ಯಶ್ ಮೊದಲು, ಯಶ್ ಕೊನೆ.. 'KGF' ವದಂತಿಗೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಟಿಸಿದ 'KGF' ಸರಣಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಚಾಪ್ಟರ್-3 ನೋಡೊಕೆ ಸಿನಿರಸಿಕರು ಕಾಯ್ತಿದ್ದಾರೆ. ಇನ್ನು ಸಿನಿಮಾ ಬಗ್ಗೆ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ಹೊಂಬಾಳೆ ಫಿಲ್ಮ್ಸ್‌ನ ಸಹ-ಸಂಸ್ಥಾಪಕ ಚೆಲುವೇಗೌಡ ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂಸ್ಥೆಯ ಸಿನಿಮಾಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
'KGF' ಚಿತ್ರಕ್ಕೆ ಯಶ್ ಮೊದಲ ಆಯ್ಕೆ ಆಗಿರಲಿಲ್ಲ. ರಾಕಿಭಾಯ್ ಪಾತ್ರಕ್ಕಾಗಿ ಚಿತ್ರತಂಡ ಬೇರೆ ಕಲಾವಿದರನ್ನು ಸಂಪರ್ಕಿಸಿತ್ತು ಎನ್ನುವ ಊಹಾಪೋಹ, ವದಂತಿ ಹರಿದಾಡಿತ್ತು. ಈ ಬಗ್ಗೆ ಚೆಲುವೇಗೌಡ ಮಾತನಾಡಿ "ನಮ್ಮ ಸಂಸ್ಥೆ ಕೆಲಸ ಮಾಡುತ್ತಿರುವ ಬೇರೆ ನಟರಿಗಿಂತ ಯಶ್ ಅವರೊಂದಿಗೆ ದೀರ್ಘಕಾಲದ ಪಾಲುದಾರಿಕೆ ಹೊಂದಿದ್ದೇವೆ. ಯಶ್ ನಮ್ಮ ಕುಟುಂಬದ ಭಾಗ. ಯಶ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು 'KGF' ಚಿತ್ರ ಮಾಡಿದ್ದೆವು. ನಮಗೆ, ಅವರು ಯಾವಾಗಲೂ ನಮ್ಮ ರಾಕಿ ಭಾಯ್. 'KGF'- 1 ಚಿತ್ರದ ಬೇರೆ ಪಾತ್ರಗಳಿಗಾಗಿ ನಾವು ಬೇರೆ ಚಿತ್ರರಂಗದ ಸ್ಟಾರ್ ನಟರನ್ನು ಸಂಪರ್ಕಿಸಿದ್ದೆವು. ಆದರೆ ಚಿತ್ರಕ್ಕೆ ಯಶ್ ಮೊದಲ ಆಯ್ಕೆಯಲ್ಲ ಎನ್ನುವುದೆಲ್ಲಾ ಸುಳ್ಳು. ಅಂತಹ ಯಾವುದೇ ಹೇಳಿಕೆ ನಾವು ಕೊಟ್ಟಿಲ್ಲ" ಎಂದಿದ್ದಾರೆ.

ಚೆಲುವೆ ಗೌಡ ಮಾತು ಮುಂದುವರೆಸಿ 'KGF' ಹಾಗೂ 'ಕಾಂತಾರ' ಚಿತ್ರಗಳ ಮೂಲಕ ಹೇಗೆ ಕನ್ನಡ ಚಿತ್ರರಂಗವನ್ನು ಪರಭಾಷಿಕರು ತಿರುಗಿ ನೋಡುವಂತಾಯಿತು ಎನ್ನುವುದನ್ನು ತಿಳಿಸಿದ್ದಾರೆ. ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಪರಭಾಷಾ ಕಲಾವಿದರನ್ನು ಕೇಳಿದಾಗ ಏನೇನೊ ಸಬೂಬು ಕೊಡುತ್ತಿದ್ದರು. ನಟಿಸೋಕೆ ಒಪ್ಪಲಿಲ್ಲ. ಈ ಕನ್ನಡ ಚಿತ್ರಗಳು ಎಲ್ಲಿ ಓಡುತ್ತವೆ? ಎನ್ನುತ್ತಿದ್ದರು. ಆ ಸಮಯದಲ್ಲಿ, ಕರ್ನಾಟಕದ ಹೊರಗೆ ಕನ್ನಡ ಚಿತ್ರಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಡಾ. ರಾಜ್‌ಕುಮಾರ್‌ರಂತ ಕೆಲವು ನಟರ ಹೆಸರುಗಳು ಅವರಿಗೆಲ್ಲಾ ಗೊತ್ತಿತ್ತು. ಈಗ ಅದು ಬದಲಾಗಿದೆ" ಎಂದು ವಿವರಿಸಿದ್ದಾರೆ.
2018ರಲ್ಲಿ 'KGF' ಚಾಪ್ಟರ್-1 ಸಿನಿಮಾ ತೆರೆಗೆ ಬಂದಿತ್ತು. 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿತ್ತು. ಸೀಕ್ವೆಲ್ ನೋಡಲು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಕೂರುವಂತೆ ಮಾಡಿತ್ತು. ಬಳಿಕ ಬಂದ ಚಾಪ್ಟರ್-2 ಹೊಸ ಇತಿಹಾಸ ನಿರ್ಮಿಸಿತು. 1200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತು. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು.

ಈ ಚಿತ್ರದ ಮೂಲಕ ಸಾಕಷ್ಟು ಜನರಿಗೆ ನೇಮು ಫೇಮು ಲಭಿಸಿತ್ತು. ಯಶ್ ಅವರ ಜೀವನವೇ ಬದಲಾಗಿಬಿಡ್ತು. ಹೊಂಬಾಳೆ ಸಂಸ್ಥೆಗೂ ದೊಡ್ಡ ಗೆಲುವು ಸಿಕ್ಕಿತ್ತು. ಚಾಪ್ಟರ್- 3 ಮಾಡುವುದಾಗಿಯೂ ಚಿತ್ರತಂಡ ಘೋಷಿಸಿದೆ. ಆದರೆ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಯಶ್ ಸದ್ಯ 'ರಾಮಾಯಣ ಹಾಗೂ 'ಟಾಕ್ಸಿಕ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಇಬ್ಬರೂ ಕೈ ಜೋಡಿಸಲಿದ್ದಾರೆ.
ಮತ್ತೊಂದು ಕಡೆ 'ಕಾಂತಾರ- 1' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದೆ. ರಿಷಬ್ ಶೆಟ್ಟಿ ಚಿತ್ರ ನಿರ್ದೇಶಿಸಿ ನಟಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.


Click it and Unblock the Notifications











