'ಗರಡಿ' ಚಿತ್ರದಲ್ಲಿ ದರ್ಶನ್ ಜಬರ್ದಸ್ತ್ ಪಾತ್ರ ರಿವೀಲ್: ಅಭಿಮಾನಿಗಳು ಥ್ರಿಲ್ಲಾಗೋದು ಗ್ಯಾರೆಂಟಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಈ ವರ್ಷವೇ ಥಿಯೇಟರ್‌ಗೆ ಬರುತ್ತೋ ಇಲ್ವೋ ಗೊತ್ತಿಲ್ಲ. ಆದರೆ ದರ್ಶನ್ ಅಂತೂ ಶೀಘ್ರದಲ್ಲೇ ತೆರೆಮೇಲೆ ಬಂದು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 'ಗರಡಿ' ಚಿತ್ರದಲ್ಲಿ ದರ್ಶನ್ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇಯಿದೆ. ಬಿ. ಸಿ ಪಾಟೀಲ್ ಈ ಸಿನಿಮಾ ನಿರ್ಮಾಣದ ಜೊತೆಗೆ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಗಾಳಿಪಟ'- 2 ನಂತರ ಭಟ್ರು 'ಗರಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಹಳೇ ಮೈಸೂರಿನ ಹಿನ್ನೆಲೆಯಲ್ಲಿ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಇದು ಅನ್ನೋದು ಗೊತ್ತಾಗುತ್ತಿದೆ. ಇತ್ತೀಚೆಗೆ ಚಿತ್ರದ 'ಹೊಡಿಲೆರೆ ಹಲಗಿ' ಹಾಡು ರಿಲೀಸ್ ಮಾಡಿ ಪ್ರಮೋಷನ್‌ಗೆ ಚಾಲನೆ ಕೊಡಲಾಗಿದೆ. ಚಿತ್ರದಲ್ಲಿ ಯಶಸ್ ಸೂರ್ಯ ಹಾಗೂ ಸೋನಲ್ ಮಂತೆರೆಯೋ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. 'ಕುಸ್ತಿ' ಅಖಾಡ ಹಾಗೂ ಕುಸ್ತಿಪಟು ನಾಯಕನ ಜೀವನದಲ್ಲಾಗುವ ವಿಚಾರಗಳ ಸುತ್ತಾ ಸಿನಿಮಾ ಕತೆ ಸುತ್ತುತ್ತದೆ.

70 ದಿನಗಳ ಕಾಲ 'ಗರಡಿ' ಸಿನಿಮಾ ಚಿತ್ರೀಕರಣ ನಡೆದಿದೆ. ಆರ್ಮುಗ ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ನಟ ದರ್ಶನ್ ಸಿನಿಮಾ ಚಿತ್ರೀಕರಣದ ಸೆಟ್‌ಗೆ ಹೋಗಿದ್ದ ವಿಡಿಯೋ ವೈರಲ್ ಆಗಿತ್ತು.
'ಗರಡಿ' ಸಿನಿಮಾ ಕಥೆಯೇನು?
ಇತ್ತೀಚೆಗೆ 'ಗರಡಿ' ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ವೇಳೆ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ ಕಥೆ ಬಿಚ್ಚಿಟ್ಟಿದ್ದರು. "ಗರಡಿ ಅನ್ನುವ ಪದವನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಆ ಕಾಲದಲ್ಲಿ ಊರು ಕಾಯಲು ದೇಹವನ್ನು ಹುರಿಗೊಳಿಸಿಕೊಳ್ಳವವರ ಜಾಗ ಗರಡಿ. ವ್ಯಾಯಾಮ ಶಾಲೆ ಆಗಿತ್ತು. ಕುಸ್ತಿ ನಮ್ಮ ಮೂಲ ಸಮರ ಕಲೆಗಳಲ್ಲಿ ಒಂದು. ಕುಸ್ತಿ ಬಲ್ಲ ರಂಗಪ್ಪನ ಪಾತ್ರದಲ್ಲಿ ಬಿ. ಸಿ ಪಾಟೀಲ್ ಸರ್ ನಟಿಸುತ್ತಿದ್ದಾರೆ. ರಂಗಪ್ಪನ ಶಿಷ್ಯಂದಿರು ಬಹಳ ಇರುತ್ತಾರೆ. ಆದರೆ ನಾಯಕ ಸೂರಿ(ಯಶಸ್ ಸೂರ್ಯ)ಗೆ ಮಾತ್ರ ಅವರ ಬಳಿ ಕಲಿಯಲು ಅವಕಾಶ ಸಿಗುವುದಿಲ್ಲ"

ದರ್ಶನ್ ಪಾತ್ರ ಏನು?
"ಏಕಲವ್ಯ ದ್ರೋಣನ ಕಥೆಯಂತೆ ಸೂರಿ ಹೇಗೆ ಕಲ್ಲಿನ ಜೊತೆ ಕುಸ್ತಿ ಕಲಿತು, ರಂಗಪ್ಪನ ದುಶ್ಮನಿ ಕಟ್ಟಿಕೊಂಡು ಗೆಲ್ತಾನೆ ಅನ್ನೋದು ಸಿನಿಮಾ ಕಥೆ. ಆರ್ಮುಗ ರವಿಶಂಕರ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಸೂರಿ ಸಾವಿನ ಹೊಸ್ತಿಲಲ್ಲಿ ಇದ್ದಾಗ ಬಂದು ಕಾಪಾಡುವುದು ಆತನ ಅಣ್ಣ. ಅವನು ಕೂಡ ಒಬ್ಬ ಕುಸ್ತಿಪಟು. ಆ ಪಾತ್ರವನ್ನು ದರ್ಶನ್ ಸರ್ ಮಾಡುತ್ತಿದ್ದಾರೆ" ಎಂದು ದರ್ಶನ್ ಪಾತ್ರ ಏನು ಅನ್ನುವುದನ್ನು ಭಟ್ರು ರಿವೀಲ್ ಮಾಡಿದ್ದರು.
ಖಡಕ್ ಪಾತ್ರದಲ್ಲಿ ದಾಸ
ಆರಡಿ ಕಟೌಟ್ ದರ್ಶನ್ ಹುರಿಗಟ್ಟಿದ ಮೈಕಟ್ಟಿನಿಂದ ಸದಾ ಅಭಿಮಾನಿಗಳನ್ನು ಸೆಳೆಯುತ್ತಾರೆ. ಪ್ರತಿದಿನ ಜಿಮ್‌ನಲ್ಲಿ ಕಸರತ್ತು ನಡೆಸಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ 'ಗರಡಿ' ಚಿತ್ರದಲ್ಲಿ ಕುಸ್ತಿ ಪಟು ಪಾತ್ರ ಸಿಕ್ಕಿದೆ. ದರ್ಶನ್ ಹೈಟ್, ಪರ್ಸನಾಲಿಟಿ, ಲುಕ್ಕ, ಖದರ್, ವಾಯ್ಸ್ ಹಾಗೂ ಆಕ್ಷನ್‌ಗೆ ಧಮಾಕಾಗೆ ಹೇಳಿ ಮಾಡಿಸಿದ ಪಾತ್ರ ಇದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕೆಲವೇ ನಿಮಿಷಗಳು ತೆರೆಮೇಲೆ ಇದ್ದರೂ ದರ್ಶನ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಡುವ ಸುಳಿವು ಸಿಕ್ತಿದೆ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು 'ಗರಡಿ' ಚಿತ್ರಕ್ಕಾಗಿ ಕಾತರದಿಂದ ಕಾಯುವಂತಾಗಿದೆ.
'ಹೊಡಿರೆಲೆ ಹಲಗಿ' ಸೂಪರ್ ಹಿಟ್
ವಿ. ಹರಿಕೃಷ್ಣ ಸಂಗೀತದಲ್ಲಿ ಮೂಡಿ ಬಂದಿರುವ 'ಗರಡಿ' ಚಿತ್ರದ 'ಹೊಡಿರೆಲೆ ಹಲಗಿ' ಸಾಂಗ್ ಸಖತ್ ಸದ್ದು ಮಾಡ್ತಿದೆ. ಕೆಲವೇ ದಿನಗಳಲ್ಲಿ 16ಲಕ್ಷ ವೀವ್ಸ್ ಸಾಧಿಸಿದೆ. ನಿಶ್ವಿಕಾ ನಾಯ್ಡು ಬಿಂದಾಸ್ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ. ಯೋಗರಾಜ್ ಭಟ್ರು ಸಾಹಿತ್ಯ ಬರೆದಿರುವ ಹಾಡನ್ನು ಉತ್ತರಕರ್ನಾಟಕ ಶೈಲಿ ಭಾಷೆಯಲ್ಲಿ ಮೇಘನಾ ಹಳಿಯಾಳ್ ಹಾಡಿ ಕಿಕ್ ಕೊಟ್ಟಿದ್ದಾರೆ. 'ಗರಡಿ' ಸಿನಿಮಾ ರಿಲೀಸ್ ಯಾವಾಗ ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











