'ಟಾಕ್ಸಿಕ್' ಚಿತ್ರದ ಟೀಸರ್ ನೋಡಿ ಆರ್‌ಜಿವಿ, ಸುದೀಪ್, ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು?
ಸೋಶಿಯಲ್ ಮೀಡಿಯಾದಲ್ಲೀಗ 'ರಾಯ' ಯಶ್ ಆರ್ಭಟ ಜೋರಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಜಬರ್ದಸ್ತ್ ಗಿಫ್ಟ್ ಸಿಕ್ಕಂತಾಗಿದೆ. ಕೆಲವೇ ನಿಮಿಷಗಳಲ್ಲಿ ಸಣ್ಣ ಝಲಕ್ ಕೋಟಿ ಕೋಟಿ ವೀವ್ಸ್ ಸಾಧಿಸಿದೆ.
ಅಭಿಮಾನಿಗಳು, ಸಿನಿರಸಿಕರು ಮಾತ್ರವಲ್ಲ ಖ್ಯಾತ ತಾರೆಯರು 'ಟಾಕ್ಸಿಕ್' ಟೀಸರ್ ನೋಡಿ ಹುಬ್ಬೇರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತಮ್ಮ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದವರು. 'ಅರ್ಜುನ್ ರೆಡ್ಡಿ', 'ಅನಿಮಲ್' ಚಿತ್ರಗಳಲ್ಲಿ ಬಹಳ ಧೈರ್ಯವಾಗಿ ಸಾಕಷ್ಟು ಸಂಗತಿಗಳನ್ನು ಹೇಳಿದ್ದರು. 'ಟಾಕ್ಸಿಕ್' ಟೀಸರ್ ನೋಡಿದ ಕೆಲವರು ವಂಗಾ ಸಿನಿಮಾಗಳನ್ನು ಮೀರಿಸುವಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸ್ವತಃ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದೀಗ 'ಟಾಕ್ಸಿಕ್' ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಟ್ವೀಟ್ ಮಾಡಿ "ಟಾಕ್ಸಿಕ್ ಟೀಸರ್ ನನ್ನ ಮನಮುಟ್ಟಿತು. ಆ ಸ್ಟೈಲ್, ಆಟಿಟ್ಯೂಡ್, ಆರ್ಭಟ ಎಲ್ಲವೂ ಇಷ್ಟವಾಯಿತು. ಹುಟ್ಟುಹಬ್ಬದ ಶುಭಾಶಯಗಳು ಯಶ್" ಎಂದು ಬರೆದುಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಕೂಡ 'ಟಾಕ್ಸಿಕ್' ಟೀಸರ್ ನೋಡಿ ಮೆಚ್ಚಿದ್ದಾರೆ. ಯಶ್ ಟ್ಟೀಟ್ ಮಾಡಿ ಟೀಸರ್ ಲಿಂಕ್ ಪೋಸ್ಟ್ ಮಾಡಿದ್ದಾರೆ. ಅದನ್ನು ರೀಟ್ವೀಟ್ ಮಾಡಿ "ಯಶ್‌ಗೆ ಶುಭಾಶಯ. ಅಲೆಗಳ ವಿರುದ್ಧ ಸಾಗಲು ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕರೆದೊಯ್ಯಲಿ. ನೀವು ಅದರ ಮೇಲೆ ದೃಷ್ಟಿ ನೆಟ್ಟಿದ್ದೀರಿ. ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ.
ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಕೂಡ 'ಟಾಕ್ಸಿಕ್' ಟೀಸರ್ ನೋಡಿ ಸಂಭ್ರಮಿಸಿದ್ದಾರೆ. "ಅದ್ಭುತ ಸೃಷ್ಟಿಸುವ ಕ್ರೇಜಿ ಮನಸ್ಥಿತಿಯ ಗುಂಪು ಸೇರಿ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ಮುಂದಾದರೆ ಏನಾಗುತ್ತದೆ? ಚಿಂದಿ ಗೀತು ಮೋಹನ್ ದಾಸ್ ಹಾಗೂ ಯಶ್.. ನಿಮ್ಮ ಹುಟ್ಟುಹಬ್ಬಕ್ಕೆ ಇದಕ್ಕಿಂತ ಇನ್ನೇನ್ ಬೇಕು.. ಹುಟ್ಟುಹಬ್ಬದ ಶುಭಾಶಯಗಳು ಬಾಸ್" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ವಿಘ್ನೇಶ್ ಪತ್ನಿ ನಯನತಾರಾ ಕೂಡ ಈ ಚಿತ್ರದಲ್ಲಿ ನಟಿಸಿರುವುದು ಗೊತ್ತೇಯಿದೆ.
ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ವಿಘ್ನೇಶ್ ಶಿವನ್ ಕನ್ನಡ ಯಶ್ ಅವರನ್ನು 'ಬಾಸ್' ಎಂದು ಕರೆದಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಈ ಸ್ಕ್ರೀನ್ ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.
ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೂಡ 'ಟಾಕ್ಸಿಕ್' ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ 'ಧುರಂಧರ್' ಸಿನಿಮಾ ಬಗ್ಗೆ ಹಾಕಿ ಹೊಗಳಿದ್ದ ಆರ್‌ಜಿವಿ 'ಟಾಕ್ಸಿಕ್' ಬಗ್ಗೆ ಕಾಮೆಂಟ್ ಮಾಡಿದ್ದರು. 'ಧುರಂಧರ್' ಎದುರು 'ಟಾಕ್ಸಿಕ್' ಮಂಕಾಗುತ್ತದೆ ಎಂದಿದ್ದರು. ಇದೀಗ ಟೀಸರ್ ನೋಡಿ ಕಾಮೆಂಟ್ ಮಾಡಿದ್ದಾರೆ.
ಯಶ್ ನಟಿಸಿದ 'ಟಾಕ್ಸಿಕ್' ಚಿತ್ರದ ಟೀಸರ್ ನೋಡಿದ ನಂತರ ಗೀತು ಮೋಹನ್ ದಾಸ್ ಮಹಿಳಾ ಸಬಲೀಕರಣದ ಅಂತಿಮ ಸಂಕೇತ ಅನ್ನೋದ್ರಲ್ಲಿ ನನಗೆ ಸಂದೇಹವಿಲ್ಲ.. ಈಕೆಗೆ ಯಾವುದೇ ಪುರುಷ ನಿರ್ದೇಶಕರನ್ನು ಹೋಲಿಸಲು ಆಗಲ್ಲ. ಆಕೆ ಇದನ್ನು ಚಿತ್ರೀಕರಿಸಿದ್ದಾರೆಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಇನ್ನು ಹಲವರು 'ಟಾಕ್ಸಿಕ್' ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.


Click it and Unblock the Notifications











