ದರ್ಶನ್, ಶಿವಣ್ಣ, ಸುದೀಪ್, ಯಶ್‌ಗೆ ನಾಯಿ, ನರಿ ಎಂದು ಅವಮಾನ: ಕ್ಷಮೆ ಕೇಳುವಂತೆ ಅಭಿಮಾನಿಗಳ ಆಗ್ರಹ
ರಾಜ್ಯಕ್ಕೆ ಕಾವೇರಿ ನೀರಿನ ಅಭಾವ ಇರುವ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೀತಿದೆ. ನಿನ್ನೆ(ಸೆಪ್ಟೆಂಬರ್ 27) ಬೆಂಗಳೂರು ಬಂದ್ ಆಚರಿಸಿ ವಿವಿಧ ಸಂಘಟನೆಗಳು ಸರ್ಕಾರದ ನಡೆಯನ್ನು ಖಂಡಿಸಿದ್ದವು. ಕನ್ನಡಪರ ಹೋರಾಟಗಾರರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ವಿವಿಧ ಕನ್ನಡ ಪರ ಹಾಗೂ ರೈತ ಪರ ಸಂಘಟನೆಗಳು ಕೊಟ್ಟ ಬೆಂಗಳೂರು ಬಂದ್ ಕರೆ ಬಹುತೇಕ ಯಶಸ್ವಿಯಾಗಿತ್ತು. ಬಹುತೇಕ ಅಂಗಡಿ ಮುಗ್ಗಟ್ಟುಗಳ ಬಾಗಿಲು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಬಿಎಂಟಿಸಿ ಬಸ್‌ಗಳು ರಸ್ತೆಗಿಳಿದರೂ ಜನಸಂಚಾರ ಮಾತ್ರ ವಿರಳವಾಗಿತ್ತು. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇನ್ನು ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮೈಸೂರು ಬ್ಯಾಂಕ್ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದರೂ ಅವರನ್ನು ವಶಕ್ಕೆ ಪಡೆದು ಫ್ರೀಡಂ ಪಾರ್ಕ್‌ಗೆ ತಂದು ಬಿಡಲಾಯಿತು.

ಕನ್ನಡ ಚಿತ್ರರಂಗ, ಕಿರುತೆರೆ ಚಿತ್ರೀಕರಣ ಸಿನಿಮಾ ಪ್ರದರ್ಶನ ನಿಲ್ಲಿಸಿ ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಆದರೆ ಪ್ರತಿಭಟನೆಯಲ್ಲಿ ಭಾಗಿ ಆಗಿರಲಿಲ್ಲ. ಕನ್ನಡ ಚಿತ್ರರಂಗದ ಸ್ಟಾರ್ ನಟರು ಹೋರಾಟಕ್ಕೆ ಬರಲಿಲ್ಲ ಎಂದು ಕೆಲ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. 'ಕನ್ನಡಿಗರ ರಕ್ಷಣ ವೇದಿಕೆ' ಅಧ್ಯಕ್ಷ ಪ್ರಕಾಶ್ ಎಂಬುವವರು ನೀಡಿರುವ ಹೇಳಿಕೆಗೆ ಕನ್ನಡ ಸಿನಿರಸಿಕರು ಬೇಸರಗೊಂಡಿದ್ದಾರೆ. ಕನ್ನಡ ಸಿನಿಮಾ ಕಲಾವಿದರನ್ನು ನಾಯಿ, ನರಿ ಎಂದು ಕರೆದು ಅವಮಾನಿಸಿರುವ ಪ್ರಕಾಶ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಬೆಂಗಳೂರು ಬಂದ್ ಪ್ರತಿಭಟನೆ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ 'ಕನ್ನಡಿಗರ ರಕ್ಷಣ ವೇದಿಕೆ' ಅಧ್ಯಕ್ಷ ಪ್ರಕಾಶ್ ಮಾತುಗಳು ದರ್ಶನ್, ಸುದೀಪ್, ಯಶ್, ಶಿವಣ್ಣ ಅಭಿಮಾನಿಗಳನ್ನು ಕೆರಳಿಸಿದೆ. "ಕನ್ನಡ ಕಲಾವಿದರ ಸಹಕಾರ ಎಂದರೆ ನಾವು ಬೇರೆ ಏನು ಅಪೇಕ್ಷೆಪಡುತ್ತಿಲ್ಲ. ಈ ನಾಡಿನ ನೆಲ ಜಲ ಭಾಷೆ ಗಡಿಗೆ ಸಮಸ್ಯೆ ಆದಾಗ ಅವರು ಟೊಂಕ ಕಟ್ಟಿ ನಿಲ್ಲಬೇಕು. ಅಣ್ಣಾವ್ರು ಇದ್ದಿದ್ದರೆ ಈ ನಾಯಿ ನರಿಗಳನ್ನು ಯಾವನ್ನು ಕರೀತಿದ್ದ. ಅಣ್ಣಾವ್ರು ಒಂದು ಕೂಗು ಹಾಕಿದ್ದ ಇಡೀ ಕರ್ನಾಟಕನೇ ಬಂದ್ ಆಗ್ತಿತ್ತು. ನಾವ್ಯಾರು ರೋಡಿಗಿಳಿಯುವ ಅವಶ್ಯಕತೆ ಇರುತ್ತಿರಲಿಲ್ಲ"
"ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಶ್‌ರಂತಹ ನಾಲ್ಕು ರತ್ನಗಳು ಹೋದಮೇಲೆ ಅವರ ಜಾಗ ತುಂಬುವಂತ ಈ ನಾಲ್ಕು ಜನ ಸುದೀಪ್, ಶಿವರಾಜ್‌ಕುಮಾರ್, ಯಶ್, ದರ್ಶನ್ ಇದ್ದಾರೆ. ಆದರೆ ಇವರ ಹೇಳಿಕೆ ಹೇಗಿದೆ ಅಂದರೆ ದುರಂಹಕಾರ. ಇವರಿಗೆ ಹಣದ ಮದ ಏರಿರಬೇಕು. ನಮ್ಮ ಸ್ನೇಹಿತರು ಹೇಳುತ್ತಿದ್ದರು. ಅವರಿಗೆ ಸಂಭಾವನೆ ಕೊಟ್ಟರೆ ಎಲ್ಲಿಗೆ ಬೇಕಾದರೂ ಬರ್ತಾರೆ ಅಂತ."
"ಯಶ್, ಸುದೀಪ್, ದರ್ಶನ್, ಶಿವರಾಜ್‌ಕುಮಾರ್ ನಿಮಗೆಲ್ಲರಿಗೂ ಎಷ್ಟೆಷ್ಟು ಸಂಭಾವನೆ ಬೇಕು ಹೇಳಿ. ಏಳು ಕೋಟಿ ಕನ್ನಡಿಗರ ಬಳಿ ನಾವು ಭಿಕ್ಷೆ ಬೇಡಿ ನಿಮ್ಮ ಮುಖದ ಮೇಲೆ ಎಸೆಯುತ್ತೇವೆ. ಆಗಾದರೂ ನೀವು ರೈತರ ಪರ ಹೋರಾಟಕ್ಕೆ ಬರ್ತೀರಾ ನೋಡೋಣ" ಎಂದು ಹೇಳಿಕೆ ಕೊಟ್ಟಿದ್ದಾರೆ.
ಕನ್ನಡ ಕಲಾವಿದರನ್ನು ನಾಯಿ ನರಿ ಎಂದಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಈ ಕೂಡಲೇ 'ಕನ್ನಡಿಗರ ರಕ್ಷಣ ವೇದಿಕೆ' ಅಧ್ಯಕ್ಷ ಪ್ರಕಾಶ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಲಾವಿದರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿಲ್ಲ. ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಆದರೂ ಈ ರೀತಿ ಅವಮಾನಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications