»   » ದುರಾದೃಷ್ಟಯೋಗದ ಸುಳಿಯಲ್ಲಿ ಯೋಗಾನರಸಿಂಹ

ದುರಾದೃಷ್ಟಯೋಗದ ಸುಳಿಯಲ್ಲಿ ಯೋಗಾನರಸಿಂಹ

Posted By: Staff
Subscribe to Filmibeat Kannada

ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತ, ಪ್ರಸಿದ್ಧ ಚಿತ್ರ ಸಾಹಿತಿ ಯೋಗಾನರಸಿಂಹ ಈಗ ಮೈಸೂರಿನ ಜೆ.ಎಸ್‌.ಎಸ್‌. ಆಸ್ಪತ್ರೆಯಲ್ಲಿದ್ದಾರೆ. ಇರುವುದೊಂದೇ ಕಾಲನ್ನು ನೋಡಿಕೊಂಡಾಗಲೆಲ್ಲ ಅವರಿಗೆ ಸಂಕಟ ಉಮ್ಮಳಿಸಿ ಬರುತ್ತದೆ. ಕತ್ತರಿಸಿ ತೆಗೆದ ಅವರ ಬಲಗಾಲು ಕಳೆದ ಡಿಸೆಂಬರ್‌ನಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿತ್ತು .

ಸಿನಿಮಾ ನೋಡುವವರೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಯೋಗಾನರಸಿಂಹ ಅಂದರೆ ಥಟ್ಟನೆ ಗುರುತು ಹತ್ತುವುದು ಕಷ್ಟ . ರಾಜ್‌ಕುಮಾರ್‌, ಬಾಲಕೃಷ್ಣ ರಂಥಾ ಹಿರಿಯರೊಂದಿಗೆ ಅವರು ಸಂಬಂಧ ಹೊಂದಿದ್ದರು. ಪುಟ್ಟಣ್ಣ ಕಣಗಾಲರ ಬಹುತೇಕ ಯಶಸ್ವಿ ಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದರು. ಶುಭಮಂಗಳ, ಕಥಾಸಂಗಮ, ಪಡುವಾರಹಳ್ಳಿ ಪಾಂಡವರು, ಕಾಲೇಜು ರಂಗ, ಧರ್ಮಸೆರೆ, ರಂಗನಾಯಕಿ ಮುಂತಾದ ಸಿನಿಮಾಗಳನ್ನು ನೋಡಿದವರು ಯೋಗಾ ಅವರನ್ನು ಮರೆಯುವಂತಿಲ್ಲ . ಅವರ ಸಾಧನೆಯನ್ನು ಗುರ್ತಿಸಿಯೇ 1998 ರಲ್ಲಿ ಕರ್ನಾಟಕ ಸರ್ಕಾರ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿತ್ತು . ಕನ್ನಡ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಸಂದಿದೆ.

ರಂಗಭೂಮಿಯಲ್ಲೂ ಸೈ ಅನ್ನಿಸಿಕೊಂಡ ಬಹುಮುಖ ಪ್ರತಿಭೆ

ರಂಗಭೂಮಿಯಲ್ಲೂ ಯೋಗಾನರಸಿಂಹ ಅವರದು ಎತ್ತರದ ಸಾಧನೆ. ಹಿರಣ್ಣಯ್ಯ ಮಿತ್ರ ಮಂಡಳಿ, ಕನ್ನಡ ಥಿಯೇಟರ್ಸ್‌, ಯೋಗಣ್ಣ ಕರ್ನಾಟಕ ನಾಟಕ ಸಭಾ, ಶೇಷ ಕಮಲ ಕಲಾಮಂಡಳಿ ಮುಂತಾದ ಡ್ರಾಮಾ ಕಂಪನಿಗಳಲ್ಲಿ ಅವರು ದುಡಿದಿದ್ದಾರೆ. ಶ್ರೀಮಾನ್‌ ಬೇವಾರ್ಸಿ, ನಾಡಮನೆ, ಬೀದಿಕಾಮಣ್ಣ ಮುಂತಾದ ನಾಟಕಗಳ ರಂಗಪ್ರಯೋಗದಲ್ಲಿ ಅವರದ್ದು ಎತ್ತರದ ಸಾಧನೆ. ಉತ್ತಮ ನಾಟಕಕಾರ, ನಟ, ಸಂಗೀತ ನಿರ್ದೇಶಕ, ಸಂಭಾಷಣಾಕಾರ ಮುಂತಾಗಿ ಯೋಗಾನರಸಿಂಹ ಅವರದ್ದು ಬಹುಮುಖ ಪ್ರತಿಭೆ.

ಯೋಗಾನರಸಿಂಹ ಅವರಿಗೀಗ ದುರಾದೃಷ್ಟ ಯೋಗ. ಅವರ ಕುಟುಂಬ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ. ಏರುತ್ತಿರುವ ಆಸ್ಪತ್ರೆಯ ಬಿಲ್ಲನ್ನು ಭರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ . ಯೋಗಾನರಸಿಂಹ ಅವರೀಗ ಸಹೃದಯರ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ದಾನಿಗಳು ಜೆ.ಪಿ. ನಗರದಲ್ಲಿರುವ ಅವರ ಮನೆಯನ್ನು ಖುದ್ದಾಗಿ ಸಂಪರ್ಕಿಸಬಹುದು (ದೂರವಾಣಿ ಸಂಖ್ಯೆ 0821- 489313). ಅಥವಾ ಬ್ಯಾಂಕ್‌ ಖಾತೆ ಸಂಖ್ಯೆ 2/137, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ವಿಶ್ವೇಶ್ವರನಗರ ಶಾಖೆ, ಮೈಸೂರು ಈ ವಿಳಾಸಕ್ಕೆ ತಮ್ಮ ನೆರವನ್ನು ಕಳುಹಿಸಬಹುದು.

English summary
Veteran kannada film literuate yoga narasimha lost his one leg. Now is lying on a bed at mysores jss hospital

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada