ಈ ವರ್ಷ ಚಿತ್ರಮಂದಿರಕ್ಕೆ ಬರದೇ ನಿರಾಸೆ ಮೂಡಿಸಿದ ಸ್ಯಾಂಡಲ್‌ವುಡ್ ಟಾಪ್ ಹೀರೊಗಳಿವರು
ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಬಹಳ ಜನರ ಬೇಡಿಕೆ. ಟಾಪ್ ಹೀರೊಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಾರೆ. ಇದರಿಂದ ಚಿತ್ರರಂಗ ಬೆಳೆಯುತ್ತದೆ. ಆದರೆ ಕನ್ನಡದ ಕೆಲ ಸ್ಟಾರ್ ನಟರು ಸಿನಿಮಾ ಮಾಡಿ ಬಿಡುಗಡೆ ಮಾಡಲು ತಡ ಮಾಡುತ್ತಲೇ ಇದ್ದಾರೆ.
ಅಂತೂ ಇಂತೂ ಮತ್ತೊಂದು ವರ್ಷ ಮುಗಿದೇ ಹೋಯ್ತು. ಈ ವರ್ಷ 200ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಆದರೆ ಕನ್ನಡದ ಟಾಪ್ ಹೀರೊಗಳು ಪ್ರೇಕ್ಷಕರ ಮುಂದೆ ಬರಲೇ ಇಲ್ಲ. ಕೆಲವರ ಸಿನಿಮಾಗಳು ಎರಡ್ಮೂರು ವರ್ಷಗಳಿಂದ ಬಿಡುಗಡೆ ಆಗಲಿಲ್ಲ ಎನ್ನುವುದು ವಿಪರ್ಯಾಸ. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಆದರೆ 'KGF'-2 ಬಳಿಕ ಈವರೆಗೆ ಯಶ್ ನಟಿಸಿದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ.

ರಕ್ಷಿತ್ ಶೆಟ್ಟಿ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಿಢೀರನೆ ಸೈಲೆಂಟ್ ಆಗಿಬಿಟ್ಟಿದ್ದಾರೆ. 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಮಾಡಿ 4 ವರ್ಷಗಳ ಕಳೆದರೂ ಈವರೆಗೆ ಯಾವುದೇ ಅಪ್‌ಡೇಟ್ ಇಲ್ಲ. ಸ್ಕ್ರಿಪ್ಟ್ ಕೆಲಸದಲ್ಲೇ ರಕ್ಷಿತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಒಂದು ವೇಳೆ ಈಗ ಸಿನಿಮಾ ಶುರುವಾದರೂ ತೆರೆಗೆ ಬರಲು 2 ವರ್ಷ ಬೇಕಾಗಬಹುದು. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳಲ್ಲಿ ಕೊನೆಯದಾಗಿ ಸಿಂಪಲ್ ಸ್ಟಾರ್ ನಟಿಸಿದ್ದರು.
ಧ್ರುವ ಸರ್ಜಾ
ಕಳೆದೊಂದು ವರ್ಷದಿಂದ 'ಕೆಡಿ' ಸಿನಿಆ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವುದು ಖುದ್ದು ಚಿತ್ರತಂಡಕ್ಕೂ ಗೊತ್ತಿಲ್ಲ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ತಡವಾಗುತ್ತಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಚಿತ್ರದ ಬಜೆಟ್ 100 ಕೋಟಿ ದಾಟಿದೆ ಎನ್ನಲಾಗ್ತಿದೆ. ಬೇರೆ ಸಿನಿಮಾಗಳನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿರುವ ಕೆವಿಎನ್ ಸಂಸ್ಥೆ 'ಕೆಡಿ' ಚಿತ್ರದ ವಿಚಾರದಲ್ಲಿ ಮೌನವಾಗಿರುವಂತೆ ಕಾಣ್ತಿದೆ. ಕಾದು ಕಾದು ಸುಸ್ತಾದ ಧ್ರುವ ಸರ್ಜಾ ಹೊಸ ಸಿನಿಮಾ ಆರಂಭಿಸಿದ್ದಾರೆ.

ಧನಂಜಯ್
ವರ್ಷಕ್ಕೆ ಎರಡೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದ ಧನಂಜಯ್ ಇತ್ತೀಚೆಗೆ ಕೊಂಚ ಸ್ಪೀಡ್ ತಗ್ಗಿಸಿದ್ದಾರೆ. ಇದೇ ವರ್ಷ ಹೊಸಬಾಳಿಗೆ ಕಾಲಿಟ್ಟ ಧನು ಎರಡ್ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಡಾಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದ 'ವಿದ್ಯಾಪತಿ' ಸಿನಿಮಾ ಮಾತ್ರ ಬಿಡುಗಡೆ ಆಗಿತ್ತು. ಉತ್ತರಕಾಂಡ, ಜಿಂಗೊ, '666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ಚಿತ್ರಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಮುಂದಿನ ವರ್ಷ 2 ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
ದುನಿಯಾ ವಿಜಯ್
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಈ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಜನವರಿ 23ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಹಾಗಾಗಿ ಈ ವರ್ಷ ವಿಜಿ ನಟನೆಯ ಯಾವುದೇ ಸಿನಿಮಾ ತೆರೆಗೆ ಬರ್ತಿಲ್ಲ. ಕಳೆದ ವರ್ಷ 'ಭೀಮ' ಚಿತ್ರವನ್ನು ನಿರ್ದೇಶಿಸಿ ನಟಿಸಿ ವಿಜಯ್ ಗೆದ್ದಿದ್ದರು. 'ಸಿಟಿಲೈಟ್ಸ್' ಮತ್ತೊಂದು ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ ಬಂದ 'ಮಾರುತ' ಚಿತ್ರದ ವಿಶೇಷ ಪಾತ್ರದಲ್ಲಿ ಅವರು ಮಿಂಚಿದ್ದರು.
ಶ್ರೀಮುರಳಿ
ರೋರಿಂಗ್ ಸ್ಟಾರ್ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಬಹಳ ಚೂಸಿಯಾಗಿದ್ದಾರೆ. ಲೇಟ್ ಆದರೂ ಪರವಾಗಿಲ್ಲ ಮಾಡಿದ್ರೆ ಒಳ್ಳೆ ಸಿನಿಮಾ ಮಾತ್ರ ಮಾಡ್ತೀನಿ ಎನ್ನುತ್ತಿದ್ದಾರೆ. ಕಳೆದ ವರ್ಷ 'ಬಘೀರ' ಆಗಿ ಶ್ರೀಮುರಳಿ ಅಬ್ಬರಿಸಿ ಗೆದ್ದಿದ್ದರು. ಸದ್ಯ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಮತ್ತೆ ತೆರೆಮೇಲೆ ಬರಲಿದ್ದಾರೆ.
ಗಣೇಶ್
'ಕೃಷ್ಣಂ ಪ್ರಣಯಸಖಿ' ರೀತಿಯ ಸೆನ್ಸೇಷನಲ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಗಣೇಶ್ ಮತ್ತೆ ಪ್ರೇಕ್ಷಕರ ಮುಂದೆ ಬರಲಿಲ್ಲ. ಒಂದೂವರೆ ವರ್ಷದಿಂದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. 'ಯುವರ್ಸ್ ಸಿನ್ಸಿಯರ್ಲಿ ರಾಮ್' ಹಾಗೂ 'ಪಿನಾಕ' ಎಂಬ ಎರಡು ಸಿನಿಮಾಗಳಲ್ಲಿ ಗೋಲ್ಡನ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಮುಂದಿನ ವರ್ಷ 2 ಸಿನಿಮಾ ಬಿಡುಗಡೆ ಆದ್ರು ಅಚ್ಚರಿ ಪಡಬೇಕಿಲ್ಲ.
ನೀನಾಸಂ ಸತೀಶ್
ಅದ್ಯಾಕೋ ಇತ್ತೀಚೆಗೆ ತೆರೆಮೇಲೆ ನೀನಾಸಂ ಸತೀಶ್ ಮ್ಯಾಜಿಕ್ ನಡೀತಿಲ್ಲ. ಆದರೆ 'ದಿ ರೈಸ್ ಆಫ್ ಅಶೋಕ' ಹಾಗೂ 'ಅಯೋಗ್ಯ- 2' ಚಿತ್ರಗಳ ಮೂಲಕ ಮುಂದಿನ ವರ್ಷ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಜಗ್ಗೇಶ್
'ತೋತಾಪುರಿ-1' ಹಾಗೂ ಪಾರ್ಟ್-2 ಹಾಗೂ 'ರಂಗನಾಯಕ' ಸಿನಿಮಾಗಳ ಸೋಲಿನ ಬಳಿಕ ನಟ ಜಗ್ಗೇಶ್ ಕೂಡ ಒಳ್ಳೆ ಸಿನಿಮಾ ಮಾಡುಬವ ಹಠಕ್ಕೆ ಬಿದ್ದಿದ್ದಾರೆ. ಹಾಗಾಗಿ ಕೊಂಚ ತಡಮಾಡುತ್ತಿದ್ದಾರೆ. ಈ ವರ್ಷ ನವರಸ ನಾಯಕನ ಯಾವುದೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿಲ್ಲ.
ರಮೇಶ್ ಅರವಿಂದ್
ಪ್ರತಿ ವರ್ಷ ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದ ರಮೇಶ್ ಅರವಿಂದ್ ಕೂಡ ಈ ಬೆಳ್ಳಿ ಪರದೆಯಿಂದ ದೂರ ಉಳಿದಿದ್ದಾರೆ. 'ಯುವರ್ಸ್ ಸಿನ್ಸಿಯರ್ಲಿ ರಾಮ್' ಚಿತ್ರದಲ್ಲಿ ಗಣೇಶ್ ಜೊತೆ ರಮೇಶ್ ನಟಿಸುತ್ತಿದ್ದಾರೆ.


Click it and Unblock the Notifications











