ಅಮೆರಿಕದಲ್ಲಿ 'ಶೂಟಿಂಗ್' ಮಾಡಿದ ಯಶ್! ಭೇಷ್ ಎಂದ ಸ್ಟಂಟ್ ನಿರ್ದೇಶಕ!
ನಟ ಯಶ್‌ರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂದು ಯಶ್ ಅಭಿಮಾನಿಗಳು, ಸಿನಿ ಪ್ರಿಯರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಯಶ್ ಈಗಾಗಲೇ 'ಶೂಟಿಂಗ್' ಶುರು ಮಾಡಿಬಿಟ್ಟಿದ್ದಾರೆ.
ಯಶ್ ಅಮೆರಿಕದಲ್ಲಿ 'ಶೂಟಿಂಗ್' ಮಾಡಿದ್ದಾರೆ. ಹಾಗೆಂದು ಇದು ಸಿನಿಮಾದ ಶೂಟಿಂಗ್ ಅಲ್ಲ. ಬದಲಿಗೆ ಗನ್ ಶೂಟಿಂಗ್.
ಅಮೆರಿಕದಲ್ಲಿರುವ ನಟ ಯಶ್ ಅಲ್ಲಿನ ಶೂಟಿಂಗ್ ಯಾರ್ಡ್ ಒಂದಕ್ಕೆ ತೆರಳಿ ಗುರಿಗಳಿಗೆ ಬಂದೂಕಿನಿಂದ ಗುಂಡಿಟ್ಟು ಉಡಾಯಿಸಿದ್ದಾರೆ. 'ಓಪನ್ ಗನ್ ಲೈಸೆನ್ಸ್' ಪಾಲಿಸಿ ಹೊಂದಿರುವ ಅಮೆರಿಕದಲ್ಲಿ ಶೂಟಿಂಗ್ ಯಾರ್ಡ್‌ಗಳು ಬಹಳ ಫೇಮಸ್ ಆಗಿದ್ದು, ಶೂಟಿಂಗ್ ಯಾರ್ಡ್‌ಗಳಲ್ಲಿ ನೀಡುವ ನಿಜ ಬಂದೂಕು ಬಳಸಿ ಎದುರಿಗೆ ಶೂಟ್ ಮಾಡಲೆಂದೇ ಇಟ್ಟಿರುವ ವಸ್ತುಗಳಿಗೆ ಗುರಿ ಇಟ್ಟು ತಮ್ಮ ನಿಖರತೆ ಪರೀಕ್ಷಿಸಬಹುದು.

ಕ್ಯಾಲಿಫೋರ್ನಿಯಾದಲ್ಲಿ ಯಶ್ 'ಶೂಟಿಂಗ್'
ನಟ ಯಶ್ ಅಮೆರಿಕದ ಕ್ಯಾಲಿಫೋರ್ನಿಯಾ ಬಳಿಕ ಮೂರ್‌ಪಾರ್ಕ್‌ನಲ್ಲಿನ ಶೂಟಿಂಗ್ ಯಾರ್ಡ್ ಒಂದಕ್ಕೆ ಭೇಟಿ ನೀಡಿದ್ದು, ಅಲ್ಲಿ ಕೆಲವು ಪರಿಣಿತ ಶೂಟರ್‌ಗಳ ಮಾರ್ಗದರ್ಶನದಲ್ಲಿ ಎದುರಿಗಿದ್ದ ಗುರಿಗಳನ್ನು ಸೆಕೆಂಡುಗಳಲ್ಲಿ ಉಡಾಯಿಸಿದ್ದಾರೆ. ಆಧುನಿಕ ಮಷಿನ್ ಗನ್ ಮಾದರಿಯ ಬಂದೂಕು ಬಳಸಿ ಯಶ್, ಫೈರಿಂಗ್ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

24 ಸೆಕೆಂಡ್‌ನಲ್ಲಿ ಹೊಡೆದುರುಳಿಸಿದ ಯಶ್!
ಪಕ್ಕಾ ಪರಿಣಿತ ಸೈನಿಕನಂತೆ ಕೇವಲ 24 ಸೆಕೆಂಡ್‌ಗಳಲ್ಲಿ ಮಷಿನ್ ಗನ್‌ನ ಒಂದು ಮ್ಯಾಗಜೈನ್ ಅನ್ನು ಖಾಲಿ ಮಾಡಿ ಗನ್ ಕೆಳಗಿಳಿಸಿದ್ದಾರೆ. ಯಶ್ ಹೊಡೆದ ಒಂದೂ ಬುಲೆಟ್ ಮಿಸ್ ಆಗದೆ ಗುರಿ ತಲುಪಿದ್ದು, ಯಶ್‌ರ ನಿಖರತೆ, ಬಂದೂಕಿನೊಂದಿಗಿನ ಅವರ ನೈಪುಣ್ಯತೆಗೆ ಅಲ್ಲಿನ ಶೂಟಿಂಗ್ ಮಾರ್ಗದರ್ಶಿಗಳೇ ಶಾಕ್ ಆಗಿ ತಲೆದೂಗಿದ್ದಾರೆ. ಚಪ್ಪಾಳೆ ಹೊಡೆದು ಅಭಿನಂದಿಸಿದ್ದಾರೆ. ಸ್ವತಃ ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರ್ರಿ ಸಹ ಯಶ್‌ರ ವೇಗ ಮತ್ತು ನಿಖರತೆಗೆ ಚಪ್ಪಾಳೆ ಹೊಡೆದಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಯಶ್!
ಟ್ವಿಟ್ಟರ್‌ನಲ್ಲಿ ತಮ್ಮ ಈ ಸಾಹಸದ ವಿಡಿಯೋ ಹಂಚಿಕೊಂಡಿರುವ ಯಶ್, ''ಗುರಿ ತಲುಪಲು ಒಂದು ಮಾರ್ಗ ಇದ್ದೇ ಇರುತ್ತದೆ ಆದರೆ ಆ ಮಾರ್ಗವನ್ನು ಗುರುತಿಸುವುದೇ ಸವಾಲು. ಜೆಜೆ ಮೆರ್ರಿಗೆ ಧನ್ಯವಾದ, ಇದೊಂದು ಅದ್ಭುತವಾದ ದಿನ. ಆದರೆ ಮುಂದಿನ ಬಾರಿ ಕೊಲಾಶ್ನಿಕೋವ್ ಬಂದೂಕು ನೀಡಿ'' ಎಂದಿದ್ದಾರೆ. 'ಕೆಜಿಎಫ್ 2' ಸಿನಿಮಾದಲ್ಲಿ ಕೊಲಾಶ್ನಿಕೋವ್ ಬಂದೂಕಿನ ಒಂದೊಳ್ಳೆ ಮಾಸ್ ಸೀನ್ ಇದೆ. ಅದರ ರೆಫೆರೆನ್ಸ್ ನೀಡಿ ಯಶ್ ಹೀಗೆ ಟ್ವೀಟ್ ಮಾಡಿದ್ದಾರೆ.

ಹಾಲಿವುಡ್ ನಿರ್ದೇಶಕನ ಜೊತೆ ಜೆಜೆ ಪೆರ್ರಿ
ಅಂದಹಾಗೆ ಟ್ವಿಟ್ಟರ್‌ನಲ್ಲಿ ಅವರು ಧನ್ಯವಾದ ಹೇಳಿರುವ ಜೆಜೆ ಪೆರ್ರಿ ಹಾಲಿವುಡ್‌ನ ಖ್ಯಾತ ಸ್ಟಂಟ್ ನಿರ್ದೇಶಕ. ಅವರೊಟ್ಟಿಗೆ ಯಶ್ ಅಮೆರಿಕದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಹುಟ್ಟಿಕೊಂಡಿದೆ. ಯಾವುದಾದರೂ ಸಿನಿಮಾದ ಬಗ್ಗೆ ಮಾತುಕತೆ ನಡೆಸಲು ತೆರಳಿದ್ದಾರೆಯೇ? ಅಥವಾ ಹಾಲಿವುಡ್ ಸಿನಿಮಾದಲ್ಲೇನಾದರೂ ಯಶ್ ನಟಿಸುತ್ತಿದ್ದಾರೆಯೇ? ಅಥವಾ ತಮ್ಮ ಕನ್ನಡ ಸಿನಿಮಾಕ್ಕೆ ಹಾಲಿವುಡ್ ಸ್ಟಂಟ್ ಮನ್ ಅನ್ನು ಕರೆತರುತ್ತಿದ್ದಾರೆಯೇ? ಹಲವು ಅನುಮಾನಗಳು ಗರಿಗೆದರಿವೆ.


Click it and Unblock the Notifications











