ನವೀನ್ ಕುಮಾರ್ ಎನ್ನುವುದು ಯಶ್ ಒರಿಜಿನಲ್ ಹೆಸ್ರು ಅಲ್ಲ; ವಿಕಿಪೀಡಿಯದಲ್ಲಿ ಕೂಡ ಬದಲಾಯ್ತು
ನವೀನ್ ಕುಮಾರ್ ಗೌಡ ಸಿನಿರಸಿಕರಿಗೆ ಯಶ್ ಎಂದೇ ಚಿತ್ರಪರಿಚಿತ. ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿ ಯಶ್ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ನೂರಾರು ಕೋಟಿ ಸುರಿದು ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರಾಗಿದ್ದಾರೆ. ಕನ್ನಡ ಚಿತ್ರರಂಗವನ್ನು ಹಾಲಿವುಡ್ ಮಂದಿ ಕೂಡ ತಿರುಗಿ ನೋಡುವಂತೆ ಮಾಡಬೇಕು ಎನ್ನುವ ಪಣ ತೊಟ್ಟಿದ್ದಾರೆ.
ಯಶ್ ಮೊದಲ ಹೆಸರು ನವೀನ್ ಕುಮಾರ್ ಗೌಡ. ಚಿತ್ರರಂಗಕ್ಕೆ ಬಂದ ಬಳಿಕ ಯಶ್ ಎಂದು ಬದಲಿಸಿಕೊಂಡಿದ್ದಾಗಿ ಎಲ್ಲರೂ ಭಾವಿಸಿದ್ದರು. ಯಶ್ ಕೂಡ ಇದೇ ಮಾತನ್ನು ಕೆಲ ಸಂದರ್ಭಗಳಲ್ಲಿ ಹೇಳಿದ್ದರು. ಆದರೆ ಅವರ ನಿಜವಾದ ಹೆಸರು ನವೀನ್ ಕುಮಾರ್ ಅಲ್ಲ ಎಂದು ತಾಯಿ ಪುಷ್ಪಾ ಅರುಣ್‌ಕುಮಾರ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ನವೀನ್ ಸಜ್ಜು ನಟನೆಯ 'ಲೋ ನವೀನ' ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಯಶ್ ತಾಯಿ ಪುಷ್ಪಾ ಕೂಡ ಇತ್ತೀಚೆಗೆ ಸಿನಿಮಾ ವೀಕ್ಷಿಸಿದ್ದರು. ತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು. ಈ ವೇಳೆ ಯಶ್ ನಿಜವಾದ ಹೆಸರು ಈ ಸಿನಿಮಾ ಹೆಸರು ಒಂದೇ ಅಲ್ವಾ? ಎನ್ನುತ್ತಿದ್ದಂತೆ ಅಚ್ಚರಿ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ.
"ಹೌದು.. ನವೀನ್ ಎಂಬ ಹೆಸ್ರು ಅವನಿಗೂ ಇತ್ತು. ಆದ್ರೆ ಅದು ಅವನ ಒರಿಜಿನಲ್ ಹೆಸ್ರು ಅಲ್ಲ" ಎಂದು ತಾಯಿ ಪುಷ್ಪಾ ಅರುಣ್‌ಕುಮಾರ್ ಹೇಳಿದ್ದಾರೆ. "ಜನವರಿಯಲ್ಲಿ ಹುಟ್ಟಿದ್ದಾನೆ ಅಂತ ನವೀನ್ ಅಂತ ಕರೀತ್ತಿದ್ವಿ. ತುಂಬಾ ವರ್ಷ ಅದೇ ಹೆಸ್ರು ಇತ್ತು. ಕಾಲೇಜು ದಿನಗಳಲ್ಲಿ ಬಹಳ ತುಂಟ ಆಗಿದ್ದ. ಹೆಸ್ರು ಬದಲಾದ ಬಳಿಕ ಅವನ ನಸೀಬು ಬದಲಾಗಿದೆ. ಒರಿಜಿನಲ್ ಹೆಸ್ರು ಯಶ್ವಂತ್ ಅಂತ ಇದ್ದಿದ್ದು. ನಂತರ ಅದನ್ನು ಸಿನ್ಮಾಗೋಸ್ಕರ ಯಶ್ ಎಂದು ಬದಲಿಸಿಕೊಂಡಿದ್ದು. ಜಾತಕದ ಪ್ರಕಾರ 'ಯ' ಅಕ್ಷರ ಬಂದಿತ್ತು. ಹಾಗಾಗಿ ಯಶ್ವಂತ್ ಹೆಸ್ರು ಬಂದಿದ್ದು" ಎಂದಿದ್ದಾರೆ.
ಯಶ್ ತಾಯಿ ಹೇಳಿಕೆಯನ್ನು ಈಗ ವಿಕಿಪೀಡಿಯ ಪೇಜ್‌ನಲ್ಲಿ ಕೂಡ ನಮೂದಿಸಲಾಗಿದೆ. ಯಶ್ವಂತ್ ಎನ್ನುವುದು ಅವರಿಗೆ ಮೊದಲು ಇಟ್ಟಿದ್ದ ಹೆಸರು ಎಂದು ತಿದ್ದಲಾಗಿದೆ. ಅಂದಹಾಗೆ ಜನವರಿ 8, 1985 ರಂದು ಯಶ್ ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನಿಸಿದರು. ತಂದೆ ಅರುಣ್ ಕುಮಾರ್ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿದ್ದರು. ಮಂಡ್ಯ ಹಾಗೂ ಮೈಸೂರಿನಲ್ಲಿ ಯಶ್ ಓದಿ ಬೆಳೆದರು.
ನಟನಾಗುವ ಕನಸು ಕಂಡು ಬೆಂಗಳೂರಿಗೆ ಬಂದಿದ್ದ ಯಶ್ ಮೊದಲಿಗೆ 'ಬೆನಕ' ನಾಟಕ ತಂಡ ಸೇರಿದ್ದರು. ಬಳಿಕ 'ಉತ್ತರಾಯಣ', 'ನಂದಗೋಕುಲ' ಧಾರಾವಾಹಿಗಳಲ್ಲಿ ನಟಿಸಿದ್ದರು. 'ಸಿಲ್ಲಿ ಲಲ್ಲಿ' ಧಾರಾವಾಹಿಯ ಒಂದು ಸಂಚಿಕೆಯಲ್ಲಿ ಕೂಡ ಮಿಂಚಿದ್ದರು. ಬಳಿಕ 'ಜಂಭದ ಹುಡುಗಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. 'ಮೊಗ್ಗಿನ ಮನಸ್ಸು' ಚಿತ್ರದ ರಾಹುಲ್ ಪಾತ್ರ ಬ್ರೇಕ್ ಕೊಟ್ಟಿತ್ತು.
2011ರಲ್ಲಿ ಬಂದಿದ್ದ 'ಕಿರಾತಕ' ಹೀರೊ ಆಗಿ ಯಶ್ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿತ್ತು. 'ರಾಜಾಹುಲಿ' ಸಿನಿಮಾ ಗೆದ್ದಮೇಲೆ ಯಶ್ ಖದರ್ ಬದಲಾಯಿತು. 'ಮಿ. & ಮಿ. ರಾಮಾಚಾರಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೀತು. 'KGF' ಸರಣಿ ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು. ಈಗ 'ಟಾಕ್ಸಿಕ್' ಚಿತ್ರದ ಮೂಲಕ ಪ್ಯಾನ್ ವರ್ಲ್ಡ್ ಹೀರೊ ಆಗುವ ಹಾದಿಯಲ್ಲಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಎರಡೂ ಸಿನಿಮಾಗಳಿಗೆ ಬಂಡವಾಳ ಸಹ ಹೂಡಿದ್ದಾರೆ.


Click it and Unblock the Notifications