"Daddy is Home" ಅಂದ್ರೆ ಅರ್ಥ ಏನು? 'ಟಾಕ್ಸಿಕ್' ಚಿತ್ರದಲ್ಲಿ ಹಸಿಬಿಸಿ ದೃಶ್ಯ ಯಾಕೆ?
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಆಕ್ಷನ್ ಪ್ಯಾಕ್ಡ್ ಝಲಕ್ ಅಭಿಮಾನಿಗಳ ಮನಗೆದ್ದಿದೆ. ಟೀಸರ್‌ನಲ್ಲಿರುವ ಹಸಿಬಿಸಿ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಚಿತ್ರದ ಮೂಲಕ ಯಶ್ ಮತ್ತೆ ಗ್ಯಾಂಗ್‌ಸ್ಟರ್ ಕಥೆ ಹೇಳಲು ಬರುತ್ತಿರುವುದು ಗೊತ್ತಾಗುತ್ತಿದೆ. ರಾಯ ಪಾತ್ರವನ್ನೇ ಬಹಳ ವಿಭಿನ್ನವಾಗಿ ಡಿಸೈನ್ ಮಾಡಲಾಗಿದೆ.
ಈಗಾಗಲೇ ಅಭಿಮಾನಿಗಳು 'ಟಾಕ್ಸಿಕ್' ಟೀಸರ್ ಡಿಕೋಡ್ ಮಾಡಲು ಶುರು ಮಾಡಿದ್ದಾರೆ. ಮೇಲ್ನೋಟಕ್ಕೆ ಕಾಣದ ಹೊಳಹುಗಳನ್ನು ಗುರ್ತಿಸಲು ಮುಂದಾಗಿದ್ದಾರೆ. ಇಡೀ ಟೀಸರ್‌ನಲ್ಲಿ 'ರಾಯ' ಆಗಿ ಯಶ್ ಒಂದೇ ಒಂದು ಡೈಲಾಗ್ ಹೇಳಿದ್ದಾರೆ. ಮೇಲ್ನೋಟಕ್ಕೆ ಅದು ಸಿಂಪಲ್ ಡೈಲಾಗ್ ಅನ್ನಿಸಿದ್ದರೂ ಅದಕ್ಕೆ ನಾನಾ ಅರ್ಥಗಳಿದೆ. ಅದನ್ನೆಲ್ಲಾ ಊಹಿಸಿಕೊಂಡು ಇದು 'KGF'-2ಗಿಂತ ದೊಡ್ಡ ಸಿನಿಮಾ, ಕನ್ನಡದಿಂದ ಮಾಡಿರುವ ಹಾಲಿವುಡ್ ಸಿನಿಮಾ ಎಂದು ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ಟೀಸರ್‌ನಲ್ಲಿರೋದು ರಾಯನ ವಿಧ್ವಂಸ. ಸ್ಮಶಾನದ ಸನ್ನಿವೇಶ.. ಅಲ್ಲಿ ವಿಲನ್ ತನ್ನ ಗ್ಯಾಂಗ್‌ನೊಂದಿಗೆ ತನ್ನ ಮಗನನ್ನು ಸಮಾಧಿ ಮಾಡಲು ಮುಂದಾಗುತ್ತಾನೆ. ಸುತ್ತಾ ನೆರೆದವರು ಆತನ ದ್ವೇಷಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಆಗ ಅಲ್ಲಿಗೆ ದೊಡ್ಡ ಕಾರ್ ಬಂದು ನಿಲ್ಲುತ್ತದೆ. ಕುಡಿದು ತೂರಾಡುತ್ತಿರುವ ಚಾಲಕ ಇಳಿದು ಬಾಂಬ್ ಸಿದ್ಧಪಡಿಸುತ್ತಾನೆ. ಕಾರ್ ಒಳಗೆ ರಾಯ(ಯಶ್) ಆವೇಶದಲ್ಲಿ ರತಿಕ್ರೀಡೆಯಲ್ಲಿ ತೊಡಗಿರುರುತ್ತಾನೆ. ಬಾಂಬ್ ಸಿಡಿಯುತ್ತಿದ್ದಂತೆ ಹೊರ ಬರುವ ರಾಯ ಬಂದೂಕು ಹಿಡಿದು ಅಬ್ಬರಿಸುತ್ತಾನೆ. ಕೂಲ್ ಆಗಿ ಸಿಗಾರ್ ಸೇದುತ್ತಾ, "Daddy is Home" ಎಂದು ಡೈಲಾಗ್ ಹೊಡೆದಿರುವುದನ್ನು ನೋಡಬಹುದು.
ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದೆ. ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ಇಂಗ್ಲೀಷ್ ಡೈಲಾಗ್ಸ್ ಇರುವ ಟೀಸರ್ ರಿಲೀಸ್ ಆಗಿದೆ. ಅಷ್ಟಕ್ಕೂ "Daddy is Home" ಅಂದ್ರೆ ಅರ್ಥ ಏನು? ಎಂದು ಅಭಿಮಾನಿಗಳು ಹುಡುಕಾಟ ನಡೆಸುತ್ತಿದ್ದಾರೆ. ಅಪ್ಪ ಮನೆಗೆ ಬಂದ್ರು, ನಾಯಕ ಅಥವಾ ಲೀಡರ್ ವಾಪಸ್ ಬಂದಾಯ್ತು ಎನ್ನು ಅರ್ಥ ಇದಕ್ಕಿದೆ. ಅಪ್ಪ ಮನೆಗೆ ಬಂದರೆ ಸಹಜವಾಗಿಯೇ ಸಾಂತ್ವನ, ಭದ್ರತೆ ಮತ್ತು ಸಂತೋಷದ ಭಾವನೆಗಳನ್ನು ತರುತ್ತದೆ ಎನ್ನುವ ವಿವರಣೆ ಸಿಗುತ್ತದೆ.
"Daddy is Home" ಅಂದ್ರೆ ಮತ್ತಷ್ಟು ಪ್ರಬಲನಾಗಿ ಮರಳಿ ಬಂದಿದ್ದಾನೆ ಎನ್ನುವ ಅರ್ಥ ಇದೆ. ರಾಜಕೀಯ ಪರಿಭಾಷೆಯಲ್ಲಿ "ಮಾರ್ಗದರ್ಶನ ನೀಡಲು ಹಿಂದಿರುಗಿದ ಬಲಿಷ್ಠ, ಅನುಭವಿ ನಾಯಕ" ಬಂದ ಎನ್ನುವ ಅರ್ಥ ಇದೆ. ಆಡುಭಾಷೆಯಲ್ಲಿ "ಮಾರ್ಗದರ್ಶನ ನೀಡಲು ಅನುಭವಿ ಪ್ರಭಾವಿ ವ್ಯಕ್ತಿ ಬಂದ" ಎಂದು ಹೇಳಲು ಬಳಸುತ್ತಾರೆ. ಇದೊಂದು ಡೈಲಾಗ್ ಮೂಲಕ ಯಶ್ ನಾನಾ ವಿಚಾರಗಳನ್ನು ದಾಟಿಸಲು ಹೊರಟಿದ್ದಾರೆ.
'KGF'- 2 ಬಳಿಕ ಮುಂದೇನು ಎಂದು ಕೇಳುತ್ತಿದ್ದವರಿಗೆ ಇದೊಂದು ಡೈಲಾಗ್ ಮೂಲಕ ಯಶ್ ಉತ್ತರಿಸಿದಂತೆ ಕಾಣುತ್ತಿದೆ. ಅದೇ ರೀತಿ ರಾಕಿ ಭಾಯ್‌ಗಿಂತ ಪವರ್‌ಫುಲ್ ಈ ರಾಯ ಎಂದು ಹೇಳಲು ಯತ್ನಿಸಿದಂತಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ನಾನು ಮತ್ತೆ ಬಂದೆ ಎಂದು ಹೇಳುವಂತೆ ಕಾಣ್ತಿದೆ. 'ಟಾಕ್ಸಿಕ್' ಕಥೆ ವಿಚಾರಕ್ಕೆ ಬಂದರೆ ಎದುರಾಳಿಗಳಿಗೆ ಬೆಂಕಿ ಬಿರುಗಾಳಿಯಾಗಿ ಮತ್ತೆ ತಿರುಗೇಟು ಕೊಡಲು ಬಂದಿದ್ದೇನೆ ಎಂದು ಸವಾಲು ಹಾಕುವಂತಿದೆ.
ಆಕ್ಷನ್ ಸನ್ನಿವೇಶದ ನಡುವೆ ಮಾದಕ ದೃಶ್ಯ ಯಾಕೆ? ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೂ ಒಂದು ಕಾರಣ ಇದೆ ಎಂದು ಅಭಿಮಾನಿಗಳು ಡಿಕೋಡ್ ಮಾಡುತ್ತಿದ್ದಾರೆ. ಅದು ಪ್ರೀತಿ, ಮೋಹ ಅಥವಾ ಹಿಂಸೆ ಅಲ್ಲ, ಬದಲಿಗೆ ನಿಯಂತ್ರಣ. ಅದು ಪ್ರಣಯ ದೃಶ್ಯ ಕೂಡ ಅಲ್ಲ. ಆತನ ಪ್ರಾಬಲ್ಯ, ವ್ಯಸನ, ಗೀಳು ಮತ್ತು ಅಧಿಕಾರದ ಸಂಕೇತವಾಗಿ ತೋರಿಸಿದ್ದಾರೆ. ಯಶ್ ಈ ಸಿನಿಮಾ ಮೂಲಕ ಬೇರೆ ಏನೋ ಹೇಳಲು ಹೊರಟಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿದೆ. ಅದೇ ದಿನ 'ಧುರಂಧರ್'-2 ತೆರೆಗಪ್ಪಳಿಸಲಿದೆ. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರಂಟಿ. ತಮ್ಮ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಂಬಿಕೆ ಇರುವುದರಿಂದಲೇ ಯಶ್ ಎಲ್ಲದಕ್ಕೂ ಸೈ ಎನ್ನುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











