ಧನಂಜಯ್ ಗೆ ಜೋಡಿಯಾದ 'ಪದವಿ ಪೂರ್ವ' ನಟಿ ಯಶ ಶಿವಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಶಿವಪ್ಪ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರೀಕರಣ ಪ್ರಾರಂಭ ಮಾಡಿದ್ದ ಶಿವಪ್ಪತಂಡ ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.
ಚಿತ್ರದಲ್ಲಿ ಶಿವಣ್ಣ ಜೊತೆಗೆ ಡಾಲಿ ಧನಂಜಯ್ ಮತ್ತು ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ತಮಿಳಿನ ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ನಾಯಕಿ ಯಾರು ಎನ್ನುವುದನ್ನು ಸಿನಿಮಾತಂಡ ಬಹಿರಂಗ ಪಡಿಸಿತ್ತು. ಶಿವಣ್ಣ ಜೊತೆ ನಾಯಕಿಯಾಗಿ ಅಂಜಲಿ ನಟಿಸುವ ಮೂಲಕ ಅನೇಕ ವರ್ಷಗಳ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.
ಇದೀಗ ಸಿನಿಮಾಗೆ ಮತ್ತೋರ್ವ ನಾಯಕಿ ಫಿಕ್ಸ್ ಆಗಿದ್ದಾರೆ. ನಟ ಧನಂಜಯ್ ಗೆ ಜೋಡಿಯಾಗಿ ಯುವ ನಟಿ ಯಶ ಶಿವಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. 'ಪದವಿ ಪೂರ್ವ' ಸಿನಿಮಾ ಮೂಲಕ ಯಶ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಯಶ ಎರಡನೇ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದು, ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.

ಇನ್ನು ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಬಗ್ಗೆ ನಿರ್ದೇಶಕ ವಿಜಯ್ ಮಿಲ್ಟನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 8 ದಿನಗಳ ಶೂಟಿಂಗ್ ನಲ್ಲಿ 23 ಸೀನ್ ಗಳನ್ನು ಚಿತ್ರೀಕರಣ ಮಾಡಿದ್ದೇವೆ. ಇಡೀ ಚಿತ್ರತಂಡಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಅಂದಹಾಗೆ 'ಶಿವಪ್ಪ' ಸಿನಿಮಾ ನಿರ್ದೇಶಕ ವಿಜಯ್ ಮಿಲ್ಟನ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿದೆ. ಟಗರು ಸಿನಿಮಾ ಬಳಿಕ ಶಿವಣ್ಣ ಮತ್ತು ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇನ್ನು ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ಮತ್ತು ಹಿರಿಯ ನಟಿ ಉಮಾಶ್ರೀ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.


Click it and Unblock the Notifications











