ಬಾಲಿವುಡ್ ಆಯ್ತು ಈಗ ಯಶ್ ಹಣಿಯಲು ನಿಂತ ಟಾಲಿವುಡ್ ಮಂದಿ.. 'ಟಾಕ್ಸಿಕ್' ವಿರುದ್ಧ ಮಸಲತ್ತು ಯಾಕೆ?
"ನಮ್ಮನ್ನ ಕಂಡ್ರೆ ಉರ್ಕೋಳ್ಳೋರು ಒಬ್ರ ಇಬ್ರ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ" ಇದು ಮಾಸ್ಟರ್ ಪೀಸ್ ಚಿತ್ರದ ಡೈಲಾಗ್. ಅದ್ಯಾಕೋ ಈ ಮಾತು ಪದೇ ಪದೆ ಯಶ್ ನಿಜ ಜೀವನದಲ್ಲಿ ನಿಜ ಅನ್ನಿಸೋಕೆ ಶುರುವಾಗುತ್ತದೆ. ಕೆಲವೇ ತಿಂಗಳ ಹಿಂದೆ ಬಾಲಿವುಡ್ ಮಂದಿ 'ರಾಮಾಯಣ' ಚಿತ್ರದ ವಿಚಾರದಲ್ಲಿ ಯಶ್ ಅವರನ್ನು ಕೆಳಗಿಳಿಸಿ ಮಾತನಾಡುವ ಪ್ರಯತ್ನ ಮಾಡಿದ್ದರು. ಚಿತ್ರದಲ್ಲಿ ಕೆಲವೇ ನಿಮಿಷಗಳು ಯಶ್ ಕಾಣಿಸಿಕೊಳ್ತಾರೆ ಅಂತೆಲ್ಲಾ ಊಹಾಪೋಹ ಹಬ್ಬಿಸಿದ್ದರು.
ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ನಿರ್ಮಾಣವಾಗುತ್ತಿದೆ. ಮೊದಲ ಭಾಗದಲ್ಲಿ ರಾವಣನಾಗಿ ಯಶ್ ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣ ಕಾವ್ಯದ ಪ್ರಕಾರ ಕೂಡ ಸೀತಾಪಹರಣದ ಬಳಿಕವೇ ರಾವಣನ ಪಾತ್ರದ ಬಗ್ಗೆ ಹೆಚ್ಚು ಉಲ್ಲೇಖ ಬರುತ್ತದೆ. ಇತ್ತೀಚೆಗೆ ಹಾಲಿವುಡ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೂಡ 'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ನಾನು ರಣ್‌ಬೀರ್ ಸಿಂಗ್ ಜೊತೆ ತೆರೆ ಹಂಚಿಕೊಂಡಿಲ್ಲ ಎಂದು ಸ್ವತಃ ಯಶ್ ಹೇಳಿದ್ದಾರೆ. ನಮ್ಮಿಬ್ಬರದ್ದು ಬೇರೆ ಬೇರೆ ಕಿಂಗ್‌ಡಮ್. ಹಾಗಾಗಿ ಮುಖಾಮುಖಿ ದೃಶ್ಯಗಳಿಲ್ಲ ಎಂದಿದ್ದಾರೆ. ಅದು ನಿಜ ಕೂಡ. ಇದನ್ನು ತಿರುಚಿ 'ರಾಮಾಯಣ' ಚಿತ್ರದಲ್ಲಿ ಯಶ್‌ಗೆ ಅವಕಾಶ ಕಮ್ಮಿ. ರಣ್ಬೀರ್ ದರ್ಬಾರ್ ಹೆಚ್ಚು ಎಂದು ಟ್ರೋಲ್ ಮಾಡಿದ್ದರು. ಇದರ ಹಿಂದೆ ಪಿಆರ್ ಟೀಂ ಇದೆ ಎಂದು ಯಶ್ ಅಭಿಮಾನಿಗಳು ಆರೋಪಿಸಿದ್ದರು.

ಸದ್ಯ 'ಟಾಕ್ಸಿಕ್' ಚಿತ್ರದಿಂದ ಟಾಲಿವುಡ್ ಮಂದಿಗೆ ಢವ ಢವ ಶುರುವಾಗಿದೆ. ಅದಕ್ಕೆ ಕಾರಣ ಅದೇ ತಿಂಗಳು ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆ ಆಗುತ್ತಿದೆ. 'ಟಾಕ್ಸಿಕ್' ರಾಯನ ಆರ್ಭಟದ ನಡುವೆ 'ಪೆದ್ದಿ' ಕಳೆದು ಹೋಗುವ ಭೀತಿ ಶುರುವಾದಂತೆ ಕಾಣುತ್ತಿದೆ. ಅದೇ ಕಾರಣಕ್ಕೆ ಈಗ 'ಟಾಕ್ಸಿಕ್' ವಿರುದ್ಧ ಅಲ್ಲಿ ನೆಗೆಟಿವ್ ಹಬ್ಬಿಸುವ ಕೆಲಸ ಆರಂಭವಾಗಿದೆ. ಜೂನ್ 4ಕ್ಕೆ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ, ಅದೇ ಕಾರಣಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಖಚಿತ ಎಂದು ಸ್ವತಃ ಯಶ್ ಹಾಲಿವುಡ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 30ಕ್ಕೆ ಬರಬೇಕಿದ್ದ 'ಪೆದ್ದಿ' ಚಿತ್ರವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಘೋಷಿಸಿದೆ. ಹಾಗಾಗಿ 'ಟಾಕ್ಸಿಕ್' ಪ್ರಭಾವಳಿಯಲ್ಲಿ ರಾಮ್‌ಚರಣ್ ಸಿನಿಮಾ ಕಳೆದು ಹೋಗುವ ಭೀತಿ ಶುರುವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ 'ಟಾಕ್ಸಿಕ್' ಟೀಸರ್ ಹವಾ ಈಗ ಕಮ್ಮಿ ಆಗಿದೆ. ತೆಲುಗು ರಾಜ್ಯಗಳಲ್ಲಿ ಜನಪ್ರಿಯತೆ ಗಳಿಸಲು ಸಿನಿಮಾ ಹೆಣಗಾಡುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್, ಕಾಮೆಂಟ್ ಹಾಕುತ್ತಿದ್ದಾರೆ. 'ಟಾಕ್ಸಿಕ್' ಟೀಸರ್‌ಗೆ ತೆಲುಗಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಕಾರಣಕ್ಕೆ ಹೀಗೆ ಟಾರ್ಗೆಟ್ ಮಾಡಲಾಗ್ತಿದೆ. ಇದಕ್ಕೆಲ್ಲಾ ಯಶ್ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.

ಆಂಧ್ರ, ತೆಲಂಗಾಣದಲ್ಲಿ 'KGF' ಸರಣಿ ಸಿನಿಮಾಗಳು ದಾಖಲೆಯ ಪ್ರದರ್ಶನ ಕಂಡಿತ್ತು. ತೆಲುಗು ಪ್ರೇಕ್ಷಕರು ರಾಕಿಭಾಯ್ ಅನ್ನು ಅಪ್ಪಿಕೊಂಡಿದ್ದರು. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸರಣಿ ಚಿತ್ರಗಳು ಅಲ್ಲಿ ಸದ್ದು ಮಾಡಿತ್ತು. 120 ಕೋಟಿ ರೂ.ಗೆ ದಿಲ್ ರಾಜು 'ಟಾಕ್ಸಿಕ್' ಚಿತ್ರದ ತೆಲುಗು ರೈಟ್ಸ್ ಕೊಂಡುಕೊಂಡಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಅಲ್ಲಿ ಬಿಡುಗಡೆ ಆಗಲಿದೆ. ಇದೇ ಕಾರಣಕ್ಕೆ ಈಗ ಕೆಲವರು ಯಶ್ ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿ ಸೋಲಿಸುವ ಸಾಹಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಜೂನ್ 4ರಂದು ರಾಯ ತಕ್ಕ ಉತ್ತರ ಕೊಡಲಿದ್ದಾನೆ.


Click it and Unblock the Notifications











