ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ನಟ ಕಿಚ್ಚ ಸುದೀಪ್
ನಟ ಸುದೀಪ್ ನಿನ್ನೆ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭ ವಿಶೇಷ ಘೋಷಣೆಯೊಂದನ್ನು ಸಹ ಮಾಡಿದ್ದಾರೆ.
ಸುದೀಪ್ ವರ್ಷಕ್ಕೊಂದರಂತಷ್ಟೆ ಇತ್ತೀಚಿಗೆ ಸಿನಿಮಾಗಳು ಬಿಡುಗಡೆ ಮಾಡುತ್ತಿದ್ದರು. ಆ ನಿಯಮವನ್ನೀಗ ಮುರಿಯಲು ನಿಶ್ಚಯಿಸಿದ್ದಾರೆ. ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ನೀಡುತ್ತಾರಂತೆ ಸುದೀಪ್, ಈ ಬಗ್ಗೆ ಅವರೇ ಘೋಷಣೆ ಮಾಡಿದ್ದಾರೆ.
ತಮ್ಮ ಹುಟ್ಟುಹಬ್ಬದ ಸಂದರ್ಭ ಈ ಬಗ್ಗೆ ಘೋಷನೆ ಮಾಡಿರುವ ಸುದೀಪ್, ''ವಿಕ್ರಾಂತ್ ರೋಣ' ಸಿನಿಮಾ ಹೆಚ್ಚು ಸಮಯ ತೆಗೆದುಕೊಂಡಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೋವಿಡ್ ಹಾಗು ಇತರೆ ಸಮಸ್ಯೆಗಳಿಂದಾಗಿ ಸಿನಿಮಾ ತಡವಾಗಿದ್ದು ನಿಜ. ಗೆಳೆಯ ಮಂಜು ಅವರದ್ದೇ ಬ್ಯಾನರ್ ಆಗಿರುವ ಕಾರಣ ನಾನು ಸಹ ತುಸು ಹೆಚ್ಚೇ ಸಮಯ ಆ ಸಿನಿಮಾಕ್ಕೆ ಕೊಟ್ಟೆ ಹಾಗಾಗಿ ಸಿನಿಮಾ ತಡವಾಯಿತು'' ಎಂದಿದ್ದಾರೆ.

''ಇನ್ನೊಂದು ವರ್ಷದಲ್ಲಿ ಇನ್ನೊಂದು ಸಿನಿಮಾವನ್ನಷ್ಟೆ ನಾನು ಕೊಡಬಲ್ಲೆ. ಆದರೆ ಅದಾದ ಬಳಿಕ ಪ್ರತಿ ಆರು ತಿಂಗಳಿಗೊಂದು ಸಿನಿಮಾ ಬಿಡುಗಡೆ ಆಗುವಂತೆ ಯೋಜನೆ ಹಾಕಿಕೊಂಡಿದ್ದೇನೆ. ಒಟ್ಟೊಟ್ಟಿಗೆ ಮೂರು-ನಾಲ್ಕು ಸಿನಿಮಾಗಳನ್ನು ನಾನು ಪ್ರಾರಂಭ ಮಾಡುತ್ತಿದ್ದೇನೆ'' ಎಂದಿದ್ದಾರೆ ಸುದೀಪ್.
''ಕೆಲವು ಬಾರಿ ಕತೆ ಇಷ್ಟ ಆಗಿ ಸಿನಿಮಾ ಮಾಡುತ್ತೇವೆ ಕೆಲವು ಬಾರಿ ಒಂದು ಉದ್ದೇಶಕ್ಕಾಗಿ ಸಿನಿಮಾ ಮಾಡುತ್ತೇವೆ. ಕತೆ ಇದ್ದಾಗ ಸಿನಿಮಾ ಬೇಗ ಮುಗಿಯುತ್ತದೆ. ಉದ್ದೇಶ ಹೊಂದಿ ಸಿನಿಮಾ ಮಾಡಲು ಹೋದಾಗ ಸಿನಿಮಾ ಸ್ವಲ್ಪ ತಡವಾಗುತ್ತದೆ. ಕೆಲವೊಮ್ಮೆ ನಮಗೆ ಕೆಲವರೊಟ್ಟಿಗೆ ಕೆಲಸ ಮಾಡಬೇಕೆಂಬ ಆಸೆ ಇರುತ್ತದೆ. ಕೆಲವು ಬಾರಿ ಬೇರೆಯವರಿಗೆ ನಮ್ಮೊಟ್ಟಿಗೆ ಕೆಲಸ ಮಾಡುವ ಆಸೆ ಇರುತ್ತದೆ. ಅವರಿಗಾಗಿ ಕಾಯಬೇಕಾಗುತ್ತದೆ. ಇದು ಸಹ ಸಿನಿಮಾಗಳು ತಡವಾಗಲು ಕಾರಣವಾಗುತ್ತವೆ'' ಎಂದಿದ್ದಾರೆ.
ಆಶ್ಚರ್ಯಕರ ರೀತಿಯಲ್ಲಿ ನಿನ್ನೆ ಸುದೀಪ್ ಹುಟ್ಟುಹಬ್ಬದ ದಿನ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ, ಇದಕ್ಕೆ ಕಾರಣ ನೀಡಿದ ಸುದೀಪ್, ''ಬರ್ತ್‌ಡೇ ದಿನ ಹೊಸ ಸಿನಿಮಾ ಘೋಷಣೆ ಮಾಡುವುದು ಔಟ್‌ಡೇಟೆಡ್ ಆಯ್ತು. ಆ ಹೀರೊದು ಇಷ್ಟು ಆಗಿದೆ, ನಂದು ಇಷ್ಟು ಸಿನಿಮಾ ಘೋಷಣೆ ಆಗಿದೆ ಎಂದು ತೋರಿಸಿಕೊಳ್ಳಬೇಕಾ ? ಸಿನಿಮಾ ಅನೌನ್ಸ್ ಮಾಡುವುದು ಕೂಡ ಈ ಪಬ್ಲಿಸಿಟಿ. ಅದಕ್ಕೊಂದು ಅರ್ಥ ಇದೆ. ಹುಟ್ಟುಹಬ್ಬದ ದಿನ ಸಿನಿಮಾ ಅನೌನ್ಸ್ ಮಾಡುವುದರಿಂದ ಏನನ್ನು ಸಾಧಿಸುತ್ತೀವಿ. ಹೋ ಇನ್ನು ಕೆಲಸ ಇದೆ. ಕೆಲಸ ಖಾಲಿ ಆಗಿಲ್ಲ ಅಂಥಾನಾ? ನನಗೆ ಕೆಲಸ ಇದೆ. ಸುಮ್ಮನೆ ಪೋಸ್ಟರ್, ಬ್ಯಾನರ್ ಅಂತೆಲ್ಲಾ ಖರ್ಚು ಮಾಡುವುದು ನನಗೆ ಇಷ್ಟವಿಲ್ಲ. ಆ ಹಣದಲ್ಲಿ ಯಾರಿಗಾದರೂ ಸಹಾಯ ಮಾಡಬಹುದು. ಸಿನಿಮಾ ಅನೌನ್ಸ್ ಮಾಡ್ತೀವಿ. ಈಗ ಆ ಟ್ರೆಂಡ್ ಇಲ್ಲ. ನಾನಂತೂ ಅದನ್ನು ಫಾಲೋ ಮಾಡುವುದಿಲ್ಲ''
ಇತ್ತೀಚೆಗೆ ಸುದೀಪ್ ತೆಲುಗಿನ 'ರಾಕ್ಷಸುಡು'- 2 ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿ ದೊಡ್ಡದಾಗಿ ಸದ್ದು ಮಾಡಿತ್ತು. ಇದು ನಿಜಾನೋ ಸುಳ್ಳೋ ಅನ್ನುವ ಪ್ರಶ್ನೆ ಸುದೀಪ್ ಮುಂದಿಟ್ಟಾಗ "ಇಲ್ಲ ಅದೆಲ್ಲಾ, ಬರೀ ಗಾಸಿಪ್ ಅಷ್ಟೇ ಎಂದು ಸುದೀಪ್ ಹೇಳಿದ್ದಾರೆ'. 'ಕಬಾಲಿ' ಸಿನಿಮಾ ನಿರ್ಮಾಪಕರು ಹಾಗೂ ವೆಂಕಟ್ ಪ್ರಭು ಜೊತೆ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿರುವುದು ನಿಜ. ಆದರೆ ಸದ್ಯಕ್ಕೆ ಆ ಸಿನಿಮಾಗಳು ಯಾವುದು ಶುರುವಾಗುತ್ತಿಲ್ಲ ಎಂದಿದ್ದಾರೆ ಸುದೀಪ್.


Click it and Unblock the Notifications











