'ಟಾಕ್ಸಿಕ್' ಸಂಗೀತ ನಿರ್ದೇಶಕ ಯಾರು? ಅಧಿಕೃತ ಮಾಹಿತಿ ನೀಡಿದ ರಾಕಿಂಗ್ ಸ್ಟಾರ್
ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಇನ್ನು 100 ದಿನ ಬಾಕಿಯಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಮತ್ತೊಮ್ಮೆ ರಿಲೀಸ್ ಡೇಟ್ ಕನ್ಫರ್ಮ್ ಮಾಡಿ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ತಂತ್ರಜ್ಞರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಲಿದೆ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರವನ್ನು ಯಶ್ ತೆರೆಗೆ ತರುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ಕಿಯಾರಾ ಅದ್ವಾನಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

'ಟಾಕ್ಸಿಕ್' ಸಿನಿಮಾ ಶುರುವಾದ ದಿನದಿಂದ ಹೆಚ್ಚು ಅಪ್‌ಡೇಟ್ ಸಿಗಲಿಲ್ಲ. ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಅಧಿಕೃತ ಮಾಹಿತಿ ಈವರೆಗೆ ಸಿಕ್ಕಿರಲಿಲ್ಲ. ಹೊಸ ಪೋಸ್ಟರ್‌ನಲ್ಲಿ ತಂತ್ರಜ್ಞರ ಖಚಿತ ಸುದ್ದಿ ಸಿಕ್ಕಿದೆ. ಕೆಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ಸಂಗೀತ ನಿರ್ದೇಶಕ ಯಾರು ಎನ್ನುವುದು ಘೋಷಣೆಯಾಗಿದೆ.
ಚರಣ್ ರಾಜ್, ರವಿ ಬಸ್ರೂರು ಹಾಗೂ ಅನಿರುದ್ಧ್ ರವಿಚಂದರ್ ಸೇರಿ 'ಟಾಕ್ಸಿಕ್' ಚಿತ್ರದ ಸಂಗೀತ ನಿರ್ದೇಶನಕ್ಕೆ ಬೇರೆ ಬೇರೆ ಹೆಸರುಗಳು ಕೇಳಿಬಂದಿತ್ತು. ಅನಿರುದ್ಧ್ ಸಾಂಗ್ಸ್ ಕಂಪೋಸ್ ಮಾಡ್ತಾರೆ, ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡುತ್ತಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಅದೆಲ್ಲ ಸುಳ್ಳಾಗಿಲ್ಲ. ರವಿಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಪಕ್ಕಾ ಆಗಿದೆ. ಇನ್ನುಳಿದಂತೆ ಸಾನಿಯಾ ಸರ್ದಾರಿಯಾ ಹಾಗೂ ನೇಹಾ ಬಜಾಜ್ ಚಿತ್ರದಲ್ಲಿ ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ಮೋಹನ್ ಬಿ ಕೆರೆ ಚಿತ್ರಕ್ಕೆ ಸೆಟ್‌ಗಳನ್ನು ಹಾಕಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನ, ಜೆಜೆ ಪೆರ್ರಿ ಹಾಗೂ ಅನ್ಬರಿವ್ ಸಾಹಸ ಸಂಯೋಜನೆ ಮಾಡಲಿದ್ದಾರೆ. ಗಣೇಶ್ ಆಚಾರ್ಯ, ಇಮ್ರಾನ್ ಸರ್ದಾರಿಯಾ ಹಾಗೂ ಎ. ಹರ್ಷ ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
'KGF'-2 ಸಿನಿಮಾ ಬಂದು ಹೋಗಿ ಹೆಚ್ಚು ಕಮ್ಮಿ 4 ವರ್ಷಗಳ ಬಳಿಕ 'ಟಾಕ್ಸಿಕ್' ಸಿನಿಮಾ ತೆರೆಗೆ ಬರ್ತಿದೆ. ಮುಂಬೈ, ಬೆಂಗಳೂರು, ಗೋವಾ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಟ ಯಶ್ ಎರಡು ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಮಾರ್ಚ್‌ನಲ್ಲಿ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು 'ಟಾಕ್ಸಿಕ್' ಚಿತ್ರಕ್ಕೆ ಪೈಪೋಟಿ ಕೊಡಲಿವೆ.
ಮಲಯಾಳಂ ನಿರ್ದೇಶಕಿ ಗೀಥು ಮೋಹನ್ ದಾಸ್ ಬಗ್ಗೆ ಕೂಡ ನಿರೀಕ್ಷೆಯಿದೆ. ಎರಡು ವರ್ಷ ಕಾದು ಯಶ್ 'ಟಾಕ್ಸಿಕ್' ಸಿನಿಮಾ ಆರಂಭಿಸಿದ್ದರು. ಈ ಚಿತ್ರದಲ್ಲಿ ಅಂಥಾದ್ದೇನಿದೆ ಎಂದು ಸಹಜವಾಗಿಯೇ ಅಭಿಮಾನಿಗಳು ಕೂತೂಹಲದಿಂದ ಕಾಯುವಂತಾಗಿದೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಯಶ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ನಟಿಸುತ್ತಿದ್ದಾರೆ. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮತ್ತೊಂದು ಟೀಸರ್ ಬಿಡುಗಡೆ ಆಗಲಿದೆ.
'ಟಾಕ್ಸಿಕ್' ಚಿತ್ರದಲ್ಲಿ ಒಟ್ಟು 3 ಹಾಡುಗಳಿವೆ ಎನ್ನಲಾಗ್ತಿದೆ. ಹಾಡುಗಳನ್ನು ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸೆರೆಹಿಡಿಯಲಾಗ್ತಿದೆ. ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟ ಯಶ್ ಮತ್ತೊಮ್ಮೆ ಉದ್ದ ಕೂದಲಿಗೆ ಕತ್ತರಿ ಹಾಕಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











