ ಇಂತೂ ಯಶ್ ಗಡ್ಡಕ್ಕೆ ಕತ್ತರಿ ಹಾಕಿ 'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದಾರೆ. ರಾಯ ಆಗಿ ಅದೇ ಖಡಕ್ ಅವತಾರ ಮುಂದುವರೆಸಿದ್ದರೂ ಟಿಕೆಟ್ ಎಂಬ ಮತ್ತೊಂದು ಪಾತ್ರಕ್ಕೆ ಸಂಪೂರ್ಣವಾಗಿ ಲುಕ್ ಬದಲಿಸಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ನಿಜಕ್ಕೂ ನಿರೀಕ್ಷೆ ಮಾಡಿರಲಿಲ್ಲ. ರಾಕಿಭಾಯ್ ಗೆಟಪ್ ಬಿಟ್ಟು ಯಶ್ ಹೊರ ಬರಲ್ಲ ಎಂದುಕೊಂಡಿದ್ದವರಿಗೂ ಶಾಕ್ ಕೊಟ್ಟಿದ್ದಾರೆ. ಟೀಸರ್ ಕೊನೆಯಲ್ಲಿ ಸರಿಯಾಗಿ ಮುಖ ತೋರಿಸಿದ ಟಿಕೆಟ್ ಎಂಬ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ. ಮೊದಲ ನೋಟದಲ್ಲಿ ಬೇರೆ ಯಾರೋ ಕಲಾವಿದರನ್ನು ಪರಿಚಯಿಸಿದ್ದಾರೆ. ಆತನೇ ವಿಲನ್ ಇರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಕೊನೆ ಫ್ರೇಮ್‌ನಲ್ಲಿ ಅವನು ಪಕ್ಕಕ್ಕೆ ತಿರುಗಿ ನಿಲುವ ಭಂಗಿ ಅಚ್ಚರಿ ಮೂಡಿಸಿತ್ತು. ಅರೇ ಇದು ಯಶ್ ಅವರೇನಾ? ಗಡ್ಡಕ್ಕೆ ಕತ್ತರಿ ಹಾಕಿಬಿಟ್ರಾ? ಏನ್ ಗುರೂ ಇದು ಸರ್‌ಪ್ರೈಸ್ ಎಂದು ಥ್ರಿಲ್ ಆಗಿದ್ದರು.
ಈ ಸೀಕ್ರೆಟ್ ರಿವೀಲ್ ಆಗಬಾರದು ಎನ್ನುವ ಕಾರಣಕ್ಕೆ ಯಶ್ ಕೆಲವೊಮ್ಮೆ ಮುಖಕ್ಕೆ ತಲೆಗೆ ಬಟ್ಟೆ ಸುತ್ತಿಕೊಂಡು ಓಡಾಡಿದ್ದರು. ಅದನ್ನು ನೋಡಿ ಯಶ್ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ ಎಂದು ಕೆಲವರು ಗೆಸ್ ಮಾಡಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಟೀಸರ್ ರಿಲೀಸ್ ಬಳಿಕ ಎಲ್ಲಾ ಗೊಂದಲಕ್ಕೆ ತೆರೆಬಿದ್ದಿದೆ. ಆ ಪಾತ್ರ ಹೆಸರು ಟಿಕೆಟ್ ಎನ್ನುವುದನ್ನು ಕೂಡ ಚಿತ್ರತಂಡ ಘೋಷಿಸಿದೆ. ಆದರೆ ಈ ಲುಕ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಎಐ ಬಳಸಿ ಈ ರೀತಿ ಮಾಡಿರಬಹುದು. ಡಿ ಏಜಿಂಗ್ ತಂತ್ರಜ್ಞಾನ ಬಳಸಿ ಯಶ್ ಅವರನ್ನು ಇಷ್ಟು ಯಂಗ್ ತೋರಿಸಿರಬಹುದು ಎಂದು ಕಾಮೆಂಟ್ ಮಾಡಿದವರು ಇದ್ದಾರೆ. ಈಗ ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.
ಟಿಕೆಟ್ ಪಾತ್ರಕ್ಕಾಗಿ ಯಶ್ ಮೇಕ್‌ಓವರ್ ಹೇಗಿತ್ತು ಎನ್ನುವುದು ರಿವೀಲ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಗಡ್ಡಕ್ಕೆ ಕತ್ತರಿ ಹಾಕಿ ಸ್ಟೈಲಿಶ್ ಲುಕ್ ಕೊಟ್ಟ ಹೇರ್ ಸ್ಟೈಲಿಶ್ಟ್ ಅಲೆಕ್ಸ್ ವಿಜಯಕಾಂತ್ ವೀಡಿಯೋ ಹಂಚಿಕೊಂಡಿದ್ದಾರೆ. ಬಹುತೇಕ ಯಶ್ ಗಡ್ಡ ಟ್ರಿಮ್ ಮಾಡಿ, ಕೂದಲಿಗೂ ಕತ್ತರಿ ಹಾಕಿ ಸಿಕ್ಕಾಪಟ್ಟೆ ಟ್ರಿಮ್ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಎಐ ಅಂದವರು ಈಗ ನೋಡ್ರಪ್ಪಾ ಎಂದು ಅಭಿಮಾನಿಗಳು ತಿರುಗೇಟು ಕೊಡುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇಂಗ್ಲೀಷ್ ಭಾಷೆಗೂ ಡಬ್ ಸಿನಿಮಾ ಬಿಡುಗಡೆ ಆಗಲಿದೆ. ಕಿಯಾರಾ ಅದ್ವಾನಿ, ನಯನತಾರ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











