ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ; ಯಶ್ ತಾಯಿ ಪುಷ್ಪಾಗೆ ದೀಪಿಕಾ ಮತ್ತೆ ಟಾಂಗ್
ಚಂದನವನದಲ್ಲಿ ನಿರ್ಮಾಪಕಿ ಪುಷ್ಪಾ ಹಾಗೂ ನಟಿ ದೀಪಿಕಾ ದಾಸ್ ನಡುವಿನ ಸಂಘರ್ಷ ಹೆಚ್ಚುತ್ತಲೇ ಇದೆ. ದೀಪಿಕಾ ಕೆಲಸಕ್ಕೆ ಬಾರದವಳು, ಅವಳ ಬಗ್ಗೆ ನನ್ನ ಬಳಿ ಕೇಳಬೇಡಿ, ಅವಳೇನು ರಮ್ಯಾನಾ? ರಕ್ಷಿತಾನಾ? ಏನು ಸಾಧನೆ ಮಾಡಿದ್ದಾಳೆ ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟ ಯಶ್ ತಾಯಿ ಪುಷ್ಪಾ ಹೇಳಿದ್ದರು. ಅದಕ್ಕೆ ದೀಪಿಕಾ ತಿರುಗೇಟು ಕೊಟ್ಟಿದ್ದರು.
"ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ" ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಮೂಲಕ ಪುಷ್ಪಾ ಅವರಿಗೆ ದೀಪಿಕಾ ತಿವಿದಿದ್ದಾರೆ. ಅದು ಸಖತ್ ವೈರಲ್ ಆಗುತ್ತಿದೆ. ಸಂಬಂಧದಲ್ಲಿ ಯಶ್ ತಾಯಿ ಪುಷ್ಪಾ ಹಾಗೂ ದೀಪಿಕಾ ದಾಸ್ ತಾಯಿ ಪದ್ಮಲತಾ ಸಹೋದರಿಯರು. ಆದರೆ ಯಶ್ ಹಾಗೂ ದೀಪಿಕಾ ಅಣ್ಣ ತಂಗಿ. ಆದರೆ ಎರಡೂ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿವೆ.

ಯಶ್ ನಮ್ಮ ಅಣ್ಣ ಎಂದು ದೀಪಿಕಾ ದಾಸ್ ಕೂಡ ಎಂದು ಹೇಳುವುದಿಲ್ಲ. ಈ ಬಗ್ಗೆ ಪ್ರಶ್ನೆ ಎದುರಾದರೂ ಕಾಟಚಾರಕ್ಕೆ ಮಾತನಾಡಿ ಸುಮ್ಮನಾಗುತ್ತಿದ್ದರು. ಯಶ್ ತಾಯಿ ಪುಷ್ಪಾ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕಿದ್ದಾರೆ. ಆ ಮೂಲಕ ಹೊಸ ಪ್ರತಿಭೆಗಳಿವೆ ಅವಕಾಶ ಕೊಡಲು ಸಂಕಲ್ಪ ಮಾಡಿದ್ದಾರೆ. ಇತ್ತೀಚೆಗೆ ಅಶ್ವವೇಗ ವಾಹಿನಿ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಈ ವೇಳೆ ನಿಮ್ಮ ಮುಂದಿನ ಚಿತ್ರಕ್ಕೆ ದೀಪಿಕಾ ನಾಯಕಿ ಆಗುತ್ತಾರಾ? ಎನ್ನುವ ಪ್ರಶ್ನೆ ಎದುರಾಗಿತ್ತು.
ದೀಪಿಕಾ ಹೆಸರು ಹೇಳುತ್ತಿದ್ದಂತೆ ಪುಷ್ಪಾ ಆಕ್ರೋಶಗೊಂಡಿದ್ದರು. ಅವಳ ಬಗ್ಗೆ ಕೇಳಬೇಡಿ, ಅವಳೇನು ದೊಡ್ಡ ಹೀರೋಯಿನ್ನಾ? ಅಂತ ಹೇಳಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ದೀಪಿಕಾ ದಾಸ್ ಪೋಸ್ಟ್ ಮಾಡಿ "ಹೊಸ ಕಲಾವಿದರನ್ನ ಬೆಳಿಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನ ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ. ಮುಂದೇನು ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂರೆಸ್ಪೆಕ್ ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ" ಎಂದು ಬರೆದುಕೊಂಡಿದ್ದಾರೆ.
ಇದೀಗ ದಿಢೀರನೆ ಮತ್ತೆ ದೀಪಿಕಾ ದಾಸ್ ಪೋಸ್ಟ್ ಪ್ರತಿಕ್ರಿಯಿಸಿದ್ದಾರೆ. "ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವ ಬುದ್ಧಿ. ಯಾರೂ ಎಲ್ಲೂ ಹೋಗಿಲ್ಲ. ಯಾರೂ ನಮ್ಮ ಹತ್ರ ಬರುವ ಅವಶ್ಯಕತೆಯೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬವನ್ನು ಎಳೆದು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಬಗ್ಗೆ ನನಗೆ ಇನ್ನೇನೂ ಮಾತನಾಡುವುದಿಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
'ಕೊತ್ತಲವಾಡಿ' ಸಿನಿಮಾ ನಿರ್ಮಾಣ ಮಾಡುವ ಮೂಲಕ ಯಶ್ ತಾಯಿ ಚಿತ್ರರಂಗ ಪ್ರವೇಶಿಸಿದ್ದಾರೆ. ಆಗಸ್ಟ್ 1ರಂದು ತೆರೆಗೆ ಬಂದಿದ್ದ ಸಿನಿಮಾ ಸೋತಿತ್ತು. ಆದರೂ 2ನೇ ಸಿನಿಮಾ ಶೀಘ್ರದಲ್ಲೇ ಶುರು ಎಂದು ಅವರು ಹೇಳಿದ್ದರು. ಇನ್ನು ಪುಷ್ಪಾ ಅವರ ಸಿನಿಮಾಗಿಂತ ಅವರ ಸಂದರ್ಶನ ವೀಡಿಯೋಗಳೇ ಭಾರೀ ಸದ್ದು ಮಾಡ್ತಿದೆ. ಅವರು ನೀಡುವ ಹೇಳಿಕೆಯನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನಾದರೂ ಯಶ್ ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











