ಯಶ್ 'ಟಾಕ್ಸಿಕ್' ಬರ್ತ್‌ಡೇ ಪೀಕ್ ಹೊಸ ಮೈಲಿಗಲ್ಲು, 13 ಗಂಟೆಗೆ 'ಪುಷ್ಪ'- 2 ದಾಖಲೆ ಉಡೀಸ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ರಾಕಿಭಾಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿರುವ ಗ್ಲಿಂಪ್ಸ್ ಹೊಸ ದಾಖಲೆ ಬರೆದಿದೆ. ಒಂದು ನಿಮಿಷದ ಸಣ್ಣ ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
'KGF'-2 ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. 67-70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ.

ಯಾವುದೇ ಡೈಲಾಗ್ ಇಲ್ಲದೇ ಸಣ್ಣ ಗ್ಲಿಂಪ್ಸ್ ಅನ್ನು 'ಟಾಕ್ಸಿಕ್' ತಂಡ ಬಿಡುಗಡೆ ಮಾಡಿದೆ. 'ಟಾಕ್ಸಿಕ್' ಹೀರೊ ಕಾರ್ ಇಳಿದು ಕ್ಲಬ್‌ವೊಂದರ ಒಳಗೆ ಬರುವ ಸನ್ನಿವೇಶ ಗ್ಲಿಂಪ್ಸ್‌ನಲ್ಲಿದೆ. ಆದರೆ ರಾಕಿಂಗ್ ಸ್ಟಾರ್ ಸ್ವಾಗ್, ಖಡಕ್ ಲುಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿರಸಿಕರು 'ಟಾಕ್ಸಿಕ್' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ ಅದಕ್ಕೆ ತಕ್ಕಂತೆ ಗ್ಲಿಂಪ್ಸ್ ನೋಡಲು ಮುಗಿಬಿದ್ದಿದ್ದಾರೆ.
24 ಗಂಟೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್‌ನಲ್ಲಿ 'ಟಾಕ್ಸಿಕ್' ಗ್ಲಿಂಪ್ಸ್ 3 ಕೋಟಿ 60 ಲಕ್ಷ ವೀವ್ಸ್ ಪಡೆದಿದೆ. 5 ಲಕ್ಷದ 51 ಸಾವಿರ ಲೈಕ್ಸ್ ಗಿಟ್ಟಿಸಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಲಾಗ್ತಿದೆ. ಇದಕ್ಕೂ ಮುನ್ನ 'ಪುಷ್ಪ-2' ಚಿತ್ರದ ಗ್ಲಿಂಪ್ಸ್ 24 ಗಂಟೆಗಳಲ್ಲಿ 2 ಕೋಟಿ 70 ಲಕ್ಷ ವೀವ್ಸ್ ಸಾಧಿಸಿತ್ತು. ಕೇವಲ 13 ಗಂಟೆಗಳಲ್ಲಿ 'ಟಾಕ್ಸಿಕ್' ಝಲಕ್ ಇದನ್ನು ಮೀರಿಸಿತ್ತು.
ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರದ ಗ್ಲಿಂಪ್ಸ್ 2 ಕೋಟಿ 17 ಲಕ್ಷ ವೀವ್ಸ್ ಪಡೆದು 3ನೇ ಸ್ಥಾನದಲ್ಲಿದೆ. 'ಗುಂಟೂರು ಖಾರಂ' ಚಿತ್ರದ ಝಲಕ್ ನಾಲ್ಕನೇ ಸ್ಥಾನದಲ್ಲಿದ್ದರೆ ತಮಿಳಿನ 'ಕಂಗುವ' ಸಿನಿಮಾ ಗ್ಲಿಂಪ್ಸ್ 5ನೇ ಸ್ಥಾನದಲ್ಲಿದೆ. ಈ ಹಿಂದೆ 'ಕೆಜಿಎಫ್' ವರ್ಸಸ್ 'ಪುಷ್ಪ' ಎನ್ನುವ ಚರ್ಚೆ ನಡೆದಿತ್ತು. ಆದರೆ ಈಗ 'ಟಾಕ್ಸಿಕ್' ವರ್ಸಸ್ 'ಪುಷ್ಪ'-2 ಎನ್ನಲಾಗ್ತಿದೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 1700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. 'ಕೆಜಿಎಫ್-2' ಹಾಗೂ 'ಬಾಹುಬಲಿ'-2 ಬಾಕ್ಸಾಫೀಸ್ ಗಳಿಕೆಯನ್ನು ಹಿಂದಿಕ್ಕಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿದ್ದೇ ಇದಕ್ಕೆ ಕಾರಣ ಎನ್ನುವ ಚರ್ಚೆ ಕೂಡ ನಡೀತಿದೆ. 'ಪುಷ್ಪ'-2 ದಾಖಲೆಯನ್ನು 'ಟಾಕ್ಸಿಕ್' ಮುರಿಯುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
'ಟಾಕ್ಸಿಕ್' ಚಿತ್ರವನ್ನು ಏಪ್ರಿಲ್ 10ಕ್ಕೆ ತೆರೆಗೆ ತರುವ ಪ್ರಯತ್ನ ನಡೀತು. ಆದರೆ ಚಿತ್ರೀಕರಣ ತಡವಾಗಿ ರಿಲೀಸ್ ಡೇಟ್ ಮುಂದೂಡಲಾಗಿದೆ. ಯಶ್ ಬರ್ತ್‌ಡೇ ಟೀಸರ್‌ನಲ್ಲಿ ಕೂಡ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಯಶ್ ನಟಿಸಿದ ಸಿನಿಮಾ ತೆರೆಗೆ ಬಂದು 2 ವರ್ಷ ಕಳೆದಿದೆ. ಅಭಿಮಾನಿಗಳು ಆದಷ್ಟು ಬೇಗ 'ಟಾಕ್ಸಿಕ್' ಸಿನಿಮಾ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.
ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಚಿತ್ರದ ಕಥೆ ಸುತ್ತುತ್ತದೆ ಎಂಬ ಊಹಾಪೋಹ ಇದೆ. 60-70ರ ದಶಕದ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗ್ತಿದೆ. ಮತ್ತೊಮ್ಮೆ ಯಶ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿರುವಂತೆ ಕಾಣುತ್ತಿದೆ. ಗ್ಲಿಂಪ್ಸ್‌ನಲ್ಲಿ ರಾಕಿಂಗ್ ಸ್ಟಾರ್ ಸ್ವ್ಯಾಗ್, ಸ್ಟೈಲ್ ನೋಡಿದವರು ಇಷ್ಟಪಟ್ಟಿದ್ದಾರೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ.
ನಯನತಾರ ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಕಿಯಾರಾ ಅಡ್ವಾಣಿ 'ಟಾಕ್ಸಿಕ್' ಚಿತ್ರದ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಷರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಲಿದೆ.


Click it and Unblock the Notifications











