ಮತ್ತೆ ಒಂದಾದ ಯೋಗರಾಜ್ ಭಟ್-ದುನಿಯಾ ಸೂರಿ: ಸದ್ಯದಲ್ಲೇ ಪಾತ್ರವರ್ಗ ಘೋಷಣೆ
ನಿರ್ದೇಶಕ ಯೋಗರಾಜ್ ಭಟ್ ಮತ್ತು ದುನಿಯಾ ಸೂರಿ ಒಟ್ಟಿಗೆ ಸೇರಿ ಸಿನಿಮಾ ಮಾಡ್ತಾರೆ ಅಂದ್ರೆ ಅದೊಂದು ವಿಶೇಷ ಹಾಗೂ ಕನ್ನಡ ಕಲಾಭಿಮಾನಿಗಳಲ್ಲಿ ಕುತೂಹಲ ಸಹ ಹೆಚ್ಚಾಗುತ್ತದೆ. ಸಹಜವಾಗಿ ಯೋಗರಾಜ್ ಭಟ್ ಮಾಡುವ ಚಿತ್ರಗಳಲ್ಲಿ ಸೂರಿ ಇರ್ತಾರೆ, ಸೂರಿ ನಿರ್ದೇಶನ ಮಾಡುವ ಚಿತ್ರಗಳಲ್ಲಿ ಭಟ್ಟರ ಕೆಲಸ ಇರುತ್ತೆ ಎಂಬ ಮಾತು ಗಾಂಧಿನಗರದಲ್ಲಿದೆ.
ಇವರಿಬ್ಬರ ಜೊತೆ ಸಂಗೀತ ಹರಿಕೃಷ್ಣ ಸೇರಿದ್ರೆ ಮುಗಿತು. ಆ ಸಿನಿಮಾದ ಹಾಡುಗಳು ಪಕ್ಕಾ ಸೂಪರ್ ಹಿಟ್. ಜಾಕಿ, ಪರಮಾತ್ಮ ಅಂತಹ ಸಿನಿಮಾಗಳು ಆಗಿದ್ದು ಇದೇ ಕಾಂಬಿನೇಷನ್. ಇದೀಗ, ಈ ಕಾಂಬಿನೇಷನ್ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುತ್ತಿದೆ. ಈ ಬಗ್ಗೆ ಸ್ವತಃ ಯೋಗರಾಜ್ ಭಟ್ ಮಾಹಿತಿ ನೀಡಿದ್ದು, ಸದ್ಯದಲ್ಲೇ ಪಾತ್ರವರ್ಗ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಅಂದ್ಹಾಗೆ, ಈ ಪ್ರಾಜೆಕ್ಟ್‌ನಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಪಾತ್ರ ಸಹ ಇರಲಿದೆ ಎನ್ನುವ ವಿಚಾರವೂ ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ ಬಿಸಿ ಪಾಟೀಲ್ ಸಂಸ್ಥೆಯಿಂದ ಅವರ ಮಗಳು ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದ ಬಗ್ಗೆ ಚರ್ಚಿಸಲು ಬಿಸಿ ಪಾಟೀಲ್ ನಿವಾಸದಲ್ಲಿ ಎಲ್ಲರೂ ಭೇಟಿಯಾಗಿದ್ದು, ಫೋಟೋಗಳು ಸಹ ವೈರಲ್ ಆಗಿದೆ. ಸ್ವತಃ ಯೋಗರಾಜ್ ಭಟ್ ಸಿನಿಮಾ ಬರ್ತಿದೆ ಎಂದು ಪ್ರಕಟಿಸಿದ್ದಾರೆ.
''ರಾಜ್ಯದ ಕೃಷಿ ಮಂತ್ರಿಗಳು ಸನ್ಮಾನ್ಯ ಶ್ರೀ ಬಿ.ಸಿ.ಪಾಟೀಲ್ ಅವರ ಜೊತೆ.. ಸೂರಿ, ಹರಿಕೃಷ್ಣ, ವಿಕಾಸ್, ಸುಧೀರ್... ಒಂದು ಅದ್ಭುತ ಸಿನಿಮಾ ಲೈನ್ ಅಪ್ ಆಯ್ತು.. ಸ್ನೇಹಿತರೆಲ್ಲರ ಮುದ್ದಾಟ ಗುದ್ದಾಟ ಹಾಗು ಸಪೋರ್ಟ್ ಜೊತೆ ನಿರ್ದೇಶನ ನನ್ನದು.. ನಟವರ್ಗ ಅದ್ಭುತ ಆದ್ರೆ ಇವತ್ತು ಹೇಳಂಗಿಲ್ಲ.. ಶೀಘ್ರದಲ್ಲೇ ಬಾಕಿ ಸುದ್ದಿ.. ನನ್ನೆಲ್ಲಾ ಗುರುಗಳಾದ ನನ್ನ ಗೆಳೆಯರಿಗೆ ಗುರು ಪೂರ್ಣಿಮಾ ಶುಭಾಶಯಗಳು..'' ಎಂದು ಭಟ್ಟರು ಪೋಸ್ಟ್ ಹಾಕಿದ್ದಾರೆ.

ಭಟ್ ಮುಂದಿನ ಸಿನಿಮಾ
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಗಾಳಿಪಟ 2 'ಸಿನಿಮಾ ಮಾಡ್ತಿದ್ದಾರೆ ಯೋಗರಾಜ್ ಭಟ್. ಚಿತ್ರೀಕರಣ ಬಹುತೇಕ ಮುಗಿದಿದೆ ಎಂಬ ಮಾಹಿತಿ ಇದೆ. ಕೊನೆಯದಾಗಿ 'ಪಂಚತಂತ್ರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
ದುನಿಯಾ ಸೂರಿ ಮುಂದಿನ ಸಿನಿಮಾ
ಮತ್ತೊಂದೆಡೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಜೊತೆ ದುನಿಯಾ ಸೂರಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರವೂ ಕೊನೆಯ ಹಂತದ ಶೂಟಿಂಗ್ ಮಾಡ್ತಿದೆ.


Click it and Unblock the Notifications











