ಯಶ್ ಬರೆದ ಪತ್ರಕ್ಕಿಂತ ಅದರಲ್ಲಿರುವ ಚಿತ್ರದ ಬಗ್ಗೆ ಭಾರೀ ಚರ್ಚೆ; ಅಷ್ಟಕ್ಕೂ ಏನಿದರ ಅರ್ಥ?
ರಾಕಿಂಗ್ ಸ್ಟಾರ್ ಯಶ್ 38ನೇ ವರ್ಷದ ಹುಟ್ಟುಹಬ್ಬ ಹತ್ತಿರವಾಗುತ್ತಿದೆ. ಆದರೆ ಅಷ್ಟರಲ್ಲಿ ರಾಕಿಭಾಯ್ ಪತ್ರ ಬರೆದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಹುಟ್ಟುಹಬ್ಬದ ದಿನ ನಾನೂ ಊರಿನಲ್ಲಿ ಇರಲ್ಲ, ಆದಷ್ಟು ಬೇಗ ನಿಮ್ಮನ್ನು ಭೇಟಿ ಆಗುತ್ತೇವೆ ಎಂದು ತಿಳಿಸಿದ್ದಾರೆ. ಸದ್ಯ ಆ ಪತ್ರ ವೈರಲ್ ಆಗುತ್ತಿದೆ. ಅದರಲ್ಲಿರುವ ಒಂದು ಚಿತ್ರ ಗಮನ ಸೆಳೆಯುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನೆಚ್ಚಿನ ನಟನನ್ನು ನೋಡಬೇಕು, ಹುಟ್ಟುಹಬ್ಬದ ದಿನ ಕೇಕ್ ಕತ್ತರಿಸಿ, ಸಿಹಿ ಹಂಚಿ ಕೈ ಕುಲುಕಿ ಶುಭ ಕೋರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕೆಲ ದಿನಗಳ ಹಿಂದೆ ತಮ್ಮ ನಿವಾಸದ ಬಳಿ ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನು ಭೇಟಿ ಆಗಿದ್ದರು.

ಸದ್ಯ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಸುದೀರ್ಘ ಶೆಡ್ಯೂಲ್ ಮುಗಿಸಿ ಬಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ವಾಪಸ್ ಆಗಿದ್ದ ಯಶ್ ಮೊದಲಿಗೆ ಮಾಜಿ ಸಿಎಂ ದಿವಂಗತ ಎಸ್. ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದರು. ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಸಿನಿಮಾ ವೀಕ್ಷಿಸಿದ್ದರು.
ಕಳೆದ ವರ್ಷ ಯಶ್ ಹುಟ್ಟುಹಬ್ಬದ ವೇಳೆ ಬ್ಯಾನರ್ ಕಟ್ಟಲು ಹೋಗಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಬಾರಿ ಕೂಡ ಅದ್ಧೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

"ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ" ಎಂದು ಯಶ್ ಪತ್ರದಲ್ಲಿ ತಿಳಿಸಿದ್ದಾರೆ.
ಯಶ್ ಪೋಸ್ಟ್ ಮಾಡಿರುವ ಪತ್ರ ವೈರಲ್ ಆಗುತ್ತಿದ್ದು ಅದರಲ್ಲಿರುವ ಚಿಹ್ನೆಯ ಬಗ್ಗೆ ಭಾರೀ ಚರ್ಚೆ ನಡೀತಿದೆ. ಏನಿದು ಲೋಗೋ? ಏನಿದರ ಅರ್ಥ? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಅಭಿಮಾನಿಗಳು ಅದನ್ನು ಡಿಕೋಡ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಏನೋ ಅರ್ಥ ಇದೆ ಸುಖಾಸುಮ್ಮನೆ ಈ ರೀತಿ ಲೋಗೋ ಡಿಸೈನ್ ಮಾಡಿಸಿರುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಗಂಡಭೇರುಂಡ ಪಕ್ಷಿಯ ಚಿಹ್ನೆ ದೊಡ್ಡದಾಗಿ ಕಾಣಿಸುತ್ತಿದೆ. ಇನ್ನುಳಿದಂತೆ ಒಂದು ಕೋನದಲ್ಲಿ 38 ಎನ್ನುವ ಅರ್ಥ ಬರುವಂತೆ ಇದೆ. ಇನ್ನು ಆ ಚಿನ್ಹೆ ತ್ರಿಶೂಲದ ರೀತಿಯೂ ಗೋಚರಿಸುತ್ತಿದೆ. 'ಟಾಕ್ಸಿಕ್' ಚಿತ್ರಕ್ಕೆ ಸಂಬಂಧಪಟ್ಟಿದ್ದು ಇದು. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ತಮ್ಮ ಮಾನ್‌ಸ್ಟರ್ ಮೈಂಡ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಲೋಗೋದಲ್ಲಿ ಪಕ್ಷಿ ರೆಕ್ಕೆಗಳ ಚಿತ್ರ ಇದೆ. ಇನ್ನು ಮಾನ್‌ಸ್ಟರ್ ಮೈಂಡ್ಸ್ ಲೋಗೋದಲ್ಲಿ ಎಮ್ಮೆಯ ತಲೆಬುರುಡೆ ಆಕಾರದ ಚಿತ್ರ ಇದೆ. ಹಾಗಾಗಿ ಎದು ಎರಡನ್ನೂ ಸೇರಿಸಿ ಹೊಸ ರೀತಿಯಲ್ಲಿ ಗಂಡಭೇರುಂಡ ಪಕ್ಷಿ ಚಿತ್ರದ ಲೋಗೋ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಯಶ್ ಈ ಬಾರಿ 38ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹಾಗಾಗಿ ಅದನ್ನು ಅರ್ಥೈಸಲು ಒಂದು ಕೋನದಲ್ಲಿ 38 ಸಂಖ್ಯೆ ಕಾಣುವಂತೆ ಡಿಸೈನ್ ಮಾಡಿದ್ದಾರೆ ಎನ್ನುವುದು ಕೆಲವರ ವಾದ.
ಗಂಡಭೇರುಂಡ ಪಕ್ಷಿಯ ಕಾಲಡಿಯಲ್ಲಿ ಡ್ರ್ಯಾಗನ್ ಚಿತ್ರವೂ ಇದೆ. ಈ ಹಿಂದೆ ಗೋವಾದಲ್ಲಿ ಯಶ್ ಕ್ಲಿಕ್ಕಿಸಿಕೊಂಡಿದ್ದ ಫೋಟೊದಲ್ಲಿ ಅವರ ಕೈಯಲ್ಲಿದ್ದ ಟ್ಯಾಟೂ ವೈರಲ್ ಆಗಿತ್ತು. ಅದರಲ್ಲಿ ಕೂಡ ಡ್ರ್ಯಾಗನ್ ಚಿತ್ರ ಕಂಡಿತ್ತು. ಅದಕ್ಕೂ 'ಟಾಕ್ಸಿಕ್' ಚಿತ್ರದ ಕಥೆಗೆ ಲಿಂಕ್ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು. ಸದ್ಯ ಯಶ್ ಬರೆದ ಪತ್ರದಲ್ಲಿರುವ ಚಿತ್ರ ಇದೆಲ್ಲವರನ್ನು ನೆನಪಿಸುತ್ತಿದೆ. ಹಾಗಾಗಿ ಇದು 'ಟಾಕ್ಸಿಕ್' ಸಿನಿಮಾಗೆ ಸಂಬಂಧಿಸಿ ಲೋಗೊ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











