2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು
ಈ ವರ್ಷ ಕನ್ನಡದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿದೆ. ಆದರೆ ಈ ಪೈಕಿ ಸೂಪರ್ ಹಿಟ್ ಆದ ಸಿನಿಮಾಗಳು ಕೆಲವೇ ಕೆಲವು. ಒಂದು ಕಡೆ ಹೊಸಬರ ಹೊಸ ಪ್ರಯೋಗ ಕ್ಲಿಕ್ ಆಗಿವೆ. ಇತ್ತ ಸ್ಟಾರ್ ನಟರ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ.
ಪ್ರಮುಖವಾಗಿ ಈ ವರ್ಷ ರಿಲೀಸ್ ಆದ ಕನ್ನಡದ ಸ್ಟಾರ್ ನಟರು ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆ ಮತ್ತಷ್ಟು ಹೆಚ್ಚಾಗಲು ಸಹಾಯ ಮಾಡಿದೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಶ್ರೀ ಮುರಳಿ, ಧ್ರುವ ಸರ್ಜಾ ಈ ವರ್ಷ ದೊಡ್ಡ ಯಶಸ್ಸು ಕಂಡ ಕನ್ನಡದ ನಟರಾಗಿದ್ದಾರೆ. ಈ ವರ್ಷದ ಸ್ಟಾರ್ ಸಿನಿಮಾಗಳ ಸಂಪೂರ್ಣ ವಿವರ ಮುಂದಿದೆ ಓದಿ...

ರಮೇಶ್ ಅರವಿಂದ್ (ಪುಷ್ಪಕ ವಿಮಾನ)
ನಟ ರಮೇಶ್ ಅರವಿಂದ್ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ತಮ್ಮ ನಟನ ಚಾತುರ್ಯವನ್ನು ಮತ್ತೊಮ್ಮೆ ತೋರಿಸಿದರು. ಈ ವರ್ಷ ರಿಲೀಸ್ ಆದ ಮೊದಲ ಸಿನಿಮಾ ಇದಾಗಿದ್ದು, ತಂದೆ ಮತ್ತು ಮಗಳ ಸಂಬಂಧವನ್ನು ಚಿತ್ರದಲ್ಲಿ ಹೇಳಲಾಗಿತ್ತು.

ಶಿವರಾಜ್ ಕುಮಾರ್ (4 ಸಿನಿಮಾಗಳು)
ನಟ ಶಿವಣ್ಣ ಪ್ರತಿ ವರ್ಷದಂತೆ ಈ ವರ್ಷವೂ ಬಿಡುವು ತೆರೆಗೆದುಕೊಂಡಿಲ್ಲ. 3 ತಿಂಗಳಿಗೆ ಒಂದು ಸಿನಿಮಾದಂತೆ ವರ್ಷಕ್ಕೆ 4 ಸಿನಿಮಾ ಮಾಡಿದ್ದಾರೆ. 'ಶ್ರೀ ಕಂಠ', 'ಸನ್ ಆಫ್ ಬಂಗಾರದ ಮನುಷ್ಯ', 'ಮಾಸ್ ಲೀಡರ್', 'ಮಫ್ತಿ' ಹೀಗೆ ಪ್ರತಿ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರಗಳನ್ನು ಶಿವಣ್ಣ ಪ್ರಯತ್ನ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ (ರಾಜಕುಮಾರ)
ಪವರ್ ಸ್ಟಾರ್ ಪುನೀತ್ ಈ ವರ್ಷ ಹೊಸ ಇತಿಹಾಸ ಬರೆದಿದ್ದಾರೆ. 'ರಾಜಕುಮಾರ' ಚಿತ್ರ ಅತಿ ಹೆಚ್ಚು ಹಣ ಗಳಿಸಿದ ಕನ್ನಡ ಸಿನಿಮಾವಾಗಿದೆ. ಈ ದೊಡ್ಡ ಗೆಲುವಿನ ಬಳಿಕ ಅಪ್ಪು 'ಅಂಜನಿಪುತ್ರ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 21ಕ್ಕೆ ರಿಲೀಸ್ ಆಗಲಿದೆ.

ದರ್ಶನ್ (ಚಕ್ರವರ್ತಿ, ತಾರಕ್)
ಡಿ ಬಾಸ್ ದರ್ಶನ್ ಈ ವರ್ಷ ಮಾಡಿದ್ದು ಎರಡು ಚಿತ್ರಗಳನ್ನು. ಅದರಲ್ಲಿ 'ಚಕ್ರವರ್ತಿ' ಸಿನಿಮಾಗೆ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ. ಆದರೆ 'ತಾರಕ್' ಒಂದು ಒಳ್ಳೆಯ ಫ್ಯಾಮಿಲಿ ಸಿನಿಮಾ ಅಂತ ಕರೆಸಿಕೊಂಡಿದೆ.

ಉಪೇಂದ್ರ (ಉಪೇಂದ್ರ ಮತ್ತೆ ಬಾ)
ಪ್ರಜಾಕೀಯದ ಕೆಲಸದಲ್ಲಿ ಬಿಜಿ ಇದ್ದ ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷ ಮಾಡಿದ್ದು 'ಉಪೇಂದ್ರ ಮತ್ತೆ ಬಾ' ಸಿನಿಮಾವನ್ನು ಮಾತ್ರ.

ಸುದೀಪ್ (ಹೆಬ್ಬುಲಿ)
ಕಿಚ್ಚ ಸುದೀಪ್ ಈ ವರ್ಷ 'ಹೆಬ್ಬುಲಿ' ಅವತಾರ ಎತ್ತಿದರು. ಚಿತ್ರದಲ್ಲಿ ಸುದೀಪ್ ಆರ್ಮಿ ಆಫೀಸರ್ ಪಾತ್ರ ಮಾಡಿದ್ದು, ರವಿಚಂದ್ರನ್ ತಮ್ಮನಾಗಿ ಸುದೀಪ್ ಅಭಿನಯಿಸಿದ್ದರು.

ಶ್ರೀ ಮುರಳಿ (ಮಫ್ತಿ)
'ರಥಾವರ' ಬಳಿಕ 'ಮಫ್ತಿ' ಚಿತ್ರದ ಮೂಲಕ ಮುರಳಿ ಮರಳಿದರು. ಈ ಸಿನಿಮಾ ಕೂಡ ನೋಡುಗರಿಗೆ ಹೊಸ ಥ್ರಿಲ್ ನೀಡಿದ್ದು, ಶ್ರೀ ಮುರಳಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು.

ಅರ್ಜುನ್ ಸರ್ಜಾ (ವಿಸ್ಮಯ)
ಅರ್ಜುನ್ ಸರ್ಜಾ ಈ ವರ್ಷ 'ವಿಸ್ಮಯ' ಸಿನಿಮಾ ಮಾಡಿದರು. ಇದು ಅವರ 150ನೇ ಸಿನಿಮಾವಾಗಿತ್ತು.

ಶರಣ್ (ಸತ್ಯ ಹರಿಶ್ಚಂದ್ರ)
ಕಾಮಿಡಿ ಕಿಂಗ್ ಶರಣ್ 'ಸತ್ಯ ಹರಿಶ್ಚಂದ್ರ'ನಾಗಿ ಜನರ ಮುಂದೆ ಬಂದರು. ಆದರೆ ಮತ್ತೆ ಈ ಚಿತ್ರದಲ್ಲಿಯೂ ಶರಣ್ ಸೋಲು ಕಂಡರು.

ಗಣೇಶ್ (ಪಟಾಕಿ, ಮುಗುಳುನಗೆ)
'ಪಟಾಕಿ', 'ಮುಗುಳುನಗೆ' ಎರಡು ಸಿನಿಮಾಗಳಲ್ಲಿ ಗಣೇಶ್ ಈ ವರ್ಷ ನಟಿಸಿದರು ಆದರೆ ಈ ಎರಡು ಚಿತ್ರಗಳು ಸಹ ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಇನ್ನು ಗಣೇಶ್ ಅವರ 'ಚಮಕ್' ಸಿನಿಮಾ ಕೂಡ ಇದೇ ತಿಂಗಳು ರಿಲೀಸ್ ಆಗಲಿದೆ.

ಮಿತ್ರ (ರಾಗ)
ಹಾಸ್ಯ ನಟ ಮಿತ್ರ 'ರಾಗ' ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕುರುಡನಾಗಿ ನಟಿಸಿದ್ದ ಅವರ ಅಭಿನಯ ಎಲ್ಲರ ಮೆಚ್ಚುಗೆ ಪಡೆಯಿತು.

ಜಗ್ಗೇಶ್ (ಮೇಲುಕೋಟೆ ಮಂಜ)
'ಮೇಲುಕೋಟೆ ಮಂಜ' ಚಿತ್ರಕ್ಕೆ ಜಗ್ಗೇಶ್ ನಾಯಕ ಕಂ ನಿರ್ದೇಶಕ ಆಗಿದ್ದರು. ಈ ಚಿತ್ರದ ಜೊತೆಗೆ ಈ ವರ್ಷ 'ಮುಗುಳುನಗೆ' ಚಿತ್ರದ ಒಂದು ಹಾಡಿನಲ್ಲಿ ಜಗ್ಗೇಶ್ ನಟಿಸಿದ್ದರು.

ಧ್ರುವ ಸರ್ಜಾ (ಭರ್ಜರಿ)
ಧ್ರುವ ಸರ್ಜಾ 'ಭರ್ಜರಿ' ಸಿನಿಮಾದ ಮೂಲಕ ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಪಟ್ಟ ಪಡೆದರು. 'ಭರ್ಜರಿ' ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖವಾಗಿದೆ.

ಸಂಚಾರಿ ವಿಜಯ್ (ರಿಕ್ತ)
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ 'ರಿಕ್ತ' ಎಂಬ ಹಾರರ್ ಸಿನಿಮಾದಲ್ಲಿ ಈ ವರ್ಷ ನಟಿಸಿದರು.

ಧನಂಜಯ್ (ಮೂರು ಸಿನಿಮಾ)
ಧನಂಜಯ್ ಈ ವರ್ಷ 'ಅಲ್ಲಮ', 'ಎರಡನೇ ಸಲ' ಮತ್ತು 'ಹ್ಯಾಪಿ ನ್ಯೂ ಹಿಯರ್' ಈ ಮೂರು ಸಿನಿಮಾ ಮಾಡಿದರು. ಇವುಗಳಲ್ಲಿ ಎರಡು ಸಾಧಾರಣ ಸಿನಿಮಾ ಆದರೆ 'ಹ್ಯಾಪಿ ನ್ಯೂ ಹಿಯರ್' ಫ್ಲಾಪ್ ಚಿತ್ರವಾಯಿತು.

ದುನಿಯಾ ವಿಜಯ್ (ಮಾಸ್ತಿಗುಡಿ)
ನಟ ದುನಿಯಾ ವಿಜಯ್ 2017 ರಲ್ಲಿ 'ಮಾಸ್ತಿಗುಡಿ' ಸಿನಿಮಾ ಮಾಡಿದರು. ಆದರೆ ಈ ವರ್ಷ ಮತ್ತು ಈ ಸಿನಿಮಾ ಅವರ ಪಾಲಿಗೆ ಕರಾಳ ನೆನಪಾಗಿ ಉಳಿಯಿತು.

ಅಜಯ್ ರಾವ್ (ಧೈರ್ಯಂ)
'ಧೈರ್ಯಂ' ಸಿನಿಮಾದ ಮೂಲಕ ಕೃಷ್ಣ ಅಜಯ್ ರಾವ್ ಆಕ್ಷನ್ ಹೀರೋ ಆದರು. ಫ್ಯಾಮಿಲಿ ಜೊತೆಗೆ ಮಾಸ್ ಅಂಶಗಳು ಈ ಚಿತ್ರದಲ್ಲಿ ಇತ್ತು. ಆದರೆ ಸಿನಿಮಾದ ಪಲಿತಾಂಶ ಆ ಕಡೆ ಹಿಟ್... ಈ ಕಡೆ ಫ್ಲಾಪ್ ಎರಡು ಅಲ್ಲದೆ ಇರುವ ಹಾಗೆ ಆಯ್ತು.

ಸತೀಶ್ ನೀನಾಸಂ (ಬ್ಯೂಟಿಫುಲ್ ಮನಸುಗಳು, ಟೈಗರ್ ಗಲ್ಲಿ)
ಸತೀಶ್ 'ಬ್ಯೂಟಿಫುಲ್ ಮನಸುಗಳು' ಮತ್ತು 'ಟೈಗರ್ ಗಲ್ಲಿ' ಚಿತ್ರದ ಮೂಲಕ ಈ ವರ್ಷ ಅಖಾಡಕ್ಕೆ ಇಳಿದಿದ್ದರು. 'ಬ್ಯೂಟಿಫುಲ್ ಮನಸುಗಳು' ತುಂಬ ಒಳ್ಳೆಯ ಸಿನಿಮಾ ಅಂತ ಕರೆಸಿಕೊಂಡರೆ, 'ಟೈಗರ್ ಗಲ್ಲಿ' ಅಷ್ಟೇ ಕೆಟ್ಟ ಸಿನಿಮಾ ಅಂತ ಕರೆಸಿಕೊಂಡಿತು.

ವಿಜಯ ರಾಘವೇಂದ್ರ (ಏಳು ಬೀಳು)
ಸದ್ಯ ಕಿರುತೆರೆಯಲ್ಲಿ ಬಿಜಿ ಇರುವ ನಟ ವಿಜಯ ರಾಘವೇಂದ್ರ ಈ ವರ್ಷ ಬರೋಬ್ಬರಿ 7 ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇವುಗಳ ಪೈಕಿ 'ಚೌಕ' ಚಿತ್ರ ಬಿಟ್ಟರೆ ಯಾವ ಸಿನಿಮಾಗಳು ಚಿತ್ರಮಂದಿರದಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ.


Click it and Unblock the Notifications











