ಯಶ್ 'ಟಾಕ್ಸಿಕ್' ಟೀಸರ್ ದೃಶ್ಯಗಳ ಬಗ್ಗೆ ಟೀಕೆ; ನಿರ್ದೇಶಕಿ ಗೀತು ಮೋಹನ್ ದಾಸ್ ತಿರುಗೇಟು
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಟೀಸರ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಮೆಚ್ಚಿಕೊಂಡರೂ ಬಹುತೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಸಿಬಿಸಿ ದೃಶ್ಯ ಹಾಗೂ ಹಿಂಸಾತ್ಮಕ ಸನ್ನಿವೇಶದ ಬಗ್ಗೆ ಚಕಾರ ಎತ್ತಿದ್ದಾರೆ. ಇದೆಂಥಹ ಹುಚ್ಚಾಟ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ನಿರ್ದೇಶಕಿಯಾಗಿ ಗೀತು ಮೋಹನ್ ದಾಸ್ ಇಂತಹ ಸನ್ನಿವೇಶಗಳನ್ನು ಹೇಗೆ ಚಿತ್ರೀಕರಿಸಿದರು ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ 'ಟಾಕ್ಸಿಕ್' ಟೀಸರ್ ನೋಡಿ ಹುಬ್ಬೇರಿಸಿದ್ದಾರೆ. "ಟೀಸರ್ ನೋಡಿದ ನಂತರ ಗೀತು ಮೋಹನ್ ದಾಸ್ ಮಹಿಳಾ ಸಬಲೀಕರಣದ ಅಂತಿಮ ಸಂಕೇತ ಅನ್ನೋದ್ರಲ್ಲಿ ನನಗೆ ಸಂದೇಹವಿಲ್ಲ" ಎಂದು ಟ್ವೀಟ್ ಮಾಡಿದ್ದರು. ಇನ್ನು ಯಶ್ ಸಿನಿಮಾದಲ್ಲಿ ಇಂತಹ ದೃಶ್ಯ ಹೇಗೆ ಬಂತು ಎನ್ನುವುದು ಕೆಲವರ ಪ್ರಶ್ನೆ. ಅದೇ ರೀತಿ ಆ ದೃಶ್ಯದಲ್ಲಿ ಕಾಣಿಸಿಕೊಂಡಿರುವ ನಟಿ ಯಾರು ಎನ್ನುವ ಚರ್ಚೆ ಜೋರಾಗಿದೆ. ಇದೆಲ್ಲದರ ಬಗ್ಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗೀತು ಮೋಹನ್ ದಾಸ್ ಒಂದು ಗೂಡಾರ್ಥದ ಪೋಸ್ಟ್ ಹಂಚಿಕೊಂಡಿದ್ದಾರೆ. ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಆ ದೃಶ್ಯದಲ್ಲಿರುವ ನಟಿ ಯಾರು ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇದೀಗ ಬಹಳ ಚರ್ಚೆ ನಡೆಯುತ್ತಿದೆ. ಮಲಯಾಳಂ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್ ಕೂಡ 'ಟಾಕ್ಸಿಕ್' ಟೀಸರ್ ನೋಡಿ ವ್ಯಂಗ್ಯವಾಡಿದ್ದರು. ಈ ಹಿಂದೆ ಮಹಿಳೆಯರ ಬಗ್ಗೆ ತನ್ನ ಚಿತ್ರದಲ್ಲಿದ್ದ ಡೈಲಾಗ್ ಬಗ್ಗೆ ಗೀತು ಮೋಹನ್ ದಾಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈಗ ಆಕೆ 'ಟಾಕ್ಸಿಕ್' ಚಿತ್ರದಲ್ಲಿ ತೋರಿಸುವುದು ಏನು? ಎಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೂ ಗೀತು ತಿರುಗೇಟು ನೀಡಿದ್ದಾರೆ.
"ಸ್ತ್ರೀ ಸಂತೋಷ, ಸಮ್ಮತಿ, ಆಕೆ ವ್ಯವಸ್ಥೆಯ ಜೊತೆ ಆಟ ಆಡುವುದನ್ನು ಜನ ಗುರುತಿಸಿದಾಗ ಮಜಾವಾಗಿರುತ್ತದೆ" ಎಂದು ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಯಾರ ಹೆಸರನ್ನು ತೆಗೆದುಕೊಳ್ಳದೇ ಪರೋಕ್ಷವಾಗಿ ಆಕೆ ಕಾಮೆಂಟ್ ಮಾಡಿದ್ದರು. ಬಳಿಕ ಅದೇ ಪೋಸ್ಟ್ ಮಾಡಿ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್ ಅವರನ್ನು ಟ್ಯಾಗ್ ಮಾಡಿ "ಈಗ ಇದು ಹೇಳ್ತಿದ್ದೀನಿ" ಎಂದು ಗೀತು ಬರೆದುಕೊಂಡಿದ್ದಾರೆ.
'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಯಾರು ಎನ್ನುವುದನ್ನು ಗೀತು ಮೋಹನ್ ದಾಸ್ ತಿಳಿಸಿದ್ದಾರೆ. ನಟಾಲಿಯಾ ಬರ್ನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ದೃಶ್ಯದಲ್ಲಿ ಕೂಡ ಆಕೆ ಕಾಣಿಸಿಕೊಂಡಿದ್ದಾರೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಆಕೆಯ ಹೆಸರು ಬೀಟ್ರಿಜ್ ಟೌಫೆನ್‌ಬಾಚ್ ಎಂದು ಹೇಳಿದ್ದಾರೆ. ಆಕೆಯ ಫೋಟೊ ಹಂಚಿಕೊಂಡಿದ್ದಾರೆ. ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇನ್ನು 'ಟಾಕ್ಸಿಕ್' ಟೀಸರ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್ ದಾಸ್ ಈ ಹಿಂದೆ ಕೌಟುಂಬಿಕ ಸಿನಿಮಾಗಳ ಬಗ್ಗೆ ಮಾತನಾಡಿದ್ದ ವೀಡಿಯೋ ವೈರಲ್ ಆಗ್ತಿದೆ. "ಕೌಟುಂಬಿಕ ಸಿನಿಮಾಗಳನ್ನು" ಮಾಡಲು ಬಯಸುತ್ತಿರುವ ಬಗ್ಗೆ ಆಕೆ ಮಾತನಾಡಿದ್ದರು. "ಒಬ್ಬ ಫಿಲ್ಮ್ ಮೇಕರ್ ಆಗಿ, ಜನರು ತಮ್ಮ ಕುಟುಂಬ ಅಥವಾ ಅವರ ಸಂಗಾತಿಯೊಂದಿಗೆ ಚಿತ್ರವನ್ನು ನೋಡುವಾಗ ಆರಾಮವಾಗಿರುವುದು ಮುಖ್ಯ" ಎಂದು ಗೀತು ಸಂದರ್ಶನವೊಂದರಲ್ಲಿ ಹೇಳಿದ್ದರು.


Click it and Unblock the Notifications











