ಯಶ್ 'ಟಾಕ್ಸಿಕ್' ಸೆಟ್ ಫೋಟೊಗಳು ಲೀಕ್; ನಾನು ಈ ಚಿತ್ರದಲ್ಲಿ ನಟಿಸ್ತಿಲ್ಲ ಎಂದ ಬೆಡಗಿ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸದ್ಯ ಸುದ್ದಿಯಲ್ಲಿದೆ. ಅದಕ್ಕೆ ಕಾರಣಕ್ಕೆ ಸಿನಿಮಾ ಸೆಟ್ ಸಂಬಂಧ ನಿರ್ಮಾಣ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿರುವುದು. ಅರಣ್ಯ ಭೂಮಿಯಲ್ಲಿ 'ಟಾಕ್ಸಿಕ್' ಸಿನಿಮಾ ಸೆಟ್ ಹಾಕಿದ್ದಾರೆ ಎಂದು ಆರೋಪಿಸಿ ವಕೀಲರಾದ ಜಿ. ಬಾಲಾಜಿ ಪಿಐಎಲ್ ಸಲ್ಲಿಸಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ನಟ ಯಶ್ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರಕ್ಕಾಗಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ. ಆದರೆ ಚಿತ್ರೀಕರಣಕ್ಕೂ ಮುನ್ನ ಸಂಕಷ್ಟ ಎದುರಾಗಿದೆ.

ಅಂದಹಾಗೆ ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ 'ಟಾಕ್ಸಿಕ್' ಚಿತ್ರಕ್ಕಾಗಿ ಬೃಹತ್ ಸೆಟ್ ಎದ್ದು ನಿಂತಿದೆ. ಅದರ ಫೋಟೊಗಳು ಈಗ ವೈರಲ್ ಆಗುತ್ತಿದೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಈ ಸೆಟ್ ಹಾಕಿದ್ದಾರೆ ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸೆಟ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪಿಐಎಲ್ ಸಂಬಂಧ ಹೈಕೋರ್ಟ್ ಕೆವಿಎನ್ ಸಂಸ್ಥೆ ಹಾಗೂ ಎಚ್ಎಂಟಿ ಸಂಸ್ಥೆಗೆ ನೊಟೀಸ್ ಜಾರಿ ಮಾಡಿದೆ.
ಹಲವು ದಿನಗಳಿಂದ ಸೆಟ್ ನಿರ್ಮಾಣ ಕೆಲಸಗಳು ನಡೆಯುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸೆಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣವಾಗುತ್ತಿರುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸೆಟ್ ಹಾಕಲಾಗುತ್ತಿದೆ.

ಇನ್ನು ನೋಟಿಸ್ ಬಗ್ಗೆ ಕೆವಿಎನ್ ಸಂಸ್ಥೆಯ ಸುಪ್ರೀತ್ ಟಿವಿ9 ವಾಹಿನಿ ಪ್ರತಿಕ್ರಿಯಿಸಿದ್ದಾರೆ. "ಸೆಟ್ ಹಾಕಿರುವುದು ಹೆಚ್ಎಂಟಿಗೆ ಸೇರಿದ ಜಾಗದ ಪಕ್ಕದ ಜಾಗದಲ್ಲಿ. ಇನ್ನು ಶೂಟಿಂಗ್ ಶುರುವಾಗಿಲ್ಲ, ಸೆಟ್ ನಿರ್ಮಾಣದ ಕೆಲಸಗಳು ನಡೀತಿದೆ. ಸೆಟ್ ಹಾಕುತ್ತಿರುವ ಜಾಗ ನಮ್ಮ ಆತ್ಮೀಯರದ್ದೆ. ನೋಟಿಸ್ ಆಫೀಸ್‌ಗೆ ಬಂದಿರಬಹುದು ಅಥವಾ ಜಾಗದ ಮಾಲೀಕರಿಗೆ ಹೋಗಿರಬಹುದು" ಎಂದು ತಿಳಿಸಿದ್ದಾರೆ.
'ಟಾಕ್ಸಿಕ್' ಚಿತ್ರದ ತಾರಾಗಣದ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕರೀನಾ ಕಪೂರ್, ಕೈರಾ ಅದ್ವಾನಿ, ಹುಮಾ ಖುರೇಷಿ, ನಯನತಾರ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಬಾಲಿವುಡ್ ನಟಿ ತಾರಾ ಸುತಾರಿಯಾ ಕೂಡ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಈ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದಾರೆ.
"ಎಲ್ಲರಿಗೂ ನಮಸ್ಕಾರ! ಪ್ರಾಜೆಕ್ಟ್‌ವೊಂದರ ಕುರಿತು ಕಳೆದ ಕೆಲವು ದಿನಗಳಿಂದ ಸುದ್ದಿ ಕೇಳಿಬರ್ತಿದೆ. ನಾನು ಯಾವುದೇ ಸುದ್ದಿ ಹಂಚಿಕೊಂಡಿಲ್ಲ. ಹಂಚಿಕೊಳ್ಳಲು ಏನಾದರೂ ಇದ್ದಾಗ, ನಾನು ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕಥೆ ಹೇಳುತ್ತಿರುವುದಾಗಿ ಚರ್ಚೆ ನಡೆಯುತ್ತಿದೆ. ಇನ್ನು ಚಿತ್ರದಲ್ಲಿ ಯಶ್ ಮತ್ತೆ ಡಾನ್ ಆಗಿ ನಟಿಸುವ ಬಗ್ಗೆಯೂ ಉಹಾಪೋಹ ಶುರುವಾಗಿದೆ.
'ಟಾಕ್ಸಿಕ್' ಚಿತ್ರಕ್ಕಾಗಿ ನಟ ಯಶ್ ಹೊಸ ಹೇರ್‌ಸ್ಟೈಲ್ ಟ್ರೈ ಮಾಡುತ್ತಿದ್ದಾರೆ. ಅಂಬಾನಿ ಮಗನ ಮದುವೆ ಸಮಾರಂಭಕ್ಕೆ ಯಶ್ ಹೊಸ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ರಾಕಿಂಗ್ ಸ್ಟಾರ್ ನಯಾ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸುದ್ದಿ ಆಗಿತ್ತು. ಅಲೆಕ್ಸ್ ವಿಜಯ್‌ಕಾಂತ್ ಎಂಬುವವರು ಯಶ್ ಕೂದಲಿಗೆ ಕತ್ತರಿ ಹಾಕಿ ಹೊಸ ಲುಕ್ ಕೊಟ್ಟಿದ್ದಾರೆ. ಇನ್ನು ಯಶ್ ನಟನೆಯ 'ರಾಜಾಹುಲಿ' ಸಿನಿಮಾ ಈ ವಾರ ರೀ-ರಿಲೀಸ್ ಆಗಿದೆ.


Click it and Unblock the Notifications











