ಮುಂಗಾರು ಮಳೆ, ಗಾಳಿಪಟ ಬಿಗ್ಗೆಸ್ಟ್ ಹಿಟ್ ಆದಾಗ ಸ್ಟಾರ್ಸ್ ಕಾಯುತ್ತಿದ್ದರೂ ಭಟ್ರು ಯಾಕೆ ದಿಗಂತ್‌ಗೆ ನಿರ್ದೇಶನ ಮಾಡಿದ್ರು?
ಮುಂಗಾರು ಮಳೆ ಕನ್ನಡ ಚಲನಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿಯುವಂತಹ ದಂತಕತೆ ಎಂದೇ ಹೇಳಬಹುದು. ಕಳೆದ ವರ್ಷ ಕಾಂತಾರ ಯಾವ ರೀತಿ ಹೆಚ್ಚೇನೂ ನಿರೀಕ್ಷೆ ಇಲ್ಲದೇ ಬಂದು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತೋ ಅಂತಹದ್ದೇ ಸಂಚಲನವನ್ನು ಸೃಷ್ಟಿಸಿದ್ದ ಚಿತ್ರ ಮುಂಗಾರು ಮಳೆ.
ಈ ಚಿತ್ರದಲ್ಲಿ ನಟಿಸಿದ್ದ ಎಲ್ಲಾ ಕಲಾವಿದರೂ ಸಹ ಖ್ಯಾತಿಯನ್ನು ಪಡೆದುಕೊಂಡರು. ಗಣೇಶ್ ಗೋಲ್ಡನ್ ಸ್ಟಾರ್ ಆದರೆ ಪೂಜಾ ಗಾಂಧಿ ಸ್ಟಾರ್ ನಟಿಯಾಗಿಬಿಟ್ಟರು. ಇಷ್ಟರ ಮಟ್ಟಿಗೆ ಸದ್ದನ್ನು ಮಾಡಿದ್ದ ಈ ಚಿತ್ರದ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ದೊಡ್ಡ ದೊಡ್ಡ ಆಫರ್‌ಗಳು, ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳುವ ಅವಕಾಶಗಳು ಹರಸಿ ಬಂದದ್ದು ಸುಳ್ಳಲ್ಲ.

ಆದರೆ ಯೋಗರಾಜ್ ಭಟ್ ಮಾತ್ರ ಮತ್ತೆ ಗಣೇಶ್‌ಗೆ ಆಕ್ಷನ್ ಕಟ್ ಹೇಳಿದ್ರು. ಹೌದು, 2006ರಲ್ಲಿ ಮುಂಗಾರು ಮಳೆ ಅಬ್ಬರದ ಬಳಿಕ 2008ರಲ್ಲಿ ಮತ್ತೆ ಗಣೇಶ್‌ಗೆ ಯೋಗರಾಜ್ ಭಟ್‌ಗೆ ಗಾಳಿಪಟ ಎಂಬ ಚಿತ್ರವನ್ನು ನಿರ್ದೇಶಿಸಿದರು.
ಈ ಚಿತ್ರವೂ ಸಹ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತು ಹಾಗೂ ಈ ಮೂಲಕ ನಿರ್ದೇಶಕ ಯೋಗರಾಜ್ ಭಟ್‌ಗೆ ಮತ್ತಷ್ಟು ಬೇಡಿಕೆ ಹೆಚ್ಚಾಯಿತು. ಆದರೆ ಯೋಗರಾಜ್ ಭಟ್ ಮಾತ್ರ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳದೇ ತಮ್ಮದೇ ಮುಂಗಾರು ಮಳೆ ಚಿತ್ರದಲ್ಲಿ ಸೈಡ್ ರೋಲ್ ಮಾಡಿದ್ದ ಹಾಗೂ ಗಾಳಿಪಟ ಚಿತ್ರದಲ್ಲಿ ನಾಯಕನ ಸ್ನೇಹಿತನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ದಿಗಂತ್‌ಗೆ ಚಿತ್ರವೊಂದನ್ನು ನಿರ್ದೇಶಿಸಿದರು.
ಹೌದು, ಮುಂಗಾರು ಮಳೆ ಹಾಗೂ ಗಾಳಿಪಟ ಬಳಿಕ ಯೋಗರಾಜ್ ಭಟ್ ಮನಸಾರೆ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದರ ಬೆನ್ನಲ್ಲೇ ಪಂಚರಂಗಿ ಎಂಬ ಚಿತ್ರವನ್ನೂ ಸಹ ನಿರ್ದೇಶಿಸಿದ್ದರು. ಈ ಎರಡು ಚಿತ್ರಗಳಲ್ಲಿಯೂ ಸಹ ದಿಗಂತ್ ನಾಯಕ.
ಹೀಗೆ ದೊಡ್ಡ ದೊಡ್ಡ ಯಶಸ್ಸಿನ ಬಳಿಕ ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶಿಸುವ ಎಲ್ಲಾ ಅವಕಾಶಗಳಿದ್ದರೂ ಯೋಗರಾಜ್ ಭಟ್ ಯಾಕೆ ದಿಗಂತ್‌ಗೆ ಆಕ್ಷನ್ ಕಟ್ ಹೇಳಿದ್ರು ಎಂಬ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಪ್ರಶ್ನೆಗೆ ಇದೀಗ ಸ್ವತಃ ದಿಗಂತ್ ನಮ್ಮ ಕೆಎಫ್ಐ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ತಮ್ಮ ಮುಂದಿನ ಚಿತ್ರ 'ಯದಾ ಯದಾ ಹೀ' ಪ್ರಚಾರಕ್ಕಾಗಿ ಪಾಲ್ಗೊಂಡಿದ್ದ ಸಂದರ್ಶನದಲ್ಲಿ ಮಾತನಾಡಿದ ದಿಗಂತ್ ಗಣೇಶ್ ಹಾಗೂ ಯೋಗರಾಜ್ ಭಟ್ ಜತೆಗಿನ ಸ್ನೇಹದ ಬಗ್ಗೆ ಮಾತನಾಡಿದರು. "ಯೋಗರಾಜ್ ಭಟ್ರಂತೂ ನಮ್ಮ ಸೋದರ ಮಾವನ ಥರ. ನಮ್ಮ ಫ್ಯಾಮಿಲಿಯವರು ಅಲ್ಲದೇ ಇದ್ರೂ ನಮ್ಮ ಫ್ಯಾಮಿಲಿಯವರಿಗಿಂತ ಹೆಚ್ಚು. ಬಾಂಧವ್ಯ, ಗೆಳೆತನ ಎಲ್ಲಾ ಚೆನ್ನಾಗಿದೆ" ಎಂದು ತಿಳಿಸಿದರು.
ಇನ್ನೂ ಮುಂದುವರಿದು ಯೋಗರಾಜ್ ಭಟ್ ಅವರನ್ನು ನಿಮ್ಮ ಫೇವರಿಟ್ ನಟ ಯಾರೆಂದು ಕೇಳಿದರೆ ದಿಗಂತ್ ಎಂದು ಹೇಳುತ್ತಾರೆ ಎಂಬುದರ ಕುರಿತು ಮಾತನಾಡಿದ ದಿಗಂತ್ "ಮುಂಗಾರು ಮಳೆ ಆದಮೇಲೆ ಅವರು ಯಾವ ಹೀರೊ ತಗೊಂಡಿದ್ರೂ ಡೇಟ್ಸ್ ಕೊಡ್ತಾ ಇದ್ರು. ಗಣೇಶ್ ಅವರ ಜತೆಗೆ ನನ್ನನ್ನೂ ಸಹ ಓರ್ವ ಹೀರೊವನ್ನಾಗಿ ಮಾಡಿದ್ರು. ಗಾಳಿಪಟ ಹಿಟ್ ಆದಾಗ ಯಾವ ಸ್ಟಾರ್ ಕೇಳಿದ್ರೂ ಡೇಟ್ಸ್ ಕೊಡ್ತಾ ಇದ್ರು. ಆದರೆ ಅವರು ನನ್ನ ಜತೆ ಮನಸಾರೆ ಹಾಗೂ ಪಂಚರಂಗಿ ಚಿತ್ರ ಮಾಡಿದ್ರು. ಯಾಕಂದರೆ ಅವರ ಬರವಣಿಗೆಗೆ ನಾನು ಇಲ್ಲ ಗಣೇಶ್ ತುಂಬಾ ಚೆನ್ನಾಗಿ ಸೂಟ್ ಆಗ್ತೀವಿ ಅನ್ನೋದು ಅವರಿಗೂ ಗೊತ್ತು. ಅದನ್ನು ಅವರೂ ಕೂಡ ಗೊತ್ತು. ಅದನ್ನು ಅವರು ತುಂಬಾ ಖುಷಿಯಿಂದ ಹೇಳಿಕೊಳ್ತಾರೆ. ಹಾಗಾಗಿ ನಾವು ಅಷ್ಟು ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದೇವೆ" ಎಂದು ಹೇಳಿಕೆ ನೀಡಿದರು.


Click it and Unblock the Notifications











