'ಕೊತ್ತಲವಾಡಿ' ನೆಗೆಟಿವ್ ಕಾಮೆಂಟ್ಸ್ ಬಗ್ಗೆ ನಿರ್ಮಾಪಕಿ ಪುಷ್ಪಾ ಪ್ರತಿಕ್ರಿಯೆ
ಶ್ರೀರಾಜ್ ನಿರ್ದೇಶನದ 'ಕೊತ್ತಲವಾಡಿ' ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಎರಡನೇ ವಾರದತ್ತ ಸಿನಿಮಾ ಪ್ರದರ್ಶನ ಮುಂದುವರೆಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. 'ಸು ಫ್ರಂ ಸೋ', 'ಮಹಾವತಾರ್ ನರಸಿಂಹ' ಸಿನಿಮಾಗಳು ಸಖತ್ ಸದ್ದು ಮಾಡ್ತಿದ್ದು ನಡುವೆ 'ಕೊತ್ತಲವಾಡಿ' ಕೊಂಚ ಮಂಕಾಗಿದೆ.
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿತ್ತು. ಒಂದೊಳ್ಳೆ ತಂಡ ಕಟ್ಟಿಕೊಂಡು ಕನ್ನಡ ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಕೊಡಬೇಕು ಎನ್ನುವ ಕನಸಿನೊಂದಿಗೆ ಮಾಡಿರುವ ಸಿನಿಮಾ ಇದಾಗಿದೆ. ಆಹಾ ಓಹೋ ಎನ್ನುವ ರೆಸ್ಪಾನ್ಸ್ ಸಿಗದೇ ಇದ್ದರೂ ನೋಡಿದವರು ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಈಗಾಗಲೇ ನಟ ಯಶ್ ಕೂಡ 'ಕೊತ್ತಲವಾಡಿ' ಸಿನಿಮಾ ನೋಡಿದ್ದಾರೆ ಎಂದು ಪುಷ್ಪಾ ಅರುಣ್‌ಕುಮಾರ್ ಹೇಳಿದ್ದಾರೆ. ಒಂದೂವರೆ ತಿಂಗಳಿಂದ ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆ ಬಳಿಕ ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಮಿಶ್ರಪ್ರತಿಕ್ರಿಯೆಯನ್ನು ಸ್ವಾಗತಿಸಿದ್ದಾರೆ. ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಒಳ್ಳೆ ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.
ಪಾಸಿಟಿವ್ ಮಾತ್ರವಲ್ಲ ಕೆಲವೊಂದು ನೆಗೆಟಿವ್ ಅಂಶಗಳನ್ನು ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿದ್ದಾರೆ. ಈ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಮಾತನಾಡಿದ್ದಾರೆ. "ಎಲ್ಲರನ್ನು ಮೆಚ್ಚಿಸಲು ನಾವು ಸಿನಿಮಾ ಮಾಡೋಕೆ ಆಗಲ್ಲ. 4 ಅಡುಗೆ ಮಾಡಿದಾಗ ಎಲ್ಲವೂ ಎಲ್ಲರಿಗೂ ಇಷ್ಟವಾಗಲ್ಲ. ಒಬ್ಬರಿಗೆ ಇಷ್ಟವಾಗ್ಲಿಲ್ಲ ಅಂತ ತಕ್ಷಣಕ್ಕೆ ಮತ್ತೊಂದು ಮಾಡು ಕೊಡಬಹುದು. ಸಿನಿಮಾ ದಿಢೀರನೆ ಮಾಡುವುದಕ್ಕೆ ಆಗಲ್ಲ. ಮುಂದಿನ ದಿನಗಳಲ್ಲಿ ಯಾವುದನ್ನು ಸರಿಪಡಿಸಿಕೊಳ್ಳಬಹುದು ಎಂದು ನೋಡಿ ಒಳ್ಳೆ ಸಿನಿಮಾ ಮಾಡ್ತೀವಿ" ಎಂದಿದ್ದಾರೆ.

'ಸು ಫ್ರಂ ಸೋ' ಕಾಮಿಡಿ ಸಿನ್ಮಾ. 'ಕೊತ್ತಲವಾಡಿ' ಗಂಭೀರವಾದ ಸಿನ್ಮಾ. ಅದಕ್ಕೂ ಇದಕ್ಕೂ ಹೋಲಿಕೆ ಸಾಧ್ಯವಿಲ್ಲ. ನಾನು ನಮ್ಮ ಬ್ಯಾನರ್‌ನಲ್ಲಿ ಕಂಪ್ಲೀಟ್ ಕಾಮಿಡಿ ಸಿನ್ಮಾ ಮಾಡಲ್ಲ. ನಮ್ಮ ಸಿನಿಮಾಗಳಲ್ಲಿ ಗಂಭೀರ ವಿಚಾರಗಳಿರುತ್ತವೆ, ಸಂದೇಶ ಇರುತ್ತದೆ. ಅಂತಹ ಸಿನ್ಮಾಗಳನ್ನು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಪುಷ್ಪಾ ಅವರು ತಿಳಿಸಿದ್ದಾರೆ.
"ನಾನು ಒಂದು ಸಿನ್ಮಾ ಮಾಡಿ ಹೋಗೋಕೆ ಬಂದಿಲ್ಲ. ಸಿನ್ಮಾಗಳ ಸೋಲು ಗೆಲುವು ನೋಡಿದ್ದೀನಿ. ಸೋತವರು ನೋವಿನ ಕಥೆಗಳನ್ನು ಕೇಳಿದ್ದೀನಿ. ಬ್ಲೈಂಡ್ ಆಗಿ ನಾನು ಚಿತ್ರರಂಗಕ್ಕೆ ಬಂದಿಲ್ಲ. ಈ ಸಿನ್ಮಾದಿಂದ ದುಡ್ಡ ತಗೊಂಡು ಮನೆಗೆ ಹೋಗ್ಬೋದು ಅಂತ ಬಂದಿಲ್ಲ. ಫೈನಾನ್ಸ್ ವಿಚಾರದಲ್ಲಿ ಸೋಲು ಗೆಲುವು ತಡೆದುಕೊಳ್ಳುವ ಶಕ್ತಿ ನನಗಿದೆ. ದುಡ್ಡ ಬಂದ್ರೆ ಮನೆಗೆ ತಗೊಂಡು ಹೋಗ್ತೀವಿ. ಬಂದಿಲ್ಲ ಅಂತ ಸುಮ್ಮನಾಗಲ್ಲ. ಸಿನ್ಮಾ ಮಾಡುವುದು ನಿಲ್ಲಿಸಲ್ಲ" ಎಂದು ಪುಷ್ಪಾ ಅರುಣ್‌ಕುಮಾರ್ ಭರವಸೆಯ ಮಾತುಗಳನ್ನಾಡಿದ್ದಾರೆ.
ಮೊದಲಿನಿಂದ ಯಶ್ ಯಾಕೆ ಸಿನ್ಮಾ ಪ್ರಚಾರಕ್ಕೆ ಬರ್ತಿಲ್ಲ, ಅವ್ರು ಸಿನಿಮಾ ನೋಡ್ತಾರಾ? ಎಲ್ಲಿ ನೋಡ್ತಾರೆ? ಎನ್ನುವ ಪ್ರಶ್ನೆಗಳು ಪುಷ್ಪಾ ಅವರಿಗೆ ಎದುರಾಗುತ್ತಲೇ ಇತ್ತು. ಅದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದರು. ಪ್ರೇಕ್ಷಕರು ಸಿನಿಮಾ ನೋಡಬೇಕು. ಯಶ್ ಒಬ್ಬ ನೋಡಿದರೆ ಸಾಲಲ್ಲ ಎಂದಿದ್ದರು. ಇದೀಗ ಮಾತನಾಡಿ "ಯಶ್ ಸಿನ್ಮಾ ನೋಡಿ ಅಭಿಪ್ರಾಯ ತಿಳಿಸಿದ್ದಾನೆ. ಒಂದೆರಡು ದಿನಗಳಲ್ಲಿ ಯಾವ್ದು ಆಗಲ್ಲ. ತುಂಬಾ ಖುಷಿಯಾಗಿದ್ದೀಯಾ, ಹಾಗೆ ಇರು. ತಂಡಕ್ಕೆ ಥ್ಯಾಂಕ್ಸ್ ಹೇಳು. ಮುಂದಿನ ದಿನಗಳಲ್ಲಿ ಇನ್ನು ಚೆನ್ನಾಗಿ ಸಿನ್ಮಾ ಮಾಡ್ತೀಯಾ ಅನ್ನೋ ನಂಬಿಕೆ ಇದೆ" ಎಂದಿದ್ದಾನೆ ಎಂದು ತಿಳಿಸಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಕಲೆಕ್ಷನ್ ಬಗ್ಗೆ ಮಾತನಾಡಿ "ನಾನು ಈಗ್ಲೇ ಆ ಲೆಕ್ಕ ಹೇಳಲ್ಲ. ಜಾಸ್ತಿ ಬರಲಿ, ಕಮ್ಮಿ ಬರಲಿ ನಾನು ತಲೆ ಕೆಡಿಸಿಕೊಳ್ಳಲ್ಲ. ಸಿನ್ಮಾ ಬಜೆಟ್ ಬಗ್ಗೆ ಕೂಡ ಮಾತನಾಡಲ್ಲ, ಸಿನ್ಮಾ ಏನು ಕೇಳುತ್ತೋ ಎನ್ನುವನ್ನು ರಾಜಿಯಾಗದೇ ಕೊಟ್ಟಿದ್ದೇನೆ" ಎಂದು ಪುಷ್ಪಾ ವಿವರಿಸಿದ್ದಾರೆ.


Click it and Unblock the Notifications











