ಮೌನಕ್ಕೆ ಶರಣಾದ ನಗೆಯ ಸರದಾರ, ರಾಮ ಶ್ಯಾಮ ಭಾಮ ಖ್ಯಾತಿಯ, ರಂಗ ದಿಗ್ಗಜ ಯಶವಂತ ಸರದೇಶಪಾಂಡೆ ನಿಧನ
ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ, ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ.
ಹೀಗಿರುವಾಗ ಇದೀಗ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು ಖ್ಯಾತ ರಂಗಭೂಮಿ ನಟ ನಿರ್ದೇಶಕ ಸಂಭಾಷಣೆಗಾರ ಯಶವಂತ ಸರದೇಶಪಾಂಡೆ ಇಂದು (ಸೆಪ್ಟೆಂಬರ್ 29) ಕೊನೆಯುಸಿರೆಳೆದಿದ್ದಾರೆ.

ಬಾಲ್ಯದಿಂದಲೇ ರಂಗಭೂಮಿಯತ್ತ ಅಪಾರ ಒಲವು ಬೆಳೆಸಿಕೊಂಡಿದ್ದ ಯಶವಂತ ಸರದೇಶಪಾಂಡೆ ಅವರಿಗೆ 60 ವರ್ಷ ವಯಸ್ಸಾಗಿತ್ತು. ತೀರಾ ಇತ್ತೀಚೆಗಷ್ಟೇ ಇವರ 60ನೇ ಹುಟ್ಟುಹಬ್ಬದ ಪ್ರಯುಕ್ತ 'ಉತ್ತರೋತ್ತಮ ಉತ್ಸವ - 2025' ಹಮ್ಮಿಕೊಳ್ಳಲಾಗಿತ್ತು. ನೃತ್ಯ, ಸಂಗೀತ ಮತ್ತು ನಾಟಕ ಕಾರ್ಯಕ್ರಮಗಳಿಂದ ಈ ಉತ್ಸವ ನಡೆದಿತ್ತು.
ಇನ್ನೂ ಮುಂಬರುವ ಅಕ್ಟೋಬರ್ 18ರಂದು ಡಾ ಪ್ರವೀಣ್ ಗೊಡಖಿ೦ಡಿ ರಚನೆಯ 'ಕೊಳಲು.com(edy)' ಎಂಬ ಹೊಸ ನಾಟಕದಲ್ಲಿ ಯಶವಂತ ಸರದೇಶಪಾಂಡೆ ಅಭಿನಯಿಸಲು ಮುಂದಾಗಿದ್ದರು. ನಿನ್ನೆ (ಸೆಪ್ಟೆಂಬರ್ 28) ಬೆಳಗ್ಗೆಯಷ್ಟೇ ತಾವು ಮಾಡುತ್ತಿರುವ ಈ ಹೊಸ ಪ್ರಯೋಗದ ಕುರಿತು ತಮ್ಮ ಸೋಶೀಯಲ್ ಮೀಡಿಯಾ ಮೂಲಕ ಯಶವಂತ ಸರದೇಶಪಾಂಡೆ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದರು.
ಆದರೆ.. ವಿಧಿಲಿಖಿತ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತೀವೃ ಹೃದಯಾಘಾತಕ್ಕೊಳಗಾದ ಯಶವಂತ ಸರದೇಶಪಾಂಡೆ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ.. ಚಿಕಿತ್ಸೆ ಫಲಕಾರಿಯಾಗಲಿಲ್ಲ. ನಗೆಯ ಸರದಾರ ಯಶವಂತ ಸರದೇಶಪಾಂಡೆ ಅವರಿಗೆ ದೇವರು ಮತ್ತೊಂದು ಅವಕಾಶ ನೀಡಲಿಲ್ಲ.
ಯಶವಂತ ಸರದೇಶಪಾಂಡೆ ಅವರ ಅಕಾಲಿನ ನಿಧನದಿಂದ ರಂಗಭೂಮಿಯನ್ನು ಶೋಕ ಆವರಿಸಿಕೊಂಡಿದ್ದು, ರಂಗಭೂಮಿ, ಕಿರುತೆರೆ, ಚಿತ್ರರಂಗದ ಹಲವರು ರಂಗ ದಿಗ್ಗಜನನ್ನು ನೆನೆದು ಭಾವುಕರಾಗಿದ್ಧಾರೆ. ಅನೇಕರು ಸಂತಾಪವನ್ನು ಸೂಚಿಸಿದ್ದಾರೆ.

ಜೂನ್ 13 1965ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಒಕ್ಕಲಿ ಎಂಬ ಹಳ್ಳಿಯಲ್ಲಿ ಶ್ರೀಧರ ರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ಕಲ್ಪನಾದೇವಿ ದಂಪತಿಗಳಿಗೆ ಹುಟ್ಟಿದ್ದ ಯಶವಂತ ಸರದೇಶಪಾಂಡೆ ಹೆಗ್ಗೋಡಿನ 'ನೀನಾಸಂ' ನಾಟಕ ಸಂಸ್ಥೆಯಿಂದ ಡಿಪ್ಲೋಮಾ ಪದವಿ ಪಡೆದಿದ್ದರು. ಆ ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯನ್ನು ಕೂಡ ಪಡೆದಿದ್ದರು.
''ಅಂಧ ಯುಗ''.. ''ಇನ್ಸ್ಪೆಕ್ಟರ್ ಜನರಲ್''.. ''ಮಿಡ್ ಸಮ್ಮರ್ ನೈಟ್ಸ್ ಡ್ರೀಮ್''.. ''ಬಾಡಿಗೆ ಮನೆ''.. ''ಪುಷ್ಪ ರಾಣಿ'', ''ಗಲಿವರನ್ನು ಯಾತ್ರೆ''.. ''ಬೆಪ್ಪು ತಕ್ಕಡಿ ಬೋಳೇಶಂಕರ''.. ''ತುಂಟಮಕ್ಕಳ ತಂಟೆ''.. ''ಕುಂಟಾ ಕುಂಟ ಕುರವತ್ತಿ'' ಹೀಗೆ ಒಟ್ಟು ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದ ಯಶವಂತ ಸರದೇಶಪಾಂಡೆ ''ರಂಗವರ್ತುಲ'' ಮತ್ತು ''ಬೇಂದ್ರೆ ರಂಗಾವಳಿ''ಯ ಮೂಲಕ ಬೇಂದ್ರೆಯವರ ಎಲ್ಲ ನಾಟಕಗಳನ್ನು ರಂಗದಲ್ಲಿ ಪ್ರದರ್ಶಿಸಿದ್ದರು.
ರೇಡಿಯೋ ಮತ್ತು ದೂರದರ್ಶನಗಳಿಗೂ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಮಾತ್ರವಲ್ಲದೆ 'ಗುರು' ಸಂಸ್ಥೆಯ ಮುಖಾಂತರ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ಯಶಸ್ವಿ ನಿರ್ದೇಶಕ ಇವರಾಗಿದ್ದರು. ''ಆಲ್ ದ ಬೆಸ್ಟ್''.. ''ರಾಶಿ ಚಕ್ರ''.. ''ಸಹಿ ರೀ ಸಹಿ''.. ನಗೆ ನಾಟಕಗಳನ್ನು ಪ್ರದರ್ಶಿಸಿ ರಾಜ್ಯದ ಎಲ್ಲಾ ಕಡೆಯಿಂದಲೂ ಪ್ರಶಂಸೆಯನ್ನು ಪಡೆದಿದ್ದರು ಯಶ್ವಂತ ಸರದೇಶಪಾಂಡೆ. ಇವರ ''ರಾಶಿ ಚಕ್ರ'' ಏಕವ್ಯಕ್ತಿ ಅಭಿನಯದ ನಾಟಕವಾಗಿದ್ದು ಇದರಲ್ಲಿ ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸಿದ ಹೆಗ್ಗಳಿಕೆ ಇವರದ್ದು.
ಇದಲ್ಲದೇ ಕಿರುತೆರೆಯಲ್ಲಿ ಕೂಡ ತಮ್ಮ ಛಾಪು ಮೂಡಿಸಿದ್ದ ಯಶವಂತ ಸರದೇಶಪಾಂಡೆ, ''ಯದ್ವಾ ತದ್ವಾ''.. ''ಬಣ್ಣದ ಬುಗುರಿ''.. ''ದಶಾವತಾರ''.. ''ಪರ್ವ''.. ''ತುಂತುರು''.. ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಜನಮನ ಗೆದ್ದ ಕಮಲ್ ಹಾಸನ್-ರಮೇಶ್ ಅರವಿಂದ್ ಅಭಿನಯದ ''ರಾಮ ಶ್ಯಾಮ ಭಾಮ'' ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದ ಯಶವಂತ ಸರದೇಶಪಾಂಡೆ ಕಮಲ್ ಬಾಯಲ್ಲಿ ಉತ್ತರ ಕರ್ನಾಟಕದ ಕನ್ನಡ ನಲಿಯುವಂತೆ ಮಾಡಿದ್ದರು. ''ಐಡಿಯಾ ಮಾಡ್ಯಾರ'' ಚಿತ್ರವನ್ನು ಕೂಡ ಯಶವಂತ ಸರದೇಶಪಾಂಡೆ ನಿರ್ಮಾಣ ಮಾಡಿದ್ದರು.


Click it and Unblock the Notifications











