ದೀಪಿಕಾ ದಾಸ್ ನನ್ನ ಮಗಳು, ನಾನು ಮಾತನಾಡಿದರೆ ಅವಳಿಗೆ ತೊಂದರೆ ನಮಗಲ್ಲ- ಯಶ್ ತಾಯಿ ಪುಷ್ಪಾ
ಯಶ್ ಯಶೋಗಾಥೆಯ ಹಿಂದೆ ಕೇವಲ ರಾಧಿಕಾ ಪಂಡಿತ್ ಅವರ ತ್ಯಾಗ ಮತ್ತು ಶ್ರಮ ಮಾತ್ರ ಇಲ್ಲ. ಅವರ ಈ ಬೆಳವಣಿಗೆಯಲ್ಲಿ ಅವರ ತಾಯಿಯ ಪಾತ್ರ ಕೂಡ ಇದೆ. ಯಶ್ ಅವರ ಆರಂಭಿಕ ದಿನಗಳಲ್ಲಿ ತಮ್ಮ ಮಗನ ಕನಸುಗಳಿಗೆ ನೀರೆರೆದು ಪೋಷಿಸಿದವರು ಪುಷ್ಪಾ. ಇದೆಲ್ಲದರ ಪರಿಣಾಮ ಇವತ್ತು ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಲಿವುಡ್‌ಗೆ ಗಾಳ ಬೀಸಿದ್ದಾರೆ.
ಜಗತ್ತೇ ತಿರುಗಿ ನೋಡಬೇಕೆಂಬ ಉದ್ದೇಶದಿಂದ ''ಟಾಕ್ಸಿಕ್'' ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಆದರೆ.. ಯಶ್ ತಮ್ಮ ಮೊದಲ ಚಿತ್ರದಲ್ಲಿ ಪಡೆಯದ ಪ್ರಚಾರವನ್ನು ಯಶ್ ಅವರ ತಾಯಿ ಪುಷ್ಪಾ ತಮ್ಮ ಮೊದಲ ಚಿತ್ರ ಕೊತ್ತಲವಾಡಿಯಲ್ಲಿ ಪಡೆದಿದ್ದಾರೆ.

''ಕೊತ್ತಲವಾಡಿ'' ಬಾಕ್ಸಾಫೀಸ್‌ನಲ್ಲಿ ಗೆಲ್ತಾ..? ಸೋಲ್ತಾ..? ಅದು ಸೆಕೆಂಡರಿಯಾದರೂ ಇವತ್ತು ಪುಷ್ಪಾ ಅವರ ಕುರಿತು ಕೇವಲ ರಾಜ್ಯ ಮಾತ್ರವಲ್ಲ ದೇಶ ಕೂಡ ಮಾತನಾಡುತ್ತಿದೆ. ಇವರ ಹೇಳಿಕೆಗಳು ಕ್ಷಣಾರ್ಧದಲ್ಲಿಯೇ ವೈರಲ್ ಆಗುತ್ತವೆ. ಯೂಟ್ಯೂಬರ್‌ಗಳ ಪಾಲಿಗಂತೂ ಪುಷ್ಪಾ ಸದ್ಯ ಸಬ್‌ಸ್ಕೈಬರ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಮ್ಯಾಜಿಕ್ ಸ್ಟಿಕ್ ಇದ್ದಂತೆ. ಇಂಥಾ ಪುಷ್ಪಾ ಸದ್ಯ ದೀಪಿಕಾ ದಾಸ್ ಕುರಿತು ಮತ್ತೊಮ್ಮೆ ಮಾತನಾಡಿದ್ದಾರೆ. ಮನೆಯ ವಿಚಾರ ಮಾತನಾಡಿದರೆ ಅವಳಿಗೆ ಸಮಸ್ಯೆಯಾಗುತ್ತೆ ಎಂದು ಹೇಳಿದ್ಧಾರೆ.
ಈ ಕುರಿತು ''ಪವರ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪುಷ್ಪಾ ಅರುಣ್ ಕುಮಾರ್, ದೀಪಿಕಾ ದಾಸ್ ಹಂಚಿಕೊಂಡಿದ್ದ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ಧಾರೆ. ನಾವು ಮಗಳಿಗೂ ಹೇಳ್ತೀವಿ, ಮಗನಿಗೂ ಅಂತೀವಿ, ಅದೆಲ್ಲಾ ಮಾಮೂಲು, ನೀವು ಅದೆಲ್ಲಾ ಕೇಳಬಾರದು ಎಂದು ಹೇಳಿರುವ ಪುಷ್ಪಾ, ಅದು ನಮ್ಮ ಫ್ಯಾಮಿಲಿ ವಿಷಯ ಎಂದು ಹೇಳಿದ್ದಾರೆ.
ಇನ್ನೂ ಪುಷ್ಪಾ ಅವರ ತಾಯಿ ಮತ್ತು ದೀಪಿಕಾ ದಾಸ್ ಅವರ ವಾಸ ಸ್ಥಳ ಇರುವುದು ಒಂದೇ ಕಡೆ. ಒಂದೇ ಅಪಾರ್ಟ್‌ಮೆಂಟ್‌ನಲ್ಲಿ. ಈ ಹಿನ್ನೆಲೆ ಮನೆಯ ಬಳಿ ಈ ವಿಚಾರದ ಕುರಿತು ಚರ್ಚೆಗಳಾಗಿದಾವಾ ? ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಪುಷ್ಪಾ ಅರುಣ್ ಕುಮಾರ್ ಆ ತರ ಏನು ಇಲ್ಲೂ ಯಾಕೆಂದರೆ ನಾನು ಇಲ್ಲಿ ಇರುವುದಿಲ್ಲ. ನಾನು ಇರೋದು ಹಾಸನದಲ್ಲಿ ಆಗಾಗ ಒಂದು ದಿನ ಬಂದು ಹೋಗ್ತೀನಿ ಅಷ್ಟೇ, ಇನ್ನೂ ನನಗೆ ಬೆಂಗಳೂರಿನಲ್ಲಿ ಒಂದೇ ಮನೆ ಅಲ್ಲ ಸುಮಾರು ಮನೆಗಳಿದಾವೆ, ನನ್ನ ಮಗನ ಮನೆಯಲ್ಲಿ ಇರ್ತಿನಿ, ಮಗಳ ಮನೆಯಲ್ಲಿ ಇರ್ತಿನಿ, ಆಫೀಸ್ ಪಕ್ಕದಲ್ಲಿ ಇನ್ನೊಂದು ಮನೆ ಇದೆ ಅಲ್ಲಿರ್ತಿನಿ ಎಂದು ಹೇಳಿದ್ದಾರೆ. ಅವರು ಒಂದೇ ಮನೆಯಲ್ಲಿ ಇರಬಹುದು ನಾವು ಇರಲ್ಲ ಎಂದು ಕೂಡ ಹೇಳಿದ್ದಾರೆ.
ಇದೇ ಸಮಯದಲ್ಲಿ ತಮ್ಮ ನಡುವೆ ವೈಮನಸ್ಸು ಇರುವುದು ನಿಜಾ ಎಂದು ಒಪ್ಪಿಕೊಂಡಿರುವ ಪುಷ್ಪಾ ಅರುಣ್ ಕುಮಾರ್, ನಾನು ಈ ಮೊದಲು ಕೂಡ ವೈಮನಸ್ಸು ಇದೆ ಎಂದು ಹಲವು ಬಾರಿ ಹೇಳಿದ್ದೇನೆ, ಆದರೆ ಅದಕ್ಕೆ ಕಾರಣವೇನು ? ಎನ್ನುವುದನ್ನು ನಾನು ಹೇಳಿಲ್ಲ. ಹೇಳಲ್ಲ. ಹೇಳಿದರೆ ಅದರಿಂದ ಸಮಸ್ಯೆಯಾಗುವುದು ಅವಳಿಗೆ ಹೊರತು ನಮಗಲ್ಲ ಹೀಗಾಗಿ ನಾನು ಹೇಳಲ್ಲ. ಅವರು ನಮ್ಮ ಫ್ಯಾಮಿಲಿಯವರು ಅದಕ್ಕೆ ನಾನು ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ಟಿವಿ9'' ಕನ್ನಡ ಜೊತೆ ಕೂಡ ಮಾತನಾಡಿರುವ ಪುಷ್ಪಾ ಅರುಣ್ ಕುಮಾರ್, ನಮ್ಮ ಮನೆಯ ಹೆಣ್ಣು ಮಗಳ ಬಗ್ಗೆ ನಾವು ಮಾತನಾಡ್ತಿದ್ದೀವಿ ಅಂದರೆ ನಮಗೆ ಗೊತ್ತಿರುವ ವಿಚಾರ ನಿಮಗೆ ಗೊತ್ತಿರಲ್ಲ ಎಂದು ಹೇಳಿದ್ದಾರೆ. ದೀಪಿಕಾ ಪೋಸ್ಟ್‌ಗೆ ನಾನು ಪ್ರತಿಕ್ರಿಯೆಯನ್ನೇ ನೀಡಿಲ್ಲ, ಅದರ ಅವಶ್ಯಕತೆ ಕೂಡ ಇಲ್ಲ ಎಂದು ಹೇಳಿರುವ ಯಶ್ ತಾಯಿ ಪುಷ್ಪಾ ನಾನು ಯಾಕೆ ಆ ರೀತಿ ಹೇಳಿದೆ ಎನ್ನುವುದು ನನಗೆ ಗೊತ್ತು ಅವರಿಗೂ ಗೊತ್ತು ನಿಮಗೆಲ್ಲಾ ಗೊತ್ತಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಯಶ್‌ಗೆ ಕೂಡ ಅವನು ಯಾವ ದೊಡ್ಡ ಹೀರೋ ಅಂತ ಹೇಳ್ತೀನಿ, ನಮ್ಮ ಮನೆ ಮಕ್ಕಳಿಗೆ ನಾವು ಹೇಳ್ತೀವಿ ಅದರಿಂದ ಬೇರೆಯವರಿಗೆ ಏನು ಕಷ್ಟ ಎಂದಿರುವ ಪುಷ್ಪಾ ಅರುಣ್ ಕುಮಾರ್ ನೀವು ನನ್ನ ಮಗನ್ನಾ ಸೂಪರ್ ಸ್ಟಾರ್ ಎನ್ನಬಹುದು ಆದರೆ ನಾನು ಅವನು ಸೂಪರ್ ಸ್ಟಾರ್ ಅಲ್ಲ ಅಂತೇಳ್ತೀನಿ ಯಾಕೆಂದರೆ ನನಗೆ ಹಕ್ಕಿದೆ. ಹೀಗಾಗಿ ನಾನು ಹೇಳ್ತೀನಿ ಬೇರೆಯವರು ಹೇಳಲು ಆಗಲ್ಲ ಎಂದು ಹೇಳಿದ್ದಾರೆ. ನಾನು ಯಶ್ ಜೊತೆನೇ ಮಾತಾಡಿಲ್ಲ ಇನ್ನೂ ದೀಪಿಕಾ ಜೊತೆ ಎಲ್ಲಿಂದ ಮಾತಾಡಲಿ, ಮಾತಾಡೋಣ ಬಿಡಿ ಮುಂದೊಂದು ದಿನ ಎಂದು ಕೂಡ ಹೇಳಿದ್ದಾರೆ.
ಸದ್ಯ ಎಂದಿನಂತೆ ಯಶ್ ಅವರ ತಾಯಿಯ ಈ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪರ-ವಿರೋಧದ ಚರ್ಚೆಗೆ ನಾಂದಿಯನ್ನು ಹಾಡಿವೆ. ಯಶ್ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು, ಮಾಧ್ಯಮಗಳಿಂದ ಅವರು ತಮ್ಮ ತಾಯಿಯನ್ನು ದೂರ ಇಡಬೇಕು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











