'ಕಾಳಿದಾಸ ಕನ್ನಡ ಮೇಷ್ಟ್ರು'ಗೆ ಜೈಕಾರ ಹಾಕಿದ ಯೋಗರಾಜ್ ಭಟ್
ನವರಸ ನಾಯಕ ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಮನರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾಗೆ ನಿರ್ದೇಶಕ ಯೋಗರಾಜ್ ಭಟ್ ಜೈಕಾರ ಹಾಕಿದ್ದಾರೆ.
ಇತ್ತೀಚೆಗಷ್ಟೇ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ಯೋಗರಾಜ್ ಭಟ್ ವೀಕ್ಷಿಸಿದ್ದರು. ಸಿನಿಮಾದಲ್ಲಿರುವ ವಿಷಯ ಯೋಗರಾಜ್ ಭಟ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಮಕ್ಕಳ ಮುಗ್ಧ ಮನಸ್ಸು, ಚಿಕ್ಕವಯಸ್ಸಿನಲ್ಲಿ ಮಕ್ಕಳು ಎದುರಿಸುವ ವೇದನೆಯನ್ನ ನಿರ್ದೇಶಕ ಕವಿರಾಜ್ ತೆರೆ ಮೇಲೆ ತಂದಿರುವ ರೀತಿಗೆ ಯೋಗರಾಜ್ ಭಟ್ ಫಿದಾ ಆಗಿದ್ದಾರೆ.
''ನೋಡುಗರನ್ನು ಹಿಡಿದು ನಿಲ್ಲಿಸಿ - ''ನಾವೆಲ್ಲ ಎತ್ತ ಹೊರಟಿದ್ದೇವೆ?'' ಎಂದು ಚಿಂತಿಸಲು ಹಚ್ಚುವ ಚಿತ್ರ 'ಕಾಳಿದಾಸ ಕನ್ನಡ ಮೇಷ್ಟ್ರು'. ಇಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಹಲವಾರು ಪ್ರಶ್ನೆಗಳಿವೆ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಚಿಂತನೆ ಇದೆ. ನಕ್ಕು ನಗಿಸುತ್ತಲೇ ಇಂದಿನ ವಿದ್ಯಾಕ್ಷೇತ್ರದ ವೇದನೆಗಳ ಬಗ್ಗೆ ಕಣ್ಣೀರು ತುಂಬಿಕೊಳ್ಳುತ್ತದೆ.

ಒಂದೊಳ್ಳೆ ಯೋಚನೆಯನ್ನು ಮನರಂಜನಾತ್ಮಕವಾಗಿ ಹೇಳಿರುವ ನಿರ್ದೇಶಕರು, ನಟ ವರ್ಗ, ನಿರ್ಮಾಪಕರು ಹಾಗೂ ಇಡೀ ತಂಡದ ಪ್ರತಿ ಸದಸ್ಯರ ಶ್ರಮಕ್ಕೆ ಒಬ್ಬ ಕನ್ನಡ ಪ್ರೇಕ್ಷಕನಾಗಿ ನನ್ನ ಶುಭಾಶಯಗಳು. ವೀಕ್ಷಕರಲ್ಲಿ ವಿನಂತಿ - ಖಂಡಿತ ಚಿತ್ರ ನೋಡಿ...ಬೆನ್ನುತಟ್ಟಿ. ನಿಮಗೆ ನೀವೇ ಭೇಟಿ ಆಗುವ ಅವಕಾಶವನ್ನು ಕಳೆದುಕೊಳ್ಳಬೇಡಿ - ಜೈ ಕಾಳಿದಾಸ'' ಎಂದು ತಮ್ಮ ಕೈಬರಹದಲ್ಲಿ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ಹೊಗಳಿದ್ದಾರೆ ಯೋಗರಾಜ್ ಭಟ್.
'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ನೋಡಿ ಜಯಂತ್ ಕಾಯ್ಕಿಣಿ ಮತ್ತು ಕವಿತಾ ಲಂಕೇಶ್ ಕೂಡ ಭೇಷ್ ಎಂದಿದ್ದರು. ಫ್ಯಾಮಿಲಿ ಆಡಿಯನ್ಸ್ ನ ಹೆಚ್ಚಾಗಿ 'ಕಾಳಿದಾಸ ಕನ್ನಡ ಮೇಷ್ಟ್ರು' ಆಕರ್ಷಿಸುತ್ತಿದೆ. ಸಿನಿಮಾ ನೋಡಿದವರೆಲ್ಲಾ ಚಿತ್ರತಂಡದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











