ಆ ಎರಡು ವಾರಾಂತ್ಯದ ಮೇಲೆ 'ಟಾಕ್ಸಿಕ್' ಹಾಗೂ 'ಜೈಲರ್-2' ಕಣ್ಣು; ಖಚಿತವಾದ್ರೆ ಬಾಕ್ಸಾಫೀಸ್ ಬ್ಲಾಸ್ಟ್!
ದೊಡ್ಡ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಒಳ್ಳೆ ದಿನಾಂಕ ನಿಗದಿ ಮಾಡುವುದು ಬಹಳ ಮುಖ್ಯ. ಇದೇ ಕಾರಣಕ್ಕೆ ವರ್ಷಕ್ಕೂ ಮುನ್ನ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರೆ. ಆದರೆ ಇತ್ತೀಚೆಗೆ ಹೇಳಿದ ಸಮಯಕ್ಕೆ ಸರಿಯಾಗಿ ಸಿನಿಮಾಗಳನ್ನು ಬಿಡುಗಡೆ ಮಾಡುವುದು ಕಷ್ಟವಾಗ್ತಿದೆ.
'ಟಾಕ್ಸಿಕ್', 'ಪೆದ್ದಿ', 'ಜನ ನಾಯಗನ್' ಹಾಗೂ 'ಡ್ರ್ಯಾಗನ್' ರೀತಿಯ ಸಿನಿಮಾಗಳ ರಿಲೀಸ್ ಡೇಟ್ ಪದೇ ಪದೇ ಪೋಸ್ಟ್‌ಪೋನ್ ಆಗ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ತರಬೇಕು ಎನ್ನುವ ಲೆಕ್ಕಾಚಾರದಲ್ಲಿ ತಡವಾದರೂ ಒಳ್ಳೆ ಸಿನಿಮಾ ಕೊಡಬೇಕು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಯಶ್ ನಿರ್ಮಿಸಿ, ನಟಿಸಿರುವ 'ಟಾಕ್ಸಿಕ್' ಸಿನಿಮಾ ರಿಲೀಸ್ ಮತ್ತೆ ಮುಂದಕ್ಕೆ ಹೋಗಿರುವುದು ಗೊತ್ತೇಯಿದೆ. ಜೂನ್ 4ಕ್ಕೆ ಬರಲ್ಲ ಅಂದ್ಮೇಲೆ ಮತ್ತೆ ಯಾವಾಗ? ಎನ್ನುವ ಚರ್ಚೆ ಶುರುವಾಗಿದೆ.

ಹಬ್ಬದ ರಜೆಗಳು ಅಥವಾ ಲಾಂಗ್ ವೀಕೆಂಡ್ ನೋಡಿ ದೊಡ್ಡ ಸಿನಿಮಾಗಳು ಬಿಡುಗಡೆ ಮಾಡ್ತಾರೆ. ಹೆಚ್ಚು ರಜೆ ಇದ್ದಷ್ಟು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರುತ್ತಾರೆ. ಇದೇ ಕಾರಣಕ್ಕೆ ಆಗಸ್ಟ್ 13ಕ್ಕೆ 'ಟಾಕ್ಸಿಕ್' ಸಿನಿಮಾ ಬರುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆ ವೀಕೆಂಡ್ ದೊಡ್ಡ ಸಿನಿಮಾಗಳಿಗೆ ವರವಾಗುತ್ತಿದೆ. ಕಳೆದ ವರ್ಷ 'ಕೂಲಿ' ಹಾಗೂ 'ವಾರ್-2' ಸಿನಿಮಾಗಳು ಆಗಸ್ಟ್ 14ಕ್ಕೆ ತೆರೆಗಪ್ಪಳಿಸಿದ್ದವು.
ರಜನಿಕಾಂತ್ ನಟನೆಯ 'ಜೈಲರ್-2' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಆರಂಭಿಸಿದ್ದಾರೆ. ಆಗಸ್ಟ್ 13ಕ್ಕೆ ರಜನಿಕಾಂತ್ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅದೇ ವೀಕೆಂಡ್ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡಿದ್ರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಆಗಸ್ಟ್ 13 ಗುರುವಾರ ಸಿನಿಮಾ ತೆರೆಗೆ ಬಂದ್ರೆ ಶನಿವಾರ ಸ್ವಾತಂತ್ರ್ಯ ದಿನಾಚರಣೆ ರಜೆ ಸಿಗುತ್ತದೆ. ಹಾಗಾಗಿ ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಹೀಗೆ ನಾಲ್ಕು ದಿನ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಾರೆ ಎನ್ನುವ ಚರ್ಚೆ ಜೋರಾಗಿದೆ.

ಆಗಸ್ಟ್ 14 ಸಾಧ್ಯವಾಗದಿದ್ದರೆ ಸೆಪ್ಟೆಂಬರ್ 10ರಂದು 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದು ಉತ್ತಮ ಎನ್ನಲಾಗ್ತಿದೆ. ಸೆಪ್ಟೆಂಬರ್ 10 ಗುರುವಾರ ರಾಯನ ದರ್ಬಾರ್ ಶುರುವಾದರೆ ಮೊದಲ 4 ದಿನ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತದೆ. ಸೋಮವಾರ ಗಣೇಶ ಹಬ್ಬದ ರಜೆ ಸಿಗುತ್ತೆ. ಹಾಗಾಗಿ 5 ದಿನಗಳ ವೀಕೆಂಡ್ ವರವಾಗಬಹುದು ಎನ್ನುವುದು ಕೆಲವರ ವಾದ. 'ಟಾಕ್ಸಿಕ್' ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಅಲ್ಲಿನ ಡಿಸ್ಟ್ರಿಬ್ಯೂಟರ್ಸ್ ಜೊತೆ ಚರ್ಚೆ ನಡೀತಿದೆ. ಅವರೆಲ್ಲರ ಸಲಹೆ ಮೇರೆಗೆ ರಿಲೀಸ್ ಡೇಟ್ ಫಿಕ್ಸ್ ಮಾಡುವ ಸಾಧ್ಯತೆಯಿದೆ.
ಹಾಲಿವುಡ್ ಮಂದಿ ಡಿಸೆಂಬರ್‌ನಲ್ಲಿ ಅದರಲ್ಲೂ ಕ್ರಿಸ್‌ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಮಾಡುತ್ತಾರೆ. ಹಾಗಾಗಿ 'ಟಾಕ್ಸಿಕ್' ಸಿನಿಮಾ ವರ್ಷದ ಕೊನೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಡಿಸೆಂಬರ್ 24ಕ್ಕೆ 'ಕಿಂಗ್' ಸಿನಿಮಾ ರಿಲೀಸ್ ಮಾಡುವುದಾಗಿ ಶಾರುಖ್ ಖಾನ್ ಘೋಷಿಸಿದ್ದಾರೆ. ಕೆಲ ಹಾಲಿವುಡ್ ಸಿನಿಮಾಗಳು ವರ್ಷದ ಕೊನೆ ತಿಂಗಳಲ್ಲಿ ಬಿಡುಗಡೆಗೆ ಅಣಿಯಾಗಿವೆ.
ಸ್ವತಃ 'ಟಾಕ್ಸಿಕ್' ಚಿತ್ರತಂಡವೇ ಗೊಂದಲದಲ್ಲಿದೆ. ಹಾಗಾಗಿ ರಿಲೀಸ್ ಡೇಟ್ ಘೋಷಣೆ ಮಾಡುವ ಸಾಹಸ ಮಾಡಿಲ್ಲ. ಮತ್ತೆ ನಿರಾಸೆ ಮಾಡುವುದು ಬೇಡ, ಹಾಲಿವುಡ್ ರಿಲೀಸ್ ಪ್ಲ್ಯಾನ್ ನೋಡಿಕೊಂಡು ಡೇಟ್ ಫಿಕ್ಸ್ ಮಾಡೋಣ ಎಂದುಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಚರ್ಚೆ ನಡೀತಿದ್ದು ಶೀಘ್ರದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.


Click it and Unblock the Notifications