ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳ ಮಹಾಪೂರ
ಭಾರತ ಕ್ರಿಕೆಟ್ ತಂಡ ಎರಡನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿದಿದೆ. ಬಾರ್ಬಡೋಸ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದು ಬೀಗಿದೆ. ಭಾರತ ಕ್ರಿಕೆಟ್ ತಂಡದ ಸಾಧನೆಗೆ ಅಭಿನಂದನೆಯ ಮಹಾಪೂರವೇ ಹರಿದು ಬರ್ತಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಪೇರಿಸಿತು. ಈ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯದ ಕೆಲ ಅದ್ಭುತ ಕ್ಷಣಗಳು ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಬೌಂಡರಿ ಲೈನ್‌ನಲ್ಲಿ ಸೂರ್ಯಕುಮಾರ್ ಹಿಡಿದ ಕ್ಯಾಚ್ ಅಂತೂ ಮರೆಯೋಕೆ ಸಾಧ್ಯವಿಲ್ಲ.

ಟೀಂ ಇಂಡಿಯಾ ಸಾಧನೆಗೆ ಕನ್ನಡ ಸಿನಿಮಾ ತಾರೆಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ತಂಡವನ್ನು ಕೊಂಡಾಡುತ್ತಿದ್ದಾರೆ. "ಇತಿಹಾಸದಲ್ಲಿ ಕೆತ್ತಿದ ಗೆಲುವು.. T20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಜೈ ಹಿಂದ್" ಎಂದು ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿದ್ದಾರೆ.
"ಎಂತಹ ವಿದಾಯ ರಾಹುಲ್ ದ್ರಾವಿಡ್ ಸರ್.. ಹೆಮ್ಮೆ ಹೆಮ್ಮೆ ಹೆಮ್ಮೆ ಸರ್. ಉತ್ತುಂಗದಲ್ಲಿ ಘನತೆ. ಅಭಿನಂದನೆಗಳು ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ನಮ್ಮ ಹೀರೊ ಆಗಿದ್ದಕ್ಕೆ ಅಭಿನಂದನೆ. ಹಾಗೂ ಸೂರ್ಯಕುಮಾರ್ ಆ ಅದ್ಭುತ ಕ್ಯಾಚ್‌ಗಾಗಿ ನಿಮಗೂ ಅಭಿನಂದನೆ. ಬಹಳ ಖುಷಿಯಾಗುತ್ತಿದೆ ಎಂದು ನಟ ಸುದೀಪ್ ಬರೆದುಕೊಂಡಿದ್ದಾರೆ.
"ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು" ಎಂದು ನಟ ಶಿವರಾಜ್‌ಕುಮಾರ್ ಇಂಟ್ರೆಸ್ಟಿಂಗ್ ಆಗಿ ಪೋಸ್ಟ್ ಮಾಡಿ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ರಕ್ಷಿತಾ ಪ್ರೇಮ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ 'ಕಲ್ಕಿ 2898 AD' ಸಿನಿಮಾ ನೋಡಿ ಕೊಂಡಾಡಿದ್ದರು. ಇದೀಗ ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಇವತ್ತು ಬಹಳ ಒಳ್ಳೆಯ ದಿನ. ಒಂದು ಅದ್ಭುತ ಸಿನಿಮಾವನ್ನು ವೀಕ್ಷಿಸಿದೆ. ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದೆ. ಅಭಿನಂದನೆಗಳು ಟೀಂ ಇಂಡಿಯಾ ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ.
ನಟ ಕಿಚ್ಚ ಸುದೀಪ್ ಆಪ್ತರ ಜೊತೆ ತಮ್ಮ ನಿವಾಸದಲ್ಲೇ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಸಾಥ್ ನೀಡಿದ್ದಾರೆ. ಪಂದ್ಯದ ಬಳಿಕ ಎಲ್ಲರೂ ಜೈಕಾರ ಹಾಕಿ ಸಂಭ್ರಮಿಸಿರುವ ವೀಡಿಯೋವನ್ನು ವಿನಯ್ ಗೌಡ ಹಂಚಿಕೊಂಡಿದ್ದಾರೆ.
"ಭಾರತ ವಿಶ್ವಕಪ್ ಗೆಲ್ಲುವುದನ್ನು ನೋಡುವ ಭಾಗ್ಯ ಸಿಕ್ಕಿತ್ತು. ನನ್ನ ಆರಾಧ್ಯ ದೈವ ಸುದೀಪ್ ಸರ್ ಜೊತೆ ಇದನ್ನು ಅನುಭವಿಸಿದ್ದು ಇನ್ನಷ್ಟು ವಿಶೇಷವಾಗಿತ್ತು. ಈ ಅದ್ಭುತ ಕ್ಷಣವನ್ನು ಅವರೊಂದಿಗೆ ಹಂಚಿಕೊಂಡಿದ್ದು ಅವಿಸ್ಮರಣೀಯ. ಏನೇ ಆಗಲಿ, ಕೊನೆಯವರೆಗೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಸರ್" ಎಂದು ವಿನಯ್ ವೀಡಿಯೋ ಹಂಚಿಕೊಂಡಿದ್ದಾರೆ.


Click it and Unblock the Notifications











