ಮತ್ತೆ ರಾಯನ ಅವತಾರದಲ್ಲಿ ಕಂಡ ಯಶ್; 'ಟಾಕ್ಸಿಕ್' ರೀ-ಶೂಟ್ ನಿಜಾನಾ?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಟಾಕ್ಸಿಕ್' ಸಿನಿಮಾ ತೆರೆಕಂಡು 20 ದಿನ ಕಳೆಯಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಮಾಡಿ ಚಿತ್ರತಂಡ ಶಾಕ್ ಕೊಟ್ಟಿತ್ತು. ಫಸ್ಟ್ ಸಾಂಗ್ ಹೊರಬಂದ ಬಳಿಕ ಯಶ್ ನಿರ್ಧಾರ ಬದಲಿಸಿದ್ದರು. ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಜೂನ್ 4ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.
ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲೇ ಇಲ್ಲ. ಅಂದಹಾಗೆ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 59 ದಿನ ಕಾಯಬೇಕಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಯಶ್ ಜೊತೆಗೆ ನಯತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹೀಗೆ ದೊಡ್ಡ ತಾರಾಗಣವಿದೆ. ಈಗಾಗಲೇ ಚಿತ್ರದ ಟೀಸರ್‌ಗಳು, 'ತಬಾಹಿ' ಸಾಂಗ್ ರಿಲೀಸ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಚಿತ್ರದ ವಿಎಫ್‌ಎಕ್ಸ್ ಬಗ್ಗೆ ಯಶ್ ಬೇಸರಗೊಂಡಿದ್ದರು, ಒಂದಷ್ಟು ದೃಶ್ಯಗಳನ್ನ ರೀ-ಶೂಟ್ ಮಾಡಲು ಬಯಸಿದ್ದಾರೆ. ಅದಕ್ಕೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಯಶ್ ಗಡ್ಡ, ಕೂದಲಿಗೆ ಕತ್ತರಿ ಹಾಕಿದ್ದರು. ರಾಯನ ಲುಕ್‌ನಲ್ಲಿ ಕೆಲ ದೃಶ್ಯ ಚಿತ್ರೀಕರಿಸಲು ಕಾಯುತ್ತಿದ್ದಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಸದ್ಯ ಯಶ್ ಹೊಸ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಯಶ್ ಕಾರ್ ಇಳಿದು ಹೊರಗೆ ಬರುವ ವೀಡಿಯೋ ಗಮನ ಸೆಳೆಯುತ್ತಿದೆ. ಮತ್ತೆ ಹೆಚ್ಚು ಕಮ್ಮಿ ರಾಯನ ಪಾತ್ರದ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಹಾಗಾಗಿ ರೀ-ಶೂಟ್ ಮಾಡುವುದು ನಿಜಾನಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
'ಟಾಕ್ಸಿಕ್' ಚಿತ್ರದ ಕೇರಳ ಮಾರ್ಕೆಟಿಂಗ್ ಜವಾಬ್ದಾರಿ ವಹಿಸಿಕೊಂಡಿರುವ ಸಂಗೀತಾ ಜನಚಂದ್ರನ್ ಇನ್‌ಸ್ಟಾಗ್ರಾಮ್ ಪೋಸ್ಟ್ ಗಮನ ಸೆಳೆಯುತ್ತಿದೆ. ಇನ್‌ಸ್ಟಾ ಸ್ಟೋರಿಯಲ್ಲಿ 'ಟಾಕ್ಸಿಕ್' ಚಿತ್ರದ ಪೋಸ್ಟರ್ ಹಾಕಿ 'ವೇಯ್ಟಿಂಗ್' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಶೀಘ್ರದಲ್ಲೇ ಚಿತ್ರಕ್ಕೆ ಸಂಬಂಧಿಸಿದಂತೆ ಏನಾದರೂ ಅಪ್‌ಡೇಟ್ ಸಿಗುತ್ತಾ? ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
'ಟಾಕ್ಸಿಕ್' ಚಿತ್ರದಲ್ಲಿ ತಂದೆ, ಮಗನಾಗಿ ದ್ವಿಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ರಾಯ ಜೊತೆಗೆ ಟಿಕೆಟ್ ಎನ್ನುವ ಮತ್ತೊಂದು ಅವತಾರದಲ್ಲಿ ಯಶ್ ದರ್ಶನ ಕೊಟ್ಟಿದ್ದಾರೆ. ಬಹಳ ವರ್ಷಗಳ ಬಳಿಕ ಗಡ್ಡಕ್ಕೆ ಕತ್ತರಿ ಹಾಕಿ ಸಿಕ್ಕಾಪಟ್ಟೆ ಯಂಗ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ಈಗಾಗಲೇ ಟೀಸರ್‌ನಲ್ಲಿ ಅದರ ಝಲಕ್ ನೋಡಿದ್ದೇವೆ. ರಾಕಿಂಗ್ ಸ್ಟಾರ್ ಅಭಿಮಾನಿಗಳಿಗಂತೂ ಭರ್ಜರಿ ಮನರಂಜನೆ ಕಾಯ್ತಿದೆ.
400 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಜಂಟಿಯಾಗಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆಯನ್ನು ತಿದ್ದಿ ತೀಡಿದ್ದಾರೆ. ರವಿ ಬಸ್ರೂರು ಜೊತೆ ಇನ್ನು 4 ಜನ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವುದು ವಿಶೇಷ. ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಚಿತ್ರವನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.
ಗಲ್ಫ್ ದೇಶಗಳ ಬಾಕ್ಸಾಫಿಸ್ ಬಹಳ ಮುಖ್ಯ. ಇರಾನ್-ಇಸ್ರೇಲ್ ಯುದ್ಧದ ಕಾರಣಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಮುಂದೂಡಲಾಗಿದೆ. ರೀ-ಶೂಟ್ ಎನ್ನುವುದೆಲ್ಲಾ ಸುಳ್ಳು ಎಂದು ಚಿತ್ರತಂಡದ ಆಪ್ತವಲಯದಿಂದಲೇ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ 'ಟಾಕ್ಸಿಕ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











