'ಟಾಕ್ಸಿಕ್' ಚಿತ್ರಕ್ಕೆ ಒಬ್ಬರಲ್ಲ ಒಟ್ಟು ಐವರು ಸಂಗೀತ ನಿರ್ದೇಶಕರು; ಒಟ್ಟು ಎಷ್ಟು ಹಾಡುಗಳಿವೆ ಗೊತ್ತಾ?
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. 24 ಗಂಟೆಗಳಲ್ಲಿ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಎಲ್ಲಾ ವೇದಿಕೆಗಳಲ್ಲಿ ಸೇರಿ 197 ಮಿಲಿಯನ್ಸ್ ವೀವ್ಸ್ ಸಾಧಿಸಿ ಸಣ್ಣ ಝಲಕ್ ಸಂಚಲನ ಸೃಷ್ಟಿಸಿದೆ. ಇದೀಗ ಸಿನಿಮಾ ಆಡಿಯೋ ರೈಟ್ಸ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಜೀ ಮ್ಯೂಸಿಕ್ ಸಂಸ್ಥೆ 'ಟಾಕ್ಸಿಕ್' ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿದೆ. ದಾಖಲೆ ದರಕ್ಕೆ ಡೀಲ್ ಕುದುರಿಸಲಾಗಿದೆ. ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವುದು ಗೊತ್ತೇಯಿದೆ. ಆದರೆ ರವಿ ಜೊತೆಗೆ ಇನ್ನು 4 ಜನ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುವುದು ವಿಶೇಷ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡದಿಂದ ಮಾಹಿತಿ ಲಭ್ಯವಾಗಿದೆ. 'ಟಾಕ್ಸಿಕ್' ಚಿತ್ರಕ್ಕೆ ಯಾರು ಸಂಗೀತ ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಈಗ ಎಲ್ಲದ್ದಕ್ಕೂ ಬ್ರೇಕ್ ಬಿದ್ದಂತಾಗಿದೆ.

ರವಿ ಬಸ್ರೂರು ಅವರಿಗಿಂತ ಮುಂದೆ ಅನಿರುದ್ಧ್ ರವಿಚಂದರ್ ಸೇರಿ ಕೆಲ ಸಂಗೀತ ನಿರ್ದೇಶಕ ಹೆಸರು 'ಟಾಕ್ಸಿಕ್' ಚಿತ್ರಕ್ಕೆ ಕೇಳಿಬಂದಿತ್ತು. ಬ್ರಿಟನ್ ಮೂಲದ ಸಂಗೀತ ನಿರ್ದೇಶಕ ಜೆರೆಮಿ ಸ್ಟ್ಯಾಕ್ ಚಿತ್ರದ ಅನೌನ್ಸ್‌ಮೆಂಟ್ ಟೀಸರ್‌ಗೆ ಬಿಜಿಎಂ ಕೊಟ್ಟಿದ್ದರು. ಹಾಗಾಗಿ ಇಡೀ ಚಿತ್ರಕ್ಕೆ ಅವರೇ ಮ್ಯೂಸಿಕ್ ಮಾಡಬಹುದು ಎಂದು ಕೆಲವರೂ ಊಹಿಸಿದ್ದರು. ರಾಯ ಇಂಟ್ರಡಕ್ಷನ್ ಟೀಸರ್ ನೋಡಿದಾಗಿ ಎಲ್ಲಾ ಗೊಂದಲಕ್ಕೆ ತೆರೆ ಬಿದ್ದಿತ್ತು. ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುವುದು ಖಚಿತವಾಗಿತ್ತು. ಇದೀಗ ಮತ್ತೊಂದು ಟ್ವಿಸ್ಟ್ ಎದುರಾಗಿದೆ.
ರವಿ ಬಸ್ರೂರ್ ಜೊತೆಗೆ ವಿಶಾಲ್ ಮಿಶ್ರಾ, ತನಿಷ್ಕ್ ಬಾಗ್ಚಿ, ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಕೈ ಜೋಡಿಸಿದ್ದಾರೆ. ವಿಶಾಲ್ ಮಿಶ್ರಾ 4 ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ತನಿಷ್ಕ್ ಬಾಗ್ಚಿ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಸೇರಿ ಒಂದು ಟ್ರ್ಯಾಕ್ ಕಟ್ಟಿಕೊಟ್ಟಿದ್ದಾರೆ. ಬಿಜಿಎಂ ಜೊತೆಗೆ ಒಂದು ಹಾಡಿಗೆ ರವಿ ಬಸ್ರೂರು ಟ್ಯೂನ್ ಹಾಕಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ ಟಾಕ್ಸಿಕ್ ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಮತ್ತು ಗೀತು ಮೋಹನ್‌ದಾಸ್ ಬರೆದು ಗೀತು ಮೋಹನ್‌ದಾಸ್ ನಿರ್ದೇಶಿಸಿದ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ತಮ್ಮ ಅದ್ಭುತ ಬಿಜಿಎಂನಿಂದ ರವಿ ಬಸ್ರೂರು ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡ್ತಿದ್ದಾರೆ. 'KGF' ಸರಣಿ ಬಳಿಕ 'ಸಲಾರ್' ಚಿತ್ರದಲ್ಲೂ ಕುಂದಾಪುರದ ಪ್ರತಿಭೆ ಸಂಗೀತ ಸದ್ದು ಮಾಡಿತ್ತು. 'ಟಾಕ್ಸಿಕ್' ಚಿತ್ರಕ್ಕೆ ಅವರ ಆಯ್ಕೆ ಸರಿಯಾಗಿದೆ. ಆದರೆ ಇತ್ತೀಚೆಗೆ ಬಂದ ಟೀಸರ್ ಬಿಜಿಎಂ ಕೊಂಚ ನಿರಾಸೆ ಮೂಡಿಸಿದೆ. ಟ್ರೈಲರ್‌ನಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು. ಸಿನಿಮಾದಲ್ಲಿ ಬಿಜಿಎಂ ಖಡಕ್ ಆಗಿ ಇರಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅವರ ಟ್ಯೂನ್‌ಗಳಿಗೆ ಭಾರೀ ಡಿಮ್ಯಾಂಡ್ ಇದೆ. ತೆಲುಗಿನ 'ಕಲ್ಟ್' ಚಿತ್ರಕ್ಕೆ ರವಿ ಬಸ್ರೂರು ಟ್ಯೂನ್ ಹಾಕಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ರವಿ ಕೆಲಸ ಮೆಚ್ಚಿ ಚಿತ್ರದ ನಿರ್ದೇಶಕ, ನಟ ವಿಶ್ವಕ್ ಸೇನ್ 35 ಲಕ್ಷ ರೂ. ವಾಚ್ ಗಿಫ್ಟ್ ಮಾಡಿದ್ದಾರೆ.


Click it and Unblock the Notifications











