ಬಾಗಲಕೋಟೆಯಲ್ಲಿ ಯೋಗರಾಜ್ ಭಟ್ಟರು, 'ಗರಡಿ' ಸೇರಿದ ಸಚಿವ ಪಾಟೀಲ್!
'ಗಾಳಿಪಟ 2' ಸಿನಿಮಾ ಬಿಡುಗಡೆ ಮುಂದಿಟ್ಟುಕೊಂಡು ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭರದಿಂದ ತೊಡಗಿಸಿಕೊಂಡಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.
Recommended Video

ಯೋಗರಾಜ್ ಭಟ್ಟರು 'ಗರಡಿ' ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಮೊದಲು ಬೆಂಗಳೂರಿನ ಜಿವಿ ಅಯ್ಯರ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಈಗ ಬಾಗಲಕೋಟೆಗೆ ಹಾರಿದ್ದು ಅಲ್ಲಿ ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.
ಸೌಮ್ಯ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಗರಡಿ' ಸಿನಿಮಾದ ಚಿತ್ರೀಕರಣ ಪ್ರಸ್ತುತ ಬಾದಾಮಿಯ ಮೇನಬಸದಿ ಹಾಗೂ ಸುತ್ತ-ಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ನಟ ಯಶಸ್ ಸೂರ್ಯ ನಾಯಕ ನಟನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಸೋನಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇಂದು ಬಾದಾಮಿಯಲ್ಲಿ ನಡೆದ ಚಿತ್ರೀಕರಣದಲ್ಲಿ ಬಿಸಿ ಪಾಟೀಲ್ ಭಾಗವಹಿಸಿದ್ದರು. ಚಿತ್ರೀಕರಣ ಸೆಟ್‌ನಲ್ಲಿ ಮಾಧ್ಯಮದವರೊಟ್ಟಿಗೆ ಮಾತನಾಡಿದ ಬಿ.ಸಿ.ಪಾಟೀಲ್, ''ನಾನು ಸಿನಿಮಾದಲ್ಲಿ ನಟಿಸಲೆಂದೇ ಪೊಲೀಸ್ ನೌಕರಿ ಬಿಟ್ಟು ಬಂದೆ. ಸಿನಿಮಾ ಗೀಳು ಬಿಟ್ಟು ಬಿಡದ ಮಾಯೆ. ನನಗೆ ಕಲೆ ಬಗ್ಗೆ ವಿಶೇಷ ಆಸಕ್ತಿ ಇದೆ. ರಾಜಕಾರಣದಲ್ಲಿ ಇದ್ದಾಗಲೂ ಸಿನಿಮಾ ಮಾಡುತ್ತೇನೆ. ಈಗ ಗರಡಿ ಸಿನಿಮಾ ಮಾಡುತ್ತಿದ್ದು. ಕೆಲಸದ ಒತ್ತಡ, ಕಾರ್ಯಚಟುವಟಿಕೆಗಳ ನಡುವೆ ಬಿಡುವಿನ ಸಮಯದಲ್ಲಿ ನಟನೆ ಮಾಡುತ್ತೇನೆ'' ಎಂದರು.
''ಉತ್ತರ ಕರ್ನಾಟಕದ ಮತ್ತು ಮೈಸೂರು ರಾಜ-ಮಹಾರಾಜರು ಕುಸ್ತಿಗೆ ಹೆಚ್ಚಿಗೆ ಪ್ರಾಶಸ್ತ್ಯ ನೀಡಿದ್ದರು. ಅದಕ್ಕೆ ಬಾದಾಮಿಯಲ್ಲಿ 'ಗರಡಿ' ಚಿತ್ರದ ಚಿತ್ರೀಕರಣ ಮಾಡುತ್ತಿದ್ದೇವೆ. ಏಳು ವರ್ಷದ ನಂತರ ಸಿನಿಮಾ ನಿರ್ಮಾಣ ಆರಂಭಿಸಿದ್ದೇವೆ. ಯೋಗರಾಜ್ ಭಟ್ ಒಳ್ಳೆಯ ಕಥೆ ಹೇಳಿದರು. 'ಗರಡಿ' ಸಿನಿಮಾದಲ್ಲಿ ಜನಪದ ಶೈಲಿಯ ಕಥೆ ಇದೆ. ಇದರಲ್ಲಿ ನಾನು ಗರಡಿ ಮನೆಯ ಯಜಮಾನ ರಂಗಪ್ಪ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ'' ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
'ಗರಡಿ' ಸಿನಿಮಾದಲ್ಲಿ ಬಿ.ಸಿ.ಪಾಟೀಲ್ ಮಾತ್ರವೇ ಅಲ್ಲ ಸಚಿವ ಎಸ್.ಟಿ.ಸೋಮಶೇಖರ್ ಸಹ ಬಣ್ಣ ಹಚ್ಚಲಿದ್ದಾರೆ. ಸಿನಿಮಾವನ್ನು ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











