ಮತ್ತೆ ಮುಂಬೈಗೆ ಹೊಂಟು ನಿಂತ ಯಶ್; ಒಂದೂವರೆ ತಿಂಗಳು ಅಲ್ಲೇ ವಾಸ್ತವ್ಯ
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಪತ್ನಿ ಸಮೇತ ಮುಂಬೈಗೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗಿತ್ತು. ಈ ತಿಂಗಳಾಂತ್ಯಕ್ಕೆ ಮತ್ತೆ ವಾಣಿಜ್ಯ ನಗರಿಗೆ ರಾಕಿಭಾಯ್ ಪಯಣ ಬೆಳೆಸುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಾರಿ ಸಿನಿಮಾ ಚಿತ್ರೀಕರಣಕ್ಕಾಗಿ ಅಲ್ಲಿಗೆ ತೆರಳುತ್ತಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ಮುಗಿದಿದೆ. ಆದರೆ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಚಿತ್ರತಂಡ ಕೊಡುತ್ತಿಲ್ಲ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ದೇಶ ವಿದೇಶದ ಕಲಾವಿದರು, ತಂತ್ರಜ್ಞರು ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ತಮಿಳು ನಟಿ ನಯನತಾರ ನಟಿಸುತ್ತಿದ್ದಾರೆ. ಅಕ್ಷಯ್ ಒಬೆರಾಯ್, ತಾರಾ ಸುತಾರಿಯಾ ಸೇರಿದಂತೆ ಕೆಲವರು ಈಗಾಗಲೇ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬೆಂಗಳೂರಿನಲ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ 25 ದಿನಗಳ ಶೆಡ್ಯೂಲ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ.
ಅಕ್ಟೋಬರ್ ಅಂತ್ಯಕ್ಕೆ ಮುಂಬೈನಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಪುನರಾರಂಭವಾಗುತ್ತದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಕಿಯಾರ ಅದ್ವಾನಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಇದೀಗ ಕಿಯಾರ ಜೊತೆ ಕೆಲ ರೊಮ್ಯಾಂಟಿಕ್ ಸನ್ನಿವೇಶಗಳನ್ನು ಮುಂಬೈನಲ್ಲಿ ಸೆರೆ ಹಿಡಿಯಲು ಸಿದ್ಧತೆ ನಡೀತಿದೆ ಎಂದು ಹೇಳಲಾಗ್ತಿದೆ. ಈಗಾಗಲೇ ಅಲ್ಲಿ 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕಾಗಿ ಸೆಟ್ ಹಾಕುವ ಕೆಲಸ ಆರಂಭವಾಗಿದೆ ಎಂದು ಮಿಡ್-ಡೇ ಪತ್ರಿಕೆ ವರದಿ ಮಾಡಿದೆ.
ದೀಪಾವಳಿ ಹಬ್ಬದ ನಂತರ ಮುಂಬೈನಲ್ಲಿ 'ಟಾಕ್ಸಿಕ್' ಹೊಸ ಶೆಡ್ಯೂಲ್ ಶುರುವಾಗುವ ಸಾಧ್ಯತೆಯಿದೆಯಂತೆ. ಹೆಚ್ಚು ಕಮ್ಮಿ 45 ದಿನಗಳ ದೊಡ್ಡ ಶೆಡ್ಯೂಲ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. 'KGF-2' ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಆಗಿರುವುದರಿಂದ ಕುತೂಹಲ ಹೆಚ್ಚಿದೆ.

'KGF'-1 ಸಿನಿಮಾ ಪ್ರಚಾರದ ಸಮಯದಲ್ಲಿ ಯಶ್ ಮುಂಬೈಗೆ ಹೆಚ್ಚು ಭೇಟಿ ನೀಡಿದ್ದರು. ಸಿನಿಮಾ ಸಕ್ಸಸ್ ಬಳಿಕ ಆಗಾಗ್ಗೆ ಬೇರೆ ಕಾರ್ಯಕ್ರಮಗಳ ನಿಮಿತ್ತ ಮಹಾರಾಷ್ಟ್ರ ರಾಜಧಾನಿಗೆ ಯಶ್ ಹೋಗಿ ಬರುತ್ತಿದ್ದಾರೆ. ಇದೀಗ ಸಿನಿಮಾ ಚಿತ್ರೀಕರಣಕ್ಕೆ ತೆರಳುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೀತಿದೆ. ದೇಶ ವಿದೇಶದ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಲೆಕ್ಕಾಚಾರವಿದೆ.
ಕಳೆದ ಡಿಸೆಂಬರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. 9 ತಿಂಗಳ ಬಳಿಕ ಆಗಸ್ಟ್ 8ಕ್ಕೆ ಸಿನಿಮಾ ಸೆಟ್ಟೇರಿತ್ತು. ಬೆಂಗಳೂರಿನಲ್ಲೇ ಮೊದಲಿಗೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಲಂಡನ್‌ನಲ್ಲಿ ಕೂಡ ಕೆಲ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಕೂಡ ಯಶ್ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸುವ ನಿರೀಕ್ಷೆಯಿದೆ. 60-70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಡ್ರಗ್ಸ್ ಮಾಫಿಯಾ ಸುತ್ತಾ ಸಿನಿಮಾ ಕಥೆ ಸಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಶ್ರಮಿಸುತ್ತಿದೆ.
'ಟಾಕ್ಸಿಕ್' ಜೊತೆಗೆ 'ರಾಮಾಯಣ' ಚಿತ್ರಕ್ಕೂ ಯಶ್ ಬಂಡವಾಳ ಹೂಡುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾವಣನ ಪಾತ್ರಕ್ಕೆ ಯಶ್ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಆದರೆ ಈ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.


Click it and Unblock the Notifications











