Garadi: ಬಿಡುಗಡೆಯಾದ ಎರಡೇ ದಿನಕ್ಕೆ ಬಿಸಿ ಪಾಟೀಲ್ 'ಗರಡಿ'ಗೆ ಪರಭಾಷಾ ಸಿನಿಮಾದಿಂದ ಸಮಸ್ಯೆ!
ಯೋಗರಾಜ್ ಭಟ್ ನಿರ್ದೇಶಿಸಿದ ಯಶಸ್ ಸೂರ್ಯ ಮತ್ತು ಸೋನಾಲ್ ಮಾಂಟೇರೋ ನಟನೆಯ 'ಗರಡಿ' ಸಿನಿಮಾ ನವಂಬರ್ 10 ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗರಡಿ ಮನೆಯ ಸುತ್ತ ನಡೆಯುವ ಈ ದೇಸಿ ಸಿನಿಮಾವನ್ನು ಜನ ಮೆಚ್ಚಿದ್ದಾರೆ. ಆದರೆ, ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಸಮಸ್ಯೆಯನ್ನು ಎದುರಿಸಬೇಕಾಗಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಕ್ಕೆ ಈಗಾಗಲೇ ತೊಂದರೆಯಾಗುತ್ತಿದೆ. ಭಾನುವಾರ ತೆರೆಕಾಣಲಿರುವ ಪರಭಾಷಾ ಚಲನಚಿತ್ರಕ್ಕಾಗಿ 'ಗರಡಿ' ಶೋಗಳನ್ನು ಎತ್ತಲಾಗುತ್ತಿದೆ ಎಂದು ನಿರ್ಮಾಪಕರಾದ ಸೌಮ್ಯ ಫಿಲ್ಮ್ಸ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ಎನ್. ಸುರೇಶ್ ಅವರಿಗೆ ಪತ್ರ ಬರೆದಿದೆ.

ಸೌಮ್ಯ ಫಿಲ್ಮ್ಸ್ ಬರೆದಿರುವ ಪತ್ರದಲ್ಲಿ ಏನಿದೆ...?
ನಮ್ಮ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ನಿರ್ದೇಶಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಿ.ಸಿ. ಪಾಟೀಲ್, ಯಶಸ್ ಸೂರ್ಯ, ಸೋನಾಲ್ ಮಾಂಟೇರೋ ಹಾಗು ರವಿಶಂಕರ್ ಸೇರಿದಂತೆ ಇನ್ನೂ ಅನೇಕ ಖ್ಯಾತ ಕಲಾವಿದರು ಅಭಿನಯಿಸಿರುವ 'ಗರಡಿ' ಚಲನಚಿತ್ರ ಇದೇ ನವಂಬರ್ 10 ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇಂಪಥಹ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇದೇ ಭಾನುವಾರ ಪರಭಾಷೆ ಚಿತ್ರವೊಂದು ರಾಜ್ಯದೆಲೆ ತೆರೆ ಕಾಣಲು ಸಜ್ಜಾಗಿದ್ದು ಮಲ್ಟಿಪ್ಲೆಕ್ಸ್‌ಗಳಲ್ಲಿ, ನಮ್ಮ 'ಗರಡಿ' ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಗಣೀಯವಾಗಿ ತಗ್ಗಿಸುವ ಹುನ್ನಾರ ನಡೆಸಲಾಗುತ್ತಿದೆ. ಪ್ರೇಕ್ಷಕರ ಮೆಚ್ಚುಗೆ ಪಡೆದ ಅದ್ಧೂರಿ ತಾರಾಗಣವಿರುವ ಯಶಸ್ವಿ ಚಿತ್ರವೊಂದಕ್ಕೆ ಈ ಪರಿಸ್ಥಿತಿ ಎದುರಾಗುತ್ತಿರುವುದು ನಮ್ಮ ಚಿತ್ರತಂಡ ಮಾತ್ರವಲ್ಲದೆ ಇಡೀ ಚಿತ್ರೋದ್ಯಮದ ಪಾಲಿಗೂ ಇದೊಂದು ಅತ್ಯಂತ ಕಳವಳಕಾರಿ ವಿಷಯವಾಗಿದೆ.
ಚಿತ್ರಮಂದಿರಗಳ ವ್ಯಾವಹಾರಿಕ ಹಾಗು ಚಿತ್ರರಂಗಕ್ಕೆ ಅವುಗಳ ಕೊಡುಗೆಗಳನ್ನು ನಾನು ಗೌರವಿಸುತ್ತೇನೆ. ಆದರೆ, ಪರಭಾಷಾ ಚಿತ್ರಗಳಿಗಾಗಿ ನಮ್ಮ 'ಗರಡಿ' ಚಿತ್ರದಂತಹ ಯಶಸ್ವಿ ಪ್ರಾದೇಶಿಕ ಚಲನಚಿತ್ರಗಳ ವಿರುದ್ಧ ಅವುಗಳು ಅನುಸರಿಸುತ್ತಿರುವ ಈ ಇಬ್ಬಂದಿ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಒಂದು ವೇಳೆ ಬರುವ ಭಾನುವಾರ ನಮ್ಮ ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಕಡಿತಗೊಳಿಸಿದ್ದೇ ಆದರೆ ಅದು ನಮ್ಮ ಚಿತ್ರದ ವ್ಯಾಪ್ತಿ, ಹಾಗು ಯಶಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಷ್ಟೇ ಅಲ್ಲದೆ ಕನ್ನಡ ಅಭಿಮಾನಿಗಳ ಭಾವನೆಗಳನ್ನು ಕೆರಳಿಸುವುದರಲಿ, ಯಾವುದೇ ಸಂದೇಹವಿಲ್ಲ.

ನಮ್ಮ ಪ್ರಾದೇಶಿಕ ಚಲನಚಿತ್ರಗಳಿಗೆ ಹಂಚಿಕೆ ಹಾಗು ಪ್ರದರ್ಶನಗಳ ವಿಷಯದಲ್ಲಿ ಸಮಾನ ನ್ಯಾಯ ದೊರಕಿಸಿಕೊಡುವುದು ತುಂಬಾ ಮುಖ್ಯವಾಗಿದೆ. ವಿಶೇಷವಾಗಿ ಇಂಥಹ ಪರಭಾಷ ಚಿತ್ರಗಳ ಬಿಡುಗಡೆಗಳೊಂದಿಗೆ ಸ್ಪರ್ಧಿಸುವಾಗ. ಹಾಗಾಗಿ ತಾವುಗಳು ಈ ಕೂಡಲೇ ಮಧ್ಯೆ ಪ್ರವೇಶಿಸಿ ಈ ವಿಷಯವನ್ನು ಕೂಡಲೇ ಪರಿಶೀಲಿಸಿ ಪರಿಹರಿಸಬೇಕೆಂದು ನಾನು ವಿನಂತಿಸುತ್ತೇನೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ, 'ಗರಡಿ'ಯ ನ್ಯಾಯಯುತ ಪ್ರಾತಿನಿಧ್ಯ ಮತ್ತು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನೀವು ಈ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ನಂಬುತ್ತೇನೆ. ಎಂದು ಸಛಮ್ಯ ಫಿಲ್ಮಂ ಪರವಾಗಿ ನಿರ್ಮಾಪರು ಪತ್ರ ಬರೆದಿದ್ದಾರೆ.
ಸಿನಿಮಾಗೆ ಪ್ರೇಕ್ಷಕರು ಉತ್ತಮ ಅಂಕಗಳನ್ನು ನೀಡಿದ್ದಾರೆ. ಟ್ವಿಟರ್‌ನಲ್ಲಿ ಹಲವು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಸಿನಿಮಾದ ಕಥೆ ಅತ್ಯದ್ಭುತವಾಗಿದೆ. ಕಲಾವಿದರ ಆಯ್ಕೆ ತುಂಬಾನೇ ಚೆನ್ನಾಗಿದೆ. ಕಥೆ - ನಿರ್ದೇಶನ ಚೆನ್ನಾಗಿದೆ. ದರ್ಶನ್ ಅತಿಥಿ ಪಾತ್ರ ಮೇಜರ್ ಹೈಲೈಟ್. ಹಾಡು, ಡೈಲಾಗ್, ಎಡಿಟಿಂಗ್, ಆರ್ಟ್ ವರ್ಕ್, ಫೈಟ್ಸ್ ಓಕೆ. ನೆಗೆಟಿವ್ ಏನಿಲ್ಲ" ಎಂದು ನೆಟ್ಟಿಗರು ಸಿನಿಮಾ ಬಗ್ಗೆ ವಿಮರ್ಶೆ ಬರೆದು ಹಾಕಿದ್ದಾರೆ.


Click it and Unblock the Notifications










